ವ್ಯಕ್ತಿ ಕೇಂದ್ರಿತ ಚುನಾವಣೆ ವಿಪರ್ಯಾಸದ ಸಂಗತಿ

22-04-Shiva-3
ರಾಯಚೂರಿನ ಕನ್ನಡ ಭವನದಲ್ಲಿ ಸ್ಲಂ ನಿವಾಸಿಗಳಕ್ರಿಯಾ ವೇದಿಕೆಯಿಂದ ಸೋಮವಾರ ಏರ್ಪಡಿಸಿದ್ದ ಸ್ಲಂ ಜನರ ಮತ ಜಾಗೃತಿ ಜಾಥಾ ಕುರಿತ ಕರಪತ್ರ ಬಿಡುಗಡೆ ಸಮಾರಂಭವನ್ನು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ಮುಖಂಡರಾದ ಕೆ.ಪಿ.ಅನಿಕಲಕುಮಾರ, ನೂರ್ ಜಹಾನ್, ನಾಗರಾಜ, ವೆಂಕಟೇಶ ಭಂಡಾರಿ, ಶರಣಬಸವರೆಡ್ಡಿ, ಮಣಿಕಂಠ, ಬಸವರಾಜ ಹೊಸೂರು ಇದ್ದರು.
Published on

ರಾಯಚೂರು: ದೇಶದ ಅಭಿವೃದ್ಧಿಯ ಆಯಾಮದಲ್ಲಿ ಲೋಕಸಭೆ ಚುನಾವಣೆ ನಡೆಯದೇ ವ್ಯಕ್ತಿ ಕೇಂದ್ರಿತ ಚುನಾವಣೆ ನಡೆಯುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ನಮಗೆ ಬೇಕಿರುವುದು ಗ್ಯಾರಂಟಿಗಳಲ್ಲ, ಸಂವಿಧಾನ ರಕ್ಷಣೆಯ ಗ್ಯಾರಂಟಿ ಬೇಕಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಮತ್ತು ಸ್ಲಂ ಜನಾಂದೋಲನ ಕರ್ನಾಟಕದಿಂದ ಸೋಮವಾರ ಆಯೋಜಿಸಿದ ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ ಜಾಗೃತಿ ಜಾಥಾ ಕುರಿತ ಕರಪತ್ರ ಹಾಗೂ ಸ್ಟಿಕ್ಕರ್ ಬಿಡುಗಡೆ ಮಾಡಿ ಮಾತನಾಡಿದರು.
ಪ್ರಧಾನಿ ಮೋದಿಯ 10 ವರ್ಷದ ಆಡಳಿತದಲ್ಲಿ ಕೊಳಗೇರಿ ನಿವಾಸಿಗಳಿಗೆ ನೀಡಿದ ಕೊಡುಗೆ ಶೂನ್ಯವಾಗಿದೆ. ಸಂವಿಧಾನದ ಹಕ್ಕುಗಳನ್ನು ಕಿತ್ತುಕೊಂಡು ಕಾರ್ಪೋರೇಟ್ ಪರ ಆಡಳಿತ ನಡೆಸಲಾಗಿದೆ. ಬಡವರ ಆದಾಯ ಕಡಿಮೆಯಾದರೂ ಖರ್ಚು ಮಾತ್ರ ಹೆಚ್ಚಾಗುತ್ತಾ ಸಾಗಿದೆ.
ಸಂವಿಧಾನ ಖಾತ್ರಿಗೊಳಿಸಿದ ಆಶ್ರಯ, ಆಹಾರ, ಆರೋಗ್ಯ, ಶಿಕ್ಷಣ, ನಿರುದ್ಯೋಗದಂತಹ ರಾಷ್ಟ್ರೀಯ ಸಮಸ್ಯೆ ನಿವಾರಣೆಗೆ ಗ್ಯಾರಂಟಿ ನೀಡಬೇಕು. ಬಡವರು, ಶ್ರೀಮಂತರ ತಾರತಮ್ಯ ಪ್ರತ್ಯೇಕಿಸುವ ಸೂಚನೆ ನೀಡಲಾಗುತ್ತಿದೆ. ಸಂವಿಧಾನ ಹಕ್ಕು ಖಾತ್ರಿ ನೀಡುವ ಪಕ್ಷಕ್ಕೆ ಬೆಂಬಲಿಸಬೇಕಿದೆ.
ಎಲ್ಲರಿಗೂ ವಸತಿ ಸೌಲಭ್ಯ, ಆರೋಗ್ಯದ ಹಕ್ಕು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆವಾರು, ಉದ್ಯೋಗ ಖಾತ್ರಿ, ಮಹಿಳಾ ಮೀಸಲಾತಿ ಹಾಗೂ ಕಾರ್ಮಿಕರ ಹಕ್ಕುಗಳನ್ನು ಜಾರಿಗೊಳಿಸಲು ಲೋಕಸಭೆ ಚುನಾವಣೆಯಲ್ಲಿ ಅರ್ಹರಿಗೆ ಮತ ಚಲಾಯಿಸಬೇಕು ಎಂದು ಎ.ನರಸಿಂಹಮೂರ್ತಿ ಹೇಳಿದರು.
ಸ್ಲಂ ಕ್ರಿಯಾ ವೇದಿಕೆ ಮುಖಂಡ ಕೆ.ಪಿ.ಅನಿಲಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ಮುಖಂಡರಾದ ನೂರ್ ಜಹಾನ್, ನಾಗರಾಜ, ವೆಂಕಟೇಶ ಭಂಡಾರಿ, ಶರಣಬಸವರೆಡ್ಡಿ, ಮಣಿಕಂಠ, ಬಸವರಾಜ ಹೊಸೂರು, ಪವನಕುಮಾರ ಹಾಗೂ ಸ್ಲಂ ನಿವಾಸಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net