ಪ್ಯಾಲೇಸ್ತೀನ್ ಪರ ಕಾರ್ಯಕ್ರಮಕ್ಕೆ ಅನುಮತಿ ನಕಾರ

RS
Published on
  • ಪೊಲೀಸರ ಕ್ರಮಕ್ಕೆ ಕಲಾವಿದರ ಆಕ್ರೋಶ

ಬೆಂಗಳೂರು: ಇಸ್ರೇಲ್ ದಾಳಿಯಿಂದ ಪ್ಯಾಲೇಸ್ತೀನ್‌ನಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟು ಕುರಿತು ಬೆಂಗಳೂರಿನ ರಂಗಶಂಕರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ನಡೆಸಲು ಅನುಮತಿ ನೀಡದ ಪೊಲೀಸರ ಕ್ರಮಕ್ಕೆ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಾವಿದರಾದ ಎಂ.ಡಿ. ಪಲ್ಲವಿ, ಶ್ವೇತಾಂಶು ಬೋರ, ರಮಣೀಕ್ ಸಿಂಗ್ ನೇತೃತ್ವದಲ್ಲಿ ಬುಧವಾರ (ನ. 29)ರ ಸಂಜೆ 5.30ಕ್ಕೆ ಪ್ಯಾಲೇಸ್ತೀನ್‌ನಲ್ಲಿ ನಡೆಯುತ್ತಿರುವ ಮಾರಣಹೋಮ ಖಂಡಿಸಿ ಕಾವ್ಯಗೋಷ್ಠಿ, ಕಿರು ನಾಟಕ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ ಪೊಲೀಸರು ಅನುಮತಿ ನೀಡದ ಕಾರಣ ಕಾರ್ಯಕ್ರಮ ರದ್ದಾಗಿರುವುದಾಗಿ ಅವರು ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ಯಾಲೇಸ್ತೀನ್ ಜತೆ ಒಗ್ಗಟ್ಟು ಪ್ರದರ್ಶಿಸಿ ಒಂದು ಸಣ್ಣ ನಾಟಕ ಮಾಡಲು ಮತ್ತು ಕವನ ವಾಚಿಸಲು ನಾವು ನಿಧರಿಸಿದ್ದೆವು. ನಮ್ಮದು ಒಳಾಂಗಣ ಕಾರ್ಯಕ್ರಮವಾಗಿದೆ. ಇದಕ್ಕೆ ಪೊಲೀಸರ ಅನುಮತಿ ಪಡೆಯುವ ಅಗತ್ಯ ಇಲ್ಲ. ಆದರೆ ಮಾನವೀಯ ನೆಲೆಗಟ್ಟಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ರಂಗಶಂಕರದಂತಹ ಸಂಸ್ಥೆಯನ್ನು ಬೆದರಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಮೇಲಿನ ತನ್ನ ಬದ್ಧತೆ ಕೊರತೆಯನ್ನು ಮತ್ತೊಮ್ಮೆ ತೋರಿಸಿದೆ ಎಂದು ಕಲಾವಿದ ರಮಣೀಕ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಈ ಮೊದಲು ಕಾರ್ಯಕ್ರಮದ ಸಂಪೂರ್ಣ ಮಾಹಿತಿ, ಕಲಾವಿದರ ವಿವರಗಳು ಮತ್ತು ಆಧಾರ್ ಕಾರ್ಡ್ ಪ್ರತಿಗಳನ್ನು ಕೇಳಿದ್ದರು. ಅವುಗಳಲ್ಲಿ ಆಧಾರ್ ಕಾರ್ಡ್ ಪ್ರತಿ ಹೊರತುಪಡಿಸಿ ಉಳಿದೆಲ್ಲ ಮಾಹಿತಿ ಒದಗಿಸಿದ್ದೇವೆ. ಆದರೆ, ಅವರು ರಂಗಶಂಕರದ ಮೇಲೆ ಒತ್ತಡ ಹೇರಿ ಕಾರ್ಯಕ್ರಮ ರದ್ದುಗೊಳಿಸಿರುವ ಕ್ರಮ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ರಮಣೀಕ್ ಸಿಂಗ್ ಪ್ಯಾಲೇಸ್ತೀನ್ ಬಗ್ಗೆ ಕವನ ಓದಲು, ನಾಟಕ ಪ್ರದರ್ಶಿಸಲು ಪ್ರೇಕ್ಷಕರನ್ನು ಸೇರಿಸಲು ಸಹಾಯ ಮಾಡಿ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net