ಮಳೆ ಹಾನಿ ಪ್ರದೇಶದಲ್ಲಿ ಶಾಶ್ವತ ಕಾಮಗಾರಿ

jyp visit
ಅತ್ತಿಕುಡಿಗೆ ಗ್ರಾಪಂ ಚನ್ನೇಕಲ್ಲಿನಲ್ಲಾದ ಮಳೆ ಹಾನಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ವೀಕ್ಷಿಸಿದರು. ಹೊಸೂರು ದಿನೇಶ್, ಲಿಖಿತಾ ಮೋಹನ್, ಮಣಿಕಂಠನ್, ಧರ್ಮರಾಜ್ ಇತರರಿದ್ದರು.
Published on

ಜಯಪುರ: ಮೇಗುಂದಾ ಹೋಬಳಿ ಅತ್ತಿಕುಡಿಗೆ ಗ್ರಾಮ ಪಂಚಾಯಿತಿ ಬಸರೀಕಟ್ಟೆ, ಚನ್ನೇಕಲ್ಲು ಹಾಗೂ ಕಲ್ಲುಗುಡ್ಡೆ ಭಾಗಗಳ ಮಳೆ ಹಾನಿ ಪ್ರದೇಶಗಳಲ್ಲಿ ಶಾಶ್ವತ ಕಾಮಗಾರಿ ನಡೆಸಲು ಕಂದಾಯ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮಳೆ ಹಾನಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿ, ಅತಿಯಾದ ಮಳೆಯಿಂದ ಬಹಳಷ್ಟು ಹಾನಿ ಸಂಭವಿಸಿದೆ. ಹಾನಿ ಸಮಗ್ರ ವರದಿ ನೀಡಲು ಜಿಲ್ಲಾಧಿಕಾರಿಗೆ ತಿಳಿಸುತ್ತೇನೆ. ನಂತರ ಕಂದಾಯ ಸಚಿವರೊಂದಿಗೆ ಮಾತನಾಡಿ, ಹಾನಿಗೊಳಗಾದ ಪ್ರದೇಶಗಳಲ್ಲಿ ಶಾಶ್ವತ ಕಾಮಗಾರಿ ನಡೆಸಲು ಅನುದಾನ ನೀಡುವಂತೆ ಮನವಿ ಮಾಡುತ್ತೇನೆ. ಕೆಲವೆಡೆ ರಸ್ತೆ ಕುಸಿಯಲು ಇಲಾಖೆ ನಡೆಸಿದ ಅವೈಜ್ಞಾನಿಕ ಕಾಮಗಾರಿಯೂ ಕಾರಣವಾಗಿದೆ. ಚಿಕ್ಕಮಗಳೂರು-ಶೃಂಗೇರಿ ರಸ್ತೆ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರದಿಂದ ಅನುಮೋದನೆ ಮಾಡಿ ಅನುದಾನ ನೀಡಲಾಗತ್ತದೆ ಎಂದು ಹೇಳಿದರು.
ಗ್ರಾಮಸ್ಥ ಡಿ.ಎಸ್.ಸತೀಶ್ ಮಾತನಾಡಿ, ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಹಾಳಾಗಿದ್ದು, ತಿಂಗಳುಗಳಿಂದ ಸಿಗ್ನಲ್ ಲಭ್ಯವಿಲ್ಲದ ಕಾರಣ ಸಮಸ್ಯೆಯಾಗುತ್ತಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ, ಚಿಕ್ಕಮಗಳೂರು ಜಿಲ್ಲೆಯ ಬಿಎಸ್‌ಎನ್‌ಎಲ್ ಸೇವೆ ಸುಧಾರಿಸುವ ಸಲುವಾಗಿ ಸಭೆ ನಡೆಸಲಾಗಿದ್ದು, ಅಗತ್ಯ ಉಪಕರಣಗಳನ್ನು ಒದಗಿಸಲು ದೆಹಲಿ ಬಿಎಸ್‌ಎನ್‌ಎಲ್ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ಇನ್ನು ಇಪ್ಪತ್ತು ದಿನಗಳಲ್ಲಿ ಪೂರ್ಣ ಸಮಸ್ಯೆ ಪರಿಹರಿಸುವುದಾಗಿ ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಅಡಕೆ ಬೆಳೆಗಾರರ ಸಂಘದ ಸತೀಶ್ ಜೈನ್ ಮಾತನಾಡಿ, ಕಳೆದ ಮೂರು ತಿಂಗಳಲ್ಲಿ 12 ಸಾವಿರ ಟನ್ ವಿದೇಶಿ ಅಡಕೆ ಅಕ್ರಮವಾಗಿ ದೇಶಕ್ಕೆ ಬಂದಿದ್ದು, ಇದರಿಂದ ಅಡಕೆ ಬೆಲೆ ಕುಸಿದಿದೆ. ದೇಶದ ಅಡಕೆ ಬೆಳೆಗಾರರಿಗೆ ನಷ್ಟವಾಗಿದೆ ಎಂದು ದೂರಿದರು. ಸಂಸದ ಪ್ರತಿಕ್ರಿಯಿಸಿ, ಅಡಕೆ ರಫ್ತು ಮಾಡಬೇಕೆ ಹೊರತು ಆಮದು ಮಾಡಿಕೊಳ್ಳಬಾರದು ಎಂಬ ಮನವಿಯನ್ನು ಸರ್ಕಾರಕ್ಕೆ ಮಾಡಿದ್ದು, ವಿದೇಶಿ ಅಡಕೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸಂಬಂಧಪಟ್ಟ ಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು.
ಮಳೆಹಾನಿ ಪರಿಹಾರಕ್ಕೆ ಸಂಬಂಧಪಟ್ಟ ಅರ್ಜಿಗಳನ್ನು ಗ್ರಾಮಸ್ಥರು ಸಂಸದರಿಗೆ ನೀಡಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ತಹಸೀಲ್ದಾರರಿಗೆ ಸಂಸದರು ಸೂಚಿಸಿದರು.
ಮಾಜಿ ಶಾಸಕ ಡಿ.ಎನ್.ಜೀವರಾಜ್, ಬಿಜೆಪಿ ಕೊಪ್ಪ ತಾಲೂಕು ಅಧ್ಯಕ್ಷ ಹೊಸೂರು ದಿನೇಶ್, ಕೊಪ್ಪ ತಾಪಂ ಕೆಡಿಪಿ ಮಾಜಿ ಸದಸ್ಯ ಮಣಿಕಂಠನ್, ತಹಸೀಲ್ದಾರ್ ಲಿಖಿತಾ ಮೋಹನ್, ಪಿಡಬ್ಲುೃಡಿ ಇಂಜಿನಿಯರ್ ಸುನಿಲ್, ಅಧಿಕಾರಿಗಳು, ಗ್ರಾಮಸ್ಥರು ಇದ್ದರು.
ಪಶ್ಚಿಮಘಟ್ಟಗಳ ಪ್ರಾಕೃತಿಕ ಸೂಕ್ಷ್ಮ ಪ್ರದೇಶಗಳ ಪಟ್ಟಿಗೆ ಮೇಗುಂದಾ ಹೋಬಳಿಯ 8 ಗ್ರಾಮಗಳನ್ನು ಸೇರಿಸಿದ್ದು, ಇದು ಜನವಿರೋಧಿ ನಿಲುವಾಗಿದೆ. ಇದರಿಂದಾಗಿ ವಸತಿ ರಹಿತರು, ರೈತರಿಗೆ ಸಮಸ್ಯೆಯಾಗಲಿದೆ. 8 ಗ್ರಾಮಗಳನ್ನು ಕೈಬಿಡುವಂತೆ ಮೇಗುಂದಾ ಹೋಬಳಿ ರೈತ ಮತ್ತು ಕಾರ್ಮಿಕ ಹಿತ ರಕ್ಷಣಾ ಸಮಿತಿಯ ಕಿಬ್ಳಿ ಪ್ರಸನ್ನಕುಮಾರ್ ಒತ್ತಾಯಿಸಿದರು. ಜತೆಗೆ ಮನವಿ ಪತ್ರ ಸಲ್ಲಿಸಿದರು. ಈ ಕುರಿತು ಶೀಘ್ರದಲ್ಲಿ ಜಿಲ್ಲಾಧಿಕಾರಿ ಜತೆ ಸಮಿತಿಯ ಸದಸ್ಯರ ಸಭೆ ನಡೆಸಿ, ದಾಖಲೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದು ಸಂಸದ ಕೋಟಾ ಶ್ರೀನಿವಾಸ ಪುಜಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net