ಕರಪತ್ರ, ಬ್ಯಾನರ್, ಪೋಸ್ಟರ್ ಮುದ್ರಿಸಲು ಅನುಮತಿ ಕಡ್ಡಾಯ

21 ckm 7
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್ ನೇತೃತ್ವದಲ್ಲಿ ಮುದ್ರಣ ಮಾಲೀಕರು, ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಹಾಗೂ ಲಿಕ್ಕರ್ ಶಾಪ್ ಮಾಲೀಕರೊಂದಿಗೆ ಸಭೆ ನಡೆಯಿತು. ಎಸ್‌ಪಿ ವಿಕ್ರಮ್ ಅಮಟೆ, ಎಡಿಸಿ ನಾರಾಯಣ ರಡ್ಡಿ ಕನಕರಡ್ಡಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಅಭ್ಯರ್ಥಿಗಳ ಕರಪತ್ರ, ಪೋಸ್ಟರ್ಸ್ ಮತ್ತು ಬ್ಯಾನರ್ ಗಳನ್ನು ಮುದ್ರಿಸುವ ಮೊದಲು ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಡಿಸಿ ಹಾಗೂ ಜಿಲ್ಲಾಚುನಾವಣಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮುದ್ರಣ ಮಾಲೀಕರು, ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಹಾಗೂ ಲಿಕ್ಕರ್ ಶಾಪ್ ಮಾಲೀಕರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ರೀತಿಯ ಅಪಪ್ರಚಾರ, ಸುಳ್ಳು ಮಾಹಿತಿ, ಕೋಮುಗಲಭೆ ಸೃಷ್ಟಿಸುವಂತಹ ಕರಪತ್ರ, ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಮುದ್ರಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಮುದ್ರಕರು ಪಾಂಪ್ಲೆಟ್‌ಗಳು, ಪೋಸ್ಟರ್‌ಗಳನ್ನು ಮುದ್ರಿಸುವ ಮೊದಲು ಪ್ರಕಾಶನದ ಗುರುತಿನ ಬಗ್ಗೆ ದೃಢೀಕರಣವನ್ನು ಇಬ್ಬರು ಅನುಮೋದಕರೊಂದಿಗೆ ಪಡೆದಿರಬೇಕು. ಗುರುತಿನ ದೃಢೀಕರಣವಿಲ್ಲದೆ ಮುದ್ರಣ ಮಾಡಬಾರದು. ಕರಪತ್ರದ ಕೆಳಗೆ ಮುದ್ರಕರ ಹೆಸರು ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ದಾಖಲೆ ಇಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಣ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾವು ಮುದ್ರಿಸುವ ಒಂದು ಪ್ರತಿಯ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲೀಕರು, ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಯಾವುದೇ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮುದ್ರಣವಾಗುವ ಕರಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನು ಹಾಕಬಾರದು ಎಂದು ಸೂಚಿಸಿದರು.
ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಮಾಲೀಕರು ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಸಮಾರಂಭಗಳಿಗೆ ಅವಕಾಶ ನೀಡಬಾರದು. ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಗಳಿಗೆ ವಾಸ್ತವ್ಯಕ್ಕೆ ಬರುವವರ ಮಾಹಿತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಗುಂಪುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯಕ್ಕೆ ಬಂದರೆ ಜಿಲ್ಲಾ ಚುನಾವಣಾಧಿಕಾರಿಗೆ ಮಾಹಿತಿ ನೀಡಬೇಕು. ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಆಳವಡಿಸಬೇಕು. ಆ ದಿನದ ವ್ಯಾಪಾರದ ವಹಿವಾಟುಗಳನ್ನು ದಾಖಲೆಗಳಲ್ಲಿ ನಮೂದಿಸಬೇಕು ಎಂದು ತಾಕೀತು ಮಾಡಿದರು.
ಮದ್ಯ ಮಾರಾಟಗಾರರು ಪ್ರತಿದಿನದ ವಹಿವಾಟನ್ನು ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಅನಿಧಿಕೃತವಾಗಿ ಮದ್ಯ ಮಾರಾಟ ಮಾಡುವುದು ಕಂಡು ಬಂದರೆ ಅಂಥ ಮದ್ಯದಂಗಡಿ ವಿರುದ್ಧ ಕ್ರಮ ಜರುಗಿಸಲಾಗುವುದು. ಯಾರೂ ಸಹ ೫೦ ಸಾವಿರ ರೂ. ಗಿಂತ ಹೆಚ್ಚಿನ ಹಣವನ್ನು ಕೊಂಡೊಯ್ಯುವಂತಿಲ್ಲ. ಹಣಕ್ಕೆ ವ್ಯವಹಾರದ ರಸೀದಿ, ಪರವಾನಗಿ ಪತ್ರವನ್ನು ಕಡ್ಡಾಯವಾಗಿ ತೋರಿಸಬೇಕು. ದಾಖಲೆಗಳಿಲ್ಲದೆ ಹಣವನ್ನು ಸಾಗಿಸುತ್ತಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.
ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಅನುಸಾರ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಎಸ್‌ಪಿ ವಿಕ್ರಮ್ ಅಮಟೆ, ಎಡಿಸಿ ನಾರಾಯಣ ರಡ್ಡಿ ಕನಕರಡ್ಡಿ, ಅಬಕಾರಿ ಉಪ ಆಯುಕ್ತೆ ಸಿ.ಸೆಲೀನಾ, ಪ್ರವಾಸೋದ್ಯವ ಇಲಾಖೆ ಸಹಾಯಕ ನಿರ್ದೇಶಕ ಲೋಹಿತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಿಂಟಿಂಗ್ ಪ್ರೆಸ್ ಮಾಲೀಕರು, ಮದ್ಯದಂಗಡಿ ಮಾಲೀಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net