

ಬೆಳಗಾವಿ: ಪ್ರಯತ್ನ, ಪರಿಶ್ರಮವಿಲ್ಲದೆ ಸಾಧನೆ ಸಾಧ್ಯವಿಲ್ಲ. ಮನುಷ್ಯ ಪ್ರಯತ್ನಿಸದೆ ದೇವರ ಮೇಲೆಯೇ ಅವಲಂಬನೆ ಆಗುವುದು ಸಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ತಾಲೂಕಿನ ಹುಂಚಾನಟ್ಟಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೆಳಗಾವಿ-3 ನೂತನ ಯೋಜನಾ ಕಚೇರಿ ಮತ್ತು ಬೆಳಗಾವಿ ಪ್ರಥಮ ವಲಯದ 18,501ನೇ ಸ್ವ-ಸಹಾಯ ಸಂಘ ಉದ್ಘಾಟನೆ ಹಾಗೂ ವಿವಿಧ ಸೌಲಭ್ಯಗಳ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಪ್ರಸ್ತುತ ಸ್ವ-ಸಹಾಯ ಸಂಘಗಳನ್ನು ರಚಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಬೆಳಗಾವಿ ಇಡೀ ಜಿಲ್ಲೆಯಲ್ಲಿ 58 ಸಾವಿರ ಸ್ವ-ಸಹಾಯ ಸಂಘಗಳಾಗಿವೆ. ಈ ಹಿಂದೆ ಇದ್ದ ಮಹಿಳೆಯರ ಬಡತನದ ದಿನಗಳು ಇಂದು ದೂರಾಗುತ್ತಿವೆ. ಧರ್ಮಸ್ಥಳ ಸ್ವ-ಸಹಾಯ ಸಂಘಗಳಲ್ಲಿ 10 ರೂ., 20 ರೂ. ಎತ್ತಿಡುವ ಮೂಲಕ ಪ್ರಸ್ತುತ ಜಿಲ್ಲೆಯಲ್ಲಿ 70 ಕೋಟಿ ರೂ. ಉಳಿತಾಯ ಮಾಡಲಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ ಎಂದರು.
ಎಲ್ಲ ಯೋಜನೆಗಳಿಗೂ ನಮ್ಮಲ್ಲಿ ಸಾಲ ಸೌಲಭ್ಯವಿದೆ. ಯಾವ ಉದ್ದೇಶಕ್ಕೆ ಸಾಲ ಪಡಿದಿರುತ್ತೀರೋ ಅದೇ ಉದ್ದೇಶಕ್ಕೆ ಹಣ ಬಳಸಬೇಕು. ಸಮುದಾಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ದುಶ್ಚಟಗಳ ತೊರೆಯುವಂತಹ ಜನಜಾಗೃತಿ, ಉದ್ಯಮಶೀಲತೆ ತರಬೇತಿ ಹೀಗೆ ಹಲವು ಸಾಮಾಜಿಕ ಕಾರ್ಯಗಳು ಯೋಜನೆ ಮೂಲಕ ನಡೆದಿವೆ ಎಂದರು.
ಸಂಸದೆ ಮಂಗಲ ಅಂಗಡಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದ ಹಳ್ಳಿ, ಹಳ್ಳಿಗಳಲ್ಲಿ ಇದೆ. ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಯೋಜನೆಯೂ ಸಾಕಾರಗೊಳಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯ ಪಾಟೀಲ ಮಾತನಾಡಿ, ಯೋಜನೆಯ ಪರಿಕಲ್ಪನೆಯಿಂದ ಮಹಿಳೆಯರು ಪುರುಷರಿಗೆ ಹಣ ನೀಡುವಂತಹ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ರಾಜ್ಯಾದ್ಯಂತ ಅನೇಕ ರೀತಿಯಲ್ಲಿ ಕುಟುಂಬಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಡಾ. ವೀರೇಂದ್ರ ಹೆಗ್ಗಡೆ ಅವರು ‘ನೋಬೆಲ್ ಪ್ರಶಸ್ತಿ’ಗೆ ಅರ್ಹರು ಎಂದರು.
ಕೆಎಲ್ಇ ಸ್ಥಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಬ್ಯಾಂಕ್ ಆ್ ಮಹಾರಾಷ್ಟ್ರ ವಲಯ ವ್ಯವಸ್ಥಾಪಕ ಸುಚೇತ್ ಡಿಸೋಜಾ, ಯೋಜನೆಯ ಟ್ರಸ್ಟಿ ಡಿ. ಸುರೇಂದ್ರಕುಮಾರ, ದಾವಣಗೆರೆ ವಿವಿ ಕುಲಸಚಿವ ಡಾ.ಶಿವಶಂಕರ ಕೆ., ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಸೊಪ್ಪಿಮಠ, ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಹುಂಚಾನಟ್ಟಿ ಪಂಚ ಕಮಿಟಿ ಅಧ್ಯಕ್ಷ ತುಕಾರಮ ತಾಮ್ರಗುಂಡಿ, ಕಾರ್ಯದರ್ಶಿ ಅಭಯ ಪ್ರಭು, ಗ್ರಾಪಂ ಮಾಜಿ ಅಧ್ಯಕ್ಷ ದೇವೇಂದ್ರ ಪಾಟೀಲ ಇದ್ದರು. ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ಸ್ವಾಗತಿಸಿದರು. ಯೋಜನಾಕಾರಿ ನಾಗರಾಜ ಹದ್ಲಿ ನಿರೂಪಿಸಿದರು. ಜ್ಯೋತಿ ಜೋಳದ ವಂದಿಸಿದರು.