

ಕೋಲಾರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ಉದ್ಯಾನವನ ಸಮೀಪದ ಫುಟ್ಪಾತ್ ಮೇಲೆ ನಂದಿನಿ ಪಾರ್ಲರ್ ನಿರ್ಮಾಣ ಮಾಡಲಾಗುತ್ತಿತ್ತು, ಇದನ್ನು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಬೆಳ್ಳಂ ಬೆಳಗ್ಗೆ ನಗರ ಪ್ರದಕ್ಷಿಣೆ ಮಾಡಿ ಸ್ವಚ್ಛತೆ, ಫುಟ್ಪಾತ್ ಒತ್ತುವರಿ ಕುರಿತು ವೀಸಿ, ಫುಟ್ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದರೂ ಸಹ, ನಗರಸಭೆಯ ಅಧಿಕಾರಿಗಳು ಮೌನಕ್ಕೆ ಒಳಗಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ. ಇನ್ನಾದರೂ ನಗರಸಭೆ ಅಧಿಕಾರಿಗಳು ನಂದಿನಿ ಪಾರ್ಲರನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಫುಟ್ಪಾತ್ ಒತ್ತುವರಿ ಆಗಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಒತ್ತುವರಿಯಿಂದ ಜನ ರಸ್ತೆಯ ಮೇಲೆ ಓಡಾಡುವ ಪರಸ್ಥಿತಿ ಎದುರಾಗಿದೆ. ನಗರ ಪ್ರದಣೆ ಸಮಯದಲ್ಲಿ ಫುಟ್ಪಾತ್ ಮೇಲಿನ ಅಂಗಡಿಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು ಎಂದು ಸೂಚಿಸಿದ್ದರೂ ಸಹ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಉದ್ಯಾನವನಕ್ಕೆ ಬೆಳಗ್ಗೆ, ಸಂಜೆ ನೂರಾರು ಮಂದಿ ವಾಯು ವಿಹಾರಕ್ಕೆ ಎಂದು ನಗರ ವಿವಿಧೆಡೆಯಿಂದ ಬರುತ್ತಾರೆ. ಅವರೆಲ್ಲ ಪಾರ್ಕ್ ಎದುರಿಗೆನೇ ವಾಹನಗಳನ್ನು ನಿಲ್ಲಿಸಿಕೊಳ್ಳುತ್ತಾರೆ. ಇದೀಗ ಪಾರ್ಲರ್ ನಿರ್ಮಾಣ ಮಾಡಿರುವುದರಿಂದ ವಾಹನಗಳ ನಿಲುಗಡೆಗೂ ಬಹಳಷ್ಟು ತೊಂದರೆಯಾಗಲಿದೆ.