

ಗುಂಡ್ಲುಪೇಟೆ: ತಾಲೂಕಿನ ಗುರುವಿನಪುರ ಗ್ರಾಮದ ಸಮೀಪದಲ್ಲಿ ಚೆಂಡು ಹೂ ಘಟಕ ಸ್ಥಾಪನೆಗೆ ಕೋರಿದ್ದ ಅನುಮತಿಯನ್ನು ಜಿಲ್ಲಾಡಳಿತ ತಿರಸ್ಕರಿಸಿದೆ.
ಬಲಚವಾಡಿ ಗ್ರಾಮಪಂಚಾಯಿತಿ ಅಧಿಕಾರಿ ಹಾಗೂ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಾರಿಗೋಲ್ಡ್ ಫ್ಲವರ್ ಮತ್ತು ಗ್ರೀನ್ ಬನಾನ ಪೌಡರ್ ಇಂಡಸ್ಟ್ರೀಸ್‌ನವರು ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನ ಗುರುವಿನಪುರ ಗ್ರಾಮದ ಸಮೀಪದಲ್ಲಿ ಅರಿಶಿಣ ಸಂಸ್ಕರಣಾ ಘಟಕ ನಡೆಸುತ್ತಿದ್ದಾರೆ. ತಾಲೂಕು ಹಾಗೂ ಜಿಲ್ಲೆಯ ರೈತರಿಂದ ಖರೀದಿಸಿದ ಅರಿಶಿಣದಿಂದ ಕರ್ಕೂಮಿನ್ ಸೇರಿದಂತೆ ನಾನಾ ಉಪ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.
ಇದರೊಂದಿಗೆ ತಾಲೂಕಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಚೆಂಡುಮಲ್ಲಿಗೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಲಕ್ಕೂರು ಗ್ರಾಮದ ಸರ್ವೇ ನಂಬರ್ 216/1, 216/2ರಲ್ಲಿ ಒಂದು ಎಕರೆ 38 ಗುಂಟೆ ಜಮೀನಿನಲ್ಲಿ ಚೆಂಡು ಹೂ ಸಂಸ್ಕರಣೆ ಘಟಕ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಜಿಲ್ಲಾಡಳಿತದಿಂದ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದರು.
ಆದರೆ ವಿಷಯ ತಿಳಿದ ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳವರು ಚೆಂಡು ಹೂ ಸಂಸ್ಕರಣೆ ಘಟಕ ಆರಂಭವಾದರೆ ಕಲುಷಿತ ಪರಿಸರದಿಂದ ಜನ, ಜಾನುವಾರುಗಳಿಗೆ ಮಾರಕವಾಗಲಿದೆ ಎಂದು ತೀವ್ರ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಸ್ಥಳೀಯ ಬಲಚವಾಡಿ ಪಂಚಾಯಿತಿ ಕಳೆದ ಜೂ. 20ರಂದು ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಯಾವುದೇ ಕಾರಣಕ್ಕೂ ಚೆಂಡು ಹೂ ಸಂಸ್ಕರಣೆ ಘಟಕಕ್ಕೆ ಅವಕಾಶ ನೀಡಬಾರದೆಂದು ತಿರ್ಮಾನಿಸಲಾಗಿತ್ತು. ಜತೆಗೆ ಹಾಗೂ ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚೆಂಡು ಹೂ ಸಂಸ್ಕರಣೆ ಘಟಕಕ್ಕೆ ಅವಕಾಶ ನೀಡಬಾರದೆಂದು ವರದಿ ನೀಡಿರುವ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದರು.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್ ಚೆಂಡು ಹೂ ಸಂಸ್ಕರಣೆ ಘಟಕ ಸ್ಥಾಪನೆಗೆ ಅನುಮತಿ ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ.