ಸಿಆರ್‌ಜಡ್‌ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅನುಮತಿ-ಡಿಸಿ ಗಂಗೂಬಾಯಿ ಮಾನಕರ್‌

Gangubayi Mankar
Published on

ಕಾರವಾರ:ಜಿಲ್ಲೆಯ ಸಿಆರ್‌ಜಡ್ ವ್ಯಾಪ್ತಿಯ 4 ನದಿಗಳಲ್ಲಿ ಮರಳು ತೆಗೆಯಲು ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಕೆಸಿಜಡ್‌ಎಂಎ)ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ (ಡಿಸಿ) ಗಂಗೂಬಾಯಿ ಮಾನಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಿಆರ್‌ಜಡ್ ವ್ಯಾಪ್ತಿಯ ಕಾಳಿ, ಗಂಗಾವಳಿ, ಅಘನಾಶಿನಿ ಹಾಗೂ ಶರಾವತಿ ನದಿಯ ಆಯ್ದ ಭಾಗಗಳಲ್ಲಿ ಸುರತ್ಕಲ್ ಎನ್‌ಐಟಿಕೆ ತಜ್ಞರು ಮರಳು ದಿಣ್ಣೆಗಳನ್ನು ಗುರುತಿಸಿದ್ದರು. ವರದಿ ಆಧರಿಸಿ ಪ್ರಸ್ತಾವನೆ ಕಳಿಸಲಾಗಿತ್ತು. ನದಿಗಳಲ್ಲಿ ಮರಳು ತುಂಬಿ ಉಂಟಾಗಬಹುದಾದ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಅದನ್ನು ತೆರವು ಮಾಡಲು ಕೆಸಿಜಡ್‌ಎಂಎ ಅನುಮತಿ ನೀಡಿದೆ. ಆದರೆ, ಅವುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಬಹುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈ ಕುರಿತು ಶೀಘ್ರ ಜಿಲ್ಲಾ ಮಟ್ಟದ ಮರಳು ಉಸ್ತುವಾರಿ ಸಮಿತಿ ಹಾಗೂ ಸಿಆರ್‌ಜಡ್ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

52 ಸಾವಿರ ಹೆಕ್ಟೇರ್ ಬೆಳೆ ಹಾನಿ-ಡಿಸಿ ಮಾಹಿತಿ:

ಜಿಲ್ಲೆಯಲ್ಲಿ ಶೇ. 18 ರಷ್ಟು ಮಳೆಯ ಕೊರತೆಯಾಗಿದ್ದು 52,582 ಹೆಕ್ಟೇರ್ ಬೆಳೆಗೆ ಶೇ. 33 ಕ್ಕಿಂತ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯ 9 ತಾಲೂಕುಗಳನ್ನು ಬರ ಪೀಡಿತ ಎಂದು ಗುರುತಿಸಲಾಗಿದೆ. ಬೆಳೆ ಹಾನಿಗೆ ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದರು. ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಸುರಿದ ಅತಿವೃಷ್ಟಿಯಿಂದ 185.91 ಕೋಟಿ ರೂ. ಸರ್ಕಾರಿ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿದ್ದು, ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದುವರೆಗೂ ಯಾವುದೇ ಪರಿಹಾರ ಬಂದಿಲ್ಲ. ಇದುವರೆಗೆ ಡಿಸಿ ಪಿಡಿ ಖಾತೆಯಿಂದ ತುರ್ತು 416 ಕಾಮಗಾರಿಗಳಿಗಾಗಿ 7.67 ಕೋಟಿ ರೂ. ವಿಪತ್ತು ಪರಿಹಾರ ನಿಽಯ ಹಣವನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದರು.
ಮನೆಗಳಿಗೆ ತೆರಳಿ ಮತದಾರರ ಪಟ್ಟಿ:
ಜಿಲ್ಲೆಯಲ್ಲಿ ಇವಿಎಂ, ವಿವಿ ಪ್ಯಾಟ್ ಯಂತ್ರಗಳ ಮೊದಲ ಹಂತದ ತಾಂತ್ರಿಕ ಪರಿಶೀಲನೆ ಮುಕ್ತಾಯವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು, ಮತಗಟ್ಟೆ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ನಾಗರಿಕರು ಸಹಕಾರ ನೀಡಬೇಕು. 2024 ರ ಜನವರಿ 1 ಕ್ಕೆ 18 ವರ್ಷ ತುಂಬುವ ಮತದಾರರ ಮಾಹಿತಿಯನ್ನೂ ನಾವು ಈಗಲೇ ಪಡೆದುಕೊಳ್ಳಲಿದ್ದೇವೆ ಎಂದರು. ಸದ್ಯ ಜಿಲ್ಲೆಯಲ್ಲಿ 11,94,714 ಮತದಾರರಿದ್ದಾರೆ ಎಂದು ತಿಳಿಸಿದರು.

82 ಅಭ್ಯರ್ಥಿಗಳ ಪಟ್ಟಿ-ಡಿಸಿ ಗಂಗೂಬಾಯಿ:

ಜಿಲ್ಲೆಯ 101 ಗ್ರಾಮ ಲೆಕ್ಕಿಗ(ಗ್ರಾಮ ಆಡಳಿತ ಅಧಿಕಾರಿ) ನೇರ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಅಂತಿಮ ಪಟ್ಟಿ ಪ್ರಕಟವಾದ ನಂತರ ಸಿಂಧುತ್ವ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಲಾಗಿತ್ತು. ಎಲ್ಲ ಪ್ರಮಾಣಪತ್ರಗಳನ್ನು ಹಾಜರುಪಡಿಸಿದ 82 ಅಭ್ಯರ್ಥಿಗಳ ಹೆಸರನ್ನು ವೆಬ್‌ಸೈಟ್‌ನಲ್ಲಿ ಇಂದು ಪ್ರಕಟಿಸಲಾಗಿದೆ. ಶೀಘ್ರ ಅವರೆಲ್ಲ ಕರ್ತವ್ಯಕ್ಕೆ ಹಾಜರಾಗಲಿದ್ದು, ಕಂದಾಯ ಇಲಾಖೆಯ ಕಾರ್ಯನಿರ್ವಹಣೆಗೆ ಅನುಕೂಲವಾಗಲಿದೆ ಎಂದರು.

ಜನತಾ ದರ್ಶನ ಸ್ಥಳ ಬದಲು-ಡಿಸಿ

ಸೆ.25 ರಂದು ಸಾಗರ ದರ್ಶನ ಹಾಲ್‌ನಲ್ಲಿ ಜನತಾ ದರ್ಶನ ಮಾಡಿ, ಸಾರ್ವಜನಿಕರ ಸಮಸ್ಯೆ ಆಲಿಸಲು ತೀರ್ಮಾನಿಸಲಾಗಿದೆ. ವಿವಿಧ ಇಲಾಖೆ ಅಽಕಾರಿಗಳು ಹಾಜರಿರುವರು. ಅಲ್ಲದೆ, ಸಹಾಯವಾಣಿ ಕೇಂದ್ರ ತೆರೆಯಲಾಗುವುದು. ಬಂದ ಎಲ್ಲ ಅರ್ಜಿಗಳನ್ನು ಸ್ಕ್ಯಾನ್‌ ಮಾಡಿ ಸಂಬಂಧಪಟ್ಟ ಇಲಾಖೆಗೆ ರವಾನೆ ಮಾಡಿ ಕಾಲಮಿತಿಯಲ್ಲಿ ಅದನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮುಂದೆ ಪ್ರತಿ 15 ದಿನಕ್ಕೊಮ್ಮೆ ಒಂದೊAದು ತಾಲೂಕಿನಲ್ಲಿ ಜನತಾ ದರ್ಶನ ನಡೆಸಲಿದ್ದೇನೆ. ಎಸಿಗಳು, ತಹಸೀಲ್ದಾರರೂ ನಡೆಸಲು ಸೂಚಿಸಲಿದ್ದೇನೆ ಎಂದರು.

ಡಿಸಿ ಹೇಳಿದ್ದು

  • *ಜಿಲ್ಲೆಯಲ್ಲಿ ಇದುವರೆಗೆ 3,46,835 ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ. ಹಂತ ಹಂತವಾಗಿ ಹಣ ಜಮಾ ಮಾಡುವ ಪ್ರಕ್ರಿಯೆ ನಡೆದಿದೆ.
  • *ಗೃಹ ಲಕ್ಷ್ಮಿ ಯೋಜನೆ ನೋಂದಣಿಯಲ್ಲಿ ಶೇ.87.33 ರಷ್ಟು ಪ್ರಗತಿ ಸಾಧಿಸಿ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ 2 ನೇ ಸ್ಥಾನದಲ್ಲಿದೆ.
  • *ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3.60 ಲಕ್ಷ (ಶೇ.89.96)ಮನೆಗಳಿಂದ ನೋಂದಣಿ
  • *ಅನ್ನ ಭಾಗ್ಯ ಯೋಜನೆಯಡಿ ಸಕ್ರಿಯ ಬ್ಯಾಂಕ್ ಖಾತೆ ಹಾಗೂ ಆಧಾರ ಜೋಡಣೆ ಆಗಿರುವ 2.52 ಲಕ್ಷ ಕುಟುಂಬಗಳಿಗೆ 15.27 ಕೋಟಿ ರೂ. ಹಣ ವರ್ಗಾವಣೆ
  • *ಶಕ್ತಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಪ್ರತಿನಿತ್ಯ 2.50 ಲಕ್ಷ ಜನರ ಪ್ರಯಾಣ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net