

ನಾಗಮಂಗಲ: ಹೇಮಾವತಿ ಯೋಜನಾ ವ್ಯಾಪ್ತಿಯಲ್ಲಿ ನಾಗಮಂಗಲ ಶಾಖಾ ನಾಲೆಯು ಸರಪಳಿ 0.00 ಕಿ.ಮೀ ಇಂದ 78.46 ಕಿ.ಮೀ ವರೆಗೆ 560 ಕೋಟಿ ರೂಪಾಯಿ ಅಂದಾಜು ಮೊತ್ತದ ಮರುವಿನ್ಯಾಸ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದಾಗಿ ಮೂರು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.
ನಾಗಮಂಗಲ ಶಾಖಾ ನಾಲೆಯು ಮೂಲ ಯೋಜನಾ ವರದಿಯಂತೆ 78.46 ಕಿ.ಮೀ ಉದ್ದವಿದೆ. ಈ ನಾಲೆಯನ್ನು 1994ರಲ್ಲಿ ಪ್ರಾರಂಭಿಸಿ 2004ರಲ್ಲಿ ಪೂರ್ಣಗೊಳಿಸಲಾಗಿದೆ. ಅಂತೆಯೇ ನಾಲೆಯಲ್ಲಿ ನೀರನ್ನು ಹರಿಸಲಾಗುತ್ತಿದೆ. ಪ್ರಸ್ತುತ 717 ಕ್ಯೂಸೆಕ್ ಸಾಮರ್ಥ್ಯವಿದ್ದು, ಸುಮಾರು 1,21,197 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಒದಗಿಸಲಾಗುತ್ತದೆ. ಇದರ ಜತೆಗೆ 53 ಕ್ಯೂಸೆಕ್ ನೀರನ್ನು ಕುಡಿಯುವ ನೀರಿನ ಯೋಜನೆಗಳಿಗೆ ಒದಗಿಸಲಾಗಿದ್ದು, ಒಟ್ಟಾರೆ 770 ಕ್ಯೂಸೆಕ್‌ಗೆ ಈ ನಾಲೆಯನ್ನು ಪುನರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಹಾಲಿ ನಾಲೆ ತಿಪಟೂರು ತಾಲೂಕಿನಲ್ಲಿ 20.39 ಕಿ.ಮೀ ಇದೆ. ಜತೆಗೆ ಸುಮಾರು 4,177 ಎಕರೆ ಅಚ್ಚುಕಟ್ಟು ಪ್ರದೇಶ, ತುರುವೇಕೆರೆ ತಾಲೂಕಿನಲ್ಲಿ 25.01 ಕಿ.ಮೀ ಇದ್ದು, ಈ ಭಾಗದಲ್ಲಿ 60,274 ಎಕರೆ ಅಚ್ಚುಕಟ್ಟು ಪ್ರದೇಶ ಹಾಗೂ ನಾಗಮಂಗಲ ತಾಲೂಕಿನಲ್ಲಿ 30.56 ಕಿ.ಮೀ ಇದ್ದು, ಈ ವ್ಯಾಪ್ತಿಗೆ 56,746 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಅಂತೆಯೇ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಾಲೆಯು 2.50 ಕಿ.ಮೀ ಉದ್ದವಿದೆ. ಒಟ್ಟಾರೆ 78.46 ಕಿ.ಮೀ ಇದ್ದು, ಸುಮಾರು 1,21,197 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ.
ಈ ನಾಲೆಯನ್ನು ಸುಮಾರು 20 ರಿಂದ 30 ವರ್ಷದ ಹಿಂದೆ ನಿರ್ಮಿಸಲಾಗಿದೆ. ಆದರೆ ನೀರಿನ ಸತತ ಹರಿಯುವಿಕೆಯಿಂದ ನಾಲೆಯ ದುರ್ಬಲ ಭಾಗಗಳಲ್ಲಿ ಕೊರಕಲು ಉಂಟಾಗಿದೆ. ಜತೆಗೆ ನಾಲೆಯ ಹಲವಾರು ಭಾಗಗಳಲ್ಲಿ ಲೈನಿಂಗ್ ಹಾಳಾಗಿದೆ. ಡೀಪ್ ಕಟ್ ಭಾಗ ಮತ್ತು ಕಟ್ ಕವರ್ ಡಕ್‌ಗಳನ್ನು ಪರಿಷ್ಕೃತ ಸಾಮರ್ಥ್ಯಕ್ಕೆ ವಿನ್ಯಾಸಗೊಳಿಸಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಪ್ರಸ್ತುತ ಸುಸ್ಥಿತಿಯಲ್ಲಿರುವ ಸುಮಾರು 4.20 ಕಿ.ಮೀ ಉದ್ದದ ಲೈನಿಂಗ್ ಅನ್ನು ಉಳಿಸಿಕೊಂಡು, ಹಾಳಾಗಿರುವ ಉಳಿದ ಭಾಗಗಳನ್ನು ತೆಗೆದು ಹೊಸದಾಗಿ ಲೈನಿಂಗ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮಾತ್ರವಲ್ಲದೆ ನಾಲೆಯ ಏರಿಯ ಹಲವಾರು ಸ್ಥಳಗಳಲ್ಲಿ ಹೊರ ಇಳಿಜಾರಿನ ಭಾಗಗಳು ಕುಸಿದಿದೆ. ಆದ್ದರಿಂದ ಇವುಗಳ ರಕ್ಷಣೆ ಮಾಡುವುದು, ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಇತರೆ ಅನುಕೂಲಗಳಿಗಾಗಿ ಸೋಪಾನ, ಕ್ಯಾಟಲ್ ರ‌್ಯಾಂಪ್ ಹಾಗೂ ಕೆಲವು ಸೇತುವೆಗಳನ್ನು ನಿರ್ಮಿಸಲು ಮುಂದಾಗಿದೆ.
ಈ ಯೋಜನೆ ಅನುಷ್ಠಾನದಿಂದ ಮಂಡ್ಯ, ಹಾಸನ, ತುಮಕೂರು ಜಿಲ್ಲೆಯ ವಿವಿಧ ಭಾಗಗಳ ರೈತರಿಗೆ ಹಾಗೂ ಜನ, ಜಾನುವಾರುಗಳಿಗೆ ಅನುಕೂಲವಾಗಿದೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ವಿಶೇಷ ಪ್ರಯತ್ನ ಹಾಗೂ ಕಾಳಜಿಯಿಂದ ಈ ಯೋಜನೆಗೆ ಅನುಮೋದನೆ ದೊರಕಿದೆ.
ನೀರಿನ ಸಾಮರ್ಥ್ಯ ಅಳೆಯಲು ಗೇಜಿಂಗ್
ನಾಲೆಯ ವಾರ್ಷಿಕ ನಿರ್ವಹಣೆಗೆ ಅನುವಾಗುವಂತೆ ಕೆಲ ಮಹತ್ವದ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅದರಂತೆ ಡೀಪ್ ಕಟ್ ಭಾಗಗಳಲ್ಲಿ ರ‌್ಯಾಂಪ್ ನಿರ್ಮಿಸುವುದು. ನಾಲೆಯ ಮುಖ್ಯ ಭಾಗಗಳಲ್ಲಿ ನೀರಿನ ಸಾಮರ್ಥ್ಯವನ್ನು ಅಳೆಯಲು ಗೇಜಿಂಗ್ ವ್ಯವಸ್ಥೆ ಅಳವಡಿಸುವುದು. ಮುಖ್ಯವಾಗಿ ಇದಕ್ಕಾಗಿ ಭದ್ರತಾ ಕೊಠಡಿಗಳನ್ನು ನಿರ್ಮಾಣ ಮಾಡುವುದಾಗಿದೆ.
ಈ ಹಿಂದೆ ನಿರ್ಮಿಸಲಾಗಿರುವ ಒಟ್ಟು 432 ಅಡ್ಡ ಮೋರಿ/ಕಟ್ಟಡಗಳ ಪೈಕಿ 147 ಸುಸ್ಥಿತಿಯಲ್ಲಿವೆ. ಉಳಿದ 285 ಅಡ್ಡ ಮೋರಿ/ಕಟ್ಟಡಗಳ ಪುನರ್ ನಿರ್ಮಾಣ/ದುರಸ್ತಿ ಮಾಡಲು ಹಾಗೂ 79 ಹೊಸ ಅಡ್ಡ/ಮೋರಿ/ಕಟ್ಟಡ (ಇವುಗಳಲ್ಲಿ 3 ಸೇತುವೆ, 23 ಕವರ್ ಡಕ್‌ಗಳು, 42 ಗ್ರಾವಿಟಿ ವಾಲ್, 8 ಡೀಪ್ ಕಟ್ ರ‌್ಯಾಂಪ್, 1 ಇನ್‌ಲೈಟ್, 1 ಕ್ಯಾಟಲ್ ರ‌್ಯಾಂಪ್, 1 ರಿವೀಲಿಂಗ್ ವಿಯರ್) ನಿರ್ಮಿಸಲು ಯೋಜನೆ ಮಾಡಲಾಗುತ್ತಿದೆ.
ಗ್ಯಾರಂಟಿ ಸರ್ಕಾರದಿಂದ ಅಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಾಗಿ ಹಣ ಬಿಡುಗಡೆಯಾಗುತ್ತಿಲ್ಲ ಎಂದೆಲ್ಲ ಆರೋಪಗಳಿಗೆ ಈ ಯೋಜನೆ ಉತ್ತರವಾಗಿದೆ. ರಾಜ್ಯ ಸರ್ಕಾರ ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ದಿಗೂ ದೊಡ್ಡಮಟ್ಟದಲ್ಲಿ ಅನುದಾನ ಮೀಸಲಿರಿಸಿ ಅನುಮೋದನೆ ನೀಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮೂರು ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತಹ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹದ್ಯೋಗ ಮಿತ್ರರಿಗೆ ಧನ್ಯವಾದ ಅರ್ಪಿಸುತ್ತೇನೆ. ಎನ್.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ