

ಹನೂರು : ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಆಯೋಜಕರು ಏಕಗವಾಕ್ಷಿ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆದು ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ಅಗತ್ಯ ಕ್ರಮವಹಿಸಬೇಕು ಎಂದು ತಹಸೀಲ್ದಾರ್ ಗುರುಪ್ರಸಾದ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಸಭಾಂಗಣದಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಸಂಬಂಧ ಮಂಗಳವಾರ ಆಯೋಜಿಸಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಬಂಧ ಗಣೇಶೋತ್ಸವ ಆಯೋಜಕರಿಗೆ ಅನುಮತಿ ನೀಡುವ ಸಲುವಾಗಿ ಏಕಗವಾಕ್ಷಿ ಸಮಿತಿಯನ್ನು ಜಾರಿಗೆ ತಂದಿದೆ. ಆದ್ದರಿಂದ ಸರ್ಕಾರದ ಆದೇಶವನ್ನು ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹೀಗಾಗಿ ಆಯೋಜಕರು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದು ಮೂರ್ತಿ ಪ್ರತಿಷ್ಠಾಪನೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಜತೆಗೆ ಹೈಟೆನ್ಸನ್ ವಿದ್ಯುತ್ ತಂತಿ ಹಾದು ಹೋಗಿರುವ ಮಾರ್ಗದಲ್ಲಿ ಮೂರ್ತಿ ಸ್ಥಾಪನೆ ಹಾಗೂ ಮೆರವಣಿಗೆಗೆ ಅವಕಾಶವಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾಪಂ ಇಒ ಉಮೇಶ್, ಇನ್ಸ್‌ಪೆಕ್ಟರ್ ಶಶಿಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್‌ನಾಯಕ್, ಪ.ಪಂ. ಆರೋಗ್ಯಾಧಿಕಾರಿ ಭೂಮಿಕಾ, ಪಿಡಿಒ ಮಾದೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಶೇಷಣ್ಣ, ಕಾವ್ಯಾ ಹಾಗೂ ಇತರರು ಇದ್ದರು.