ಅಹೋರಾತ್ರಿ ಕಂಬಳಕ್ಕೆ ಅವಕಾಶ

Kambala
Published on

ಬಂಟ್ವಾಳ: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಸಮಯದ ಮಿತಿ ನಿಗದಿಪಡಿಸುವುದು ಸರಿಯಲ್ಲ. ಕರೊನಾ ರಾತ್ರಿ 10 ಗಂಟೆಯವರೆಗೆ ಬರುತ್ತದೆ, ಬಳಿಕ ಬರುವುದಿಲ್ಲ ಎನ್ನುವ ಮೂಢನಂಬಿಕೆ ಬೇಡ. ಕಂಬಳ ಬೆಳಗ್ಗಿನವರೆಗೆ ನಡೆಸಲು ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಮಹಿಷಮರ್ದಿನಿ ಕಂಬಳ ಸಮಿತಿ ವತಿಯಿಂದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ಆಯೋಜಿಸಲಾದ ವೀರ-ವಿಕ್ರಮ ಜೋಡುಕರೆ ಕಂಬಳದಲ್ಲಿ ಮಾತನಾಡಿದರು. ಸಚಿವರ ಸೂಚನೆ ಹಿನ್ನೆಲೆಯಲ್ಲಿ ಹೊಕ್ಕಾಡಿಗೋಳಿ ಕಂಬಳ ರಾತ್ರಿಯೂ ಮುಂದುವರಿಯಿತು. ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರರಾದ ಶ್ರೀನಿವಾಸ ಗೌಡ, ಸುರೇಶ್ ಎಂ.ಶೆಟ್ಟಿ, ಪ್ರವೀಣ್ ಕೋಟ್ಯಾನ್ ಅವರನ್ನು ಸಚಿವರು ಸನ್ಮಾನಿಸಿದರು.

ಶಾಸಕರಾದ ರಾಜೇಶ್ ನಾಕ್, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಕುಮಾರ್ ಬಂಗಾರಪ್ಪ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ, ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಶಶಿಕಾಂತ್ ಸವದಿ, ಧೀರಜ್ ಪ್ರಸಾದ್, ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಭಟ್, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಸ್ವಾಗತಿಸಿದರು. ಗುಣಪಾಲ ಕಡಂಬ ಪ್ರಾಸ್ತಾವಿಕ ಮಾತನಾಡಿದರು.

ಕನೆಹಲಗೆ 4, ಹಗ್ಗ ಹಿರಿಯ 15, ಹಗ್ಗ ಕಿರಿಯ 18, ಅಡ್ಡ ಹಲಗೆ 7, ನೇಗಿಲು ಹಿರಿಯ 26, ನೇಗಿಲು ಕಿರಿಯ 97 ಸಹಿತ 167 ಜೊತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು.

11 ಲಕ್ಷ ರೂ. ಘೋಷಣೆ

ಕಂಬಳ ಕ್ರೀಡೆಗೆ ಹೆಚ್ಚಿನ ಪ್ರಚಾರ ನೀಡಿ ಅದನ್ನು ಅಂತಾರಾಷ್ಟ್ರೀಯ ಕ್ರೀಡೆಯಾಗಿ ರೂಪಿಸಬೇಕಾಗಿದೆ. ಇದಕ್ಕೆ ಸರ್ಕಾರದ ಬೆಂಬಲವೂ ಇದೆ ಎಂದು ಲಕ್ಷ್ಮಣ ಸವದಿ ಹೇಳಿದರು. ಕೋಣದ ಜತೆ ಓಡುವುದು ಸಾಮಾನ್ಯ ಅಲ್ಲ. ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಸಮಾನರಾದ ಕ್ರೀಡಾಪಟುಗಳು ಕಂಬಳ ಕ್ಷೇತ್ರದಲ್ಲಿದ್ದಾರೆ. ಕಂಬಳದ ಓಟಗಾರರನ್ನು ಸನ್ಮಾನಿಸುವ ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ ಎಂದು ಸಚಿವ ಸವದಿ ಹೇಳಿದರು. ಲಕ್ಷಾಂತರ ಜನರು ವೀಕ್ಷಿಸುವ ಕಂಬಳವು ಸರ್ಕಾರ ಹಾಗೂ ಅಧಿಕಾರಿಗಳಿಗೆ ನಿರಾಸೆ ಮಾಡುವುದಿಲ್ಲ. ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಮುಂದಿನ ಕಂಬಳಕ್ಕೆ ಸರ್ಕಾರದಿಂದ ಸಹಾಯಧನ ಕೊಡಿಸುವುದಾಗಿ ಭರವಸೆ ನೀಡಿದ ಸಚಿವರು, ವೈಯಕ್ತಿಕವಾಗಿ 11 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net