ನಿರಂತರ ಮಳೆಯಿಂದಾಗಿ ಬೆಳೆ ನುಂಗಿದ ಕಳೆ: ಚಿಂತೆಗೀಡಾದ ಸಾವಿರಾರು ರೈತರು

Untitled design (1)
ಯಲಬುರ್ಗಾ ತಾಲೂಕಿನ ಉಚ್ಚಲಕುಂಟಾ ರೈತರ ಜಮೀನಲ್ಲಿ ಬೆಳೆದ ಸಜ್ಜೆ ಬೆಳೆಯಲ್ಲಿ ಕಳೆ ಹೆಚ್ಚಿರುವುದು.
Published on

ಯಲಬುರ್ಗಾ: ಕಳೆದ ವಾರದಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳಲ್ಲಿ ಕಳೆ ಬೆಳೆದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.


ತಾಲೂಕಿನಲ್ಲಿ ಮೆಕ್ಕೆಜೋಳ 20,185 ಹೆಕ್ಟೇರ್, ಸಜ್ಜೆ 12,224 ಹೆ., ಸೂರ್ಯಕಾಂತಿ 310 ಹೆ. ಬಿತ್ತನೆಯಾಗಿದೆ. ಜಮೀನುಗಳಲ್ಲಿ ಬೆಳೆಗಿಂತಲೂ ಕಸ ಎತ್ತರವಾಗಿ ಬೆಳೆದಿದ್ದು, ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ರೈತರಿಗೆ ಕಳೆ ತೆಗೆಸಲು ಕೂಲಿ ಕೊಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಬೆಳೆಯ ಆದಾಯಕ್ಕೂ ಎರಡು ಪಟ್ಟು ಕಳೆ ಕೀಳಲು ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ.

ಮುಂಗಾರು ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದರು. ತಡವಾಗಿ ಮಳೆ ಸುರಿದ ಕಾರಣ ವಿವಿಧ ಬೀಜಗಳ ಬಿತ್ತನೆಯಾಗಿದ್ದು, ಅವು ಈಗ 20 ರಿಂದ 25 ದಿನದ ಬೆಳೆಗಳಾಗಿವೆ. ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಯ ಜತೆಗೆ ವಿಪರೀತ ಕಳೆ ಹೆಚ್ಚಿದೆ. ಎಡೆಕುಂಟೆ ಹೊಡೆಯಲು ಮತ್ತು ಕಳೆ ತೆಗೆಯಲು ಮಳೆ ಬಿಡುವು ನೀಡುತ್ತಿಲ್ಲ. ಇದರಿಂದ ಬಿತ್ತನೆಗೊಂಡ ಹೊಲಗಳು ಕಸದಿಂದ ಮಾರ್ಪಟ್ಟಿವೆ.

ರೈತರ ಜಮೀನಲ್ಲಿ ಬಿತ್ತೆಗೊಂಡ ಸಜ್ಜೆ, ಮೆಕ್ಕೆಜೋಳ ಬೆಳೆಯಲ್ಲಿ ಸತತ ಮಳೆಯಿಂದಾಗಿ ಕಳೆ ವಿಪರೀತ ಬೆಳೆದಿದೆ. ಎಡೆಕುಂಟೆ ಒಡೆಯಲು ಮತ್ತು ಕಳೆ ತೆಗೆಸಲು ಮಳೆ ಬಿಡುವು ಕೊಡುತ್ತಿಲ್ಲ. ಹೀಗೆ ಮಳೆ ಮುಂದುವರೆದರೆ ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗಳನ್ನು ಹರಗುವ ಹಂತಕ್ಕೆ ಬಂದರೂ ಬರಬಹುದು.ಶರಣಪ್ಪ,ರೈತ ಹಿರೇವಂಕಲಕುಂಟಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net