

ಮಂಡ್ಯ: ನಗರದಲ್ಲಿ ನಡೆದಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿನ ಸವಿ ನೆನಪಿಗಾಗಿ ಕನ್ನಡ ಭವನ ನಿರ್ಮಿಸಲು ಹಾಗೂ ವಿವಿಧ ಮೂಲಗಳಿಂದ ಸಂಗ್ರಹ ಮಾಡಿಕೊಂಡು ಬಳಕೆಯಾಗದೇ ಉಳಿದಿದ್ದ 2.18 ಕೋಟಿ ರೂ ಬಳಕೆ ಮಾಡಿಕೊಳ್ಳಲು ಷರತ್ತುಗಳೊಂದಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ, ಅನುಮತಿ ನೀಡಿರುವ ಉದ್ದೇಶಕ್ಕೇ ಬಳಸಬೇಕು. ಅಂದಾಜು ವೆಚ್ಚ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಹೊರಡಿಸುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾಮಗಾರಿಯನ್ನು ಅನುದಾನದ ಮಿತಿಯಲ್ಲಿಯೇ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದ್ದಾರೆ.
ಸಮ್ಮೇಳನಕ್ಕೆ ರಾಜ್ಯ ಸರ್ಕಾರ ಮೂರು ಕಂತುಗಳಲ್ಲಿ 30 ಕೋಟಿ ರೂ ಅನುದಾನ ನೀಡಿತ್ತು. ಮಳಿಗೆಗಳು, ಪ್ರತಿನಿಧಿಗಳ ನೋಂದಣಿ ಶುಲ್ಕ ಹಾಗೂ ಎಚ್‌ಆರ್‌ಎಂಎಸ್ ನೌಕರರನ್ನು ಹೊರತುಪಡಿಸಿ ಸರ್ಕಾರಿ ನೌಕರರ ಒಂದು ದಿನದ ವೇತನದ ದೇಣಿಗೆ ಹಾಗೂ ಇತರೆ ದೇಣಿಗೆಗಳಿಂದ ಸಂಗ್ರಹಿಸಿದ್ದ 2.18 ಕೋಟಿ ರೂ ಉಳಿಕೆಯಾಗಿತ್ತು. ಈ ಹಣವನ್ನು ಕನ್ನಡ ಭವನ ನಿರ್ಮಾಣಕ್ಕೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸರ್ಕಾರವನ್ನು ಕೋರಿದ್ದರು.