ಇವಿ ವಾಹನಗಳಿಗೆ ಪರ್ಮಿಟ್ ಕಡ್ಡಾಯ

ev vehicles
Published on

ಮೈಸೂರು: ರಾಜ್ಯದಲ್ಲಿ ಸಂಚರಿಸುವ ಬ್ಯಾಟರಿ ಚಾಲಿತ (ಇವಿ), ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಸಾರಿಗೆ ವಾಹನಗಳು ಇನ್ನು ಮುಂದೆ ಕಡ್ಡಾಯವಾಗಿ ರಹದಾರಿ (ಪರ್ಮಿಟ್) ಪಡೆಯಬೇಕು ಎಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಈ ವಾಹನಗಳಿಗೆ ಇದುವರೆಗೆ ಮೋಟಾರು ವಾಹನಗಳ ಕಾಯ್ದೆಯಡಿ ರಹದಾರಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿತ್ತು. ಆದರೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಇದೀಗ ಹೊಸದಾಗಿ ನೋಂದಣಿಯಾಗುವ ಹಾಗೂ ಈಗಾಗಲೇ ನೋಂದಣಿಯಾಗಿರುವ ಬ್ಯಾಟರಿ ಚಾಲಿತ, ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುತ್ತಿರುವ ವಾಹನಗಳು ಶುಲ್ಕ ರಹಿತವಾಗಿ ಪರ್ಮಿಟ್ ಪಡೆದುಕೊಳ್ಳಬೇಕು ಎಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಎಸ್. ಪುಷ್ಪಾ ಜು.1 ರಂದು ಆದೇಶ ಹೊರಡಿಸಿದ್ದಾರೆ.

ಪ್ರಯಾಣಿಕರು ಹಾಗೂ ಸರಕು ಸಾಗಾಣೆ ಉದ್ದೇಶಕ್ಕೆ ಬಳಕೆಯಾಗುವ ಸಾರಿಗೆ ಬಸ್‌ಗಳು, ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳು, ಕಾರುಗಳು ಹಾಗೂ ಇತರೆ ವಾಹನಗಳು ಇನ್ನು ಮುಂದೆ ಪರ್ಮಿಟ್ ಪಡೆಯುವುದು ಕಡ್ಡಾಯವಾಗಿದೆ. ಇತ್ತೀಚೆಗೆ ಸಾಕಷ್ಟು ಪ್ರಮಾಣದಲ್ಲಿ ಬ್ಯಾಟರಿ ಚಾಲಿತ ರಿಕ್ಷಾಗಳು ರಸ್ತೆಗೆ ಇಳಿದಿವೆ. ಆದರೆ, ಇವುಗಳಿಗೆ ಪರ್ಮಿಟ್ ಇಲ್ಲದ ಹಿನ್ನೆಲೆಯಲ್ಲಿ ಬಾಡಿಗೆ ಉದ್ದೇಶಕ್ಕೆ ಬಳಕೆ ಮಾಡಲು ಅವಕಾಶ ನೀಡಬಾರದು ಎಂದು ಆಟೋ ಚಾಲಕರ ಸಂಘದವರು ನಿರಂತರವಾಗಿ ಒತ್ತಾಯಿಸುತ್ತಾ ಬರುತ್ತಿದ್ದರು. ಇದೀಗ ಸರ್ಕಾರ ಪರ್ಮಿಟ್ ಪಡೆಯಲು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಎಳೆದಂತೆ ಆಗಿದೆ.

ರಾಜ್ಯದಲ್ಲಿ 5.88 ಲಕ್ಷ ಹಸಿರು ವಾಹನಗಳು ನೋಂದಣಿಯಾಗಿವೆ. ಸರ್ಕಾರ ಹಾಗೂ ಖಾಸಗಿ ವಲಯದಲ್ಲಿ ಒಟ್ಟು 1868 ಬಸ್ ಗಳು ನೋಂದಣಿಯಾಗಿವೆ. ಪ್ರಯಾಣಿಕರ ಆಟೋ ರಿಕ್ಷಾ ಹಾಗೂ ಗೂಡ್ಸ್ ವಾಹನ ಸೇರಿದಂತೆ ಒಟ್ಟು 27,888 ಹಸಿರು ವಾಹನಗಳು ನೋಂದಣಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net