ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ

25sgr4a
ಸಾಗರದ ಚಿಪ್ಳಿಯಲ್ಲಿ ನಿರ್ಮಿಸಿರುವ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಕಾಗೋಡು ತಿಮ್ಮಪ್ಪ ಅವರನ್ನು ಬಿ.ವೈ.ರಾಘವೇಂದ್ರ ಸನ್ಮಾನಿಸಿದರು. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಡಾ. ಎಸ್.ರಾಮಪ್ಪ, ಗೋಪಾಲಕೃಷ್ಣ ಬೇಳೂರು, ಕೋಟ ಶ್ರೀನಿವಾಸ ಪೂಜಾರಿ ಇತರರಿದ್ದರು.
Published on

ಸಾಗರ: ನಾಡಿಗೆ ಬೆಳಕು ನೀಡುವುದಕ್ಕಾಗಿ ತಮ್ಮ ಬದುಕನ್ನೇ ಕಳೆದುಕೊಂಡವರಿಗೆ ನ್ಯಾಯ ದೊರಕಿಸಿಕೊಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ. ಇಂದಿಗೂ ಅದು ವ್ಯವಸ್ಥಿತವಾಗಿ ನಡೆದಿಲ್ಲ. ನಾಡಿಗೆ ಬೆಳಕು ನೀಡಿದವರ ಬದುಕು ಕಟ್ಟಿಕೊಡಲು ಸಹಕರಿಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನ ಚಿಪ್ಳಿಯ ಆದಿಶಕ್ತಿ ನಗರದಲ್ಲಿ ಸೋಮವಾರ ಬಿಲ್ಲವ ಸಂಘದ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿು, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಸಂದರ್ಭದಲ್ಲಿ ಒಂದಿಲ್ಲೊಂದು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಕ್ಕೆ ನಾನು ಬದ್ಧನಿದ್ದೇನೆ ಭರವಸೆ ನೀಡಿದರು.
ಬಿಲ್ಲವ ಸಮಾಜದವರು ಅತ್ಯಂತ ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಸಂಸದರ ನಿಧಿ (ನನ್ನ ಅನುದಾನ)ಯಿಂದ 1.25 ಕೋಟಿ ರೂ. ಅನುದಾನ ನೀಡಿದ್ದೇವೆ. ಶುಭ ಸಮಾರಂಭಗಳಿಗೆ ಇಂತಹ ಸಮುದಾಯ ಭವನ ಅಗತ್ಯವಾಗಿದ್ದು ನಿಮ್ಮ ಆಶೀರ್ವಾದದಿಂದ ನಾವು ಗೆದ್ದು ಬಂದಿದ್ದೇವೆ. ನಿಮ್ಮ ಬೇಡಿಕೆ ಈಡೇರಿಸುವುದು ನಮ್ಮ ಆದ್ಯ ಕರ್ತವ್ಯ. ಈಡಿಗ, ಬಿಲ್ಲವ ಸಮುದಾಯ ಭವನಕ್ಕೆ 5 ಕೋಟಿ ರೂ. ಅನುದಾನ ನೀಡಿದ್ದೇವೆ. ಸಮುದಾಯ ಭವನಗಳನ್ನು ಸಮುದಾಯದ ಸಮಷ್ಠಿ ಕಲ್ಯಾಣಕ್ಕೆ ಬಳಸಿಕೊಳ್ಳಿ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಈಡಿಗ ಸಮುದಾಯ ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು 26 ಪಂಗಡಗಳಿವೆ. ನಮ್ಮ ಹಕ್ಕುಗಳನ್ನು ಪಡೆಯಲು ನಾವು ಸಂಘಟಿತರಾಗುವುದು ಅನಿವಾರ್ಯವಾಗಿದೆ. ಈಡಿಗ ಸಮುದಾಯದ ಶ್ರೇಯೋಭಿವೃದ್ಧಿಗೆ ನಿಗಮ ಸ್ಥಾಪಿಸುವ ಬೇಡಿಕೆ ಅನೇಕ ವರ್ಷಗಳದ್ದಾಗಿದೆ. ಆದರೆ ಈವರೆಗೆ ಈಡೇರಿಲ್ಲ. ಈಗ ನಮ್ಮದೇ ಸರ್ಕಾರವಿದ್ದು ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಾಗುತ್ತದೆ. ಸಮುದಾಯ ಬಂದಾಗ ರಾಜಕೀಯವನ್ನು ಮೀರಿ ಎಲ್ಲರೂ ಒಟ್ಟಾಗಬೇಕು. ಸಮುದಾಯದ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣದ ಮೂಲಕ ಸಮುದಾಯ ಯಶಸ್ಸನ್ನು ಕಂಡರೆ ಅದು ಎಲ್ಲ ಕ್ಷೇತ್ರಗಳಲ್ಲಿಯೂ ಬೆಳವಣಿಗೆ ಕಾಣುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಆಗಬೇಕು ಎಂದು ಹೇಳಿದರು.
ಸಮುದಾಯ ಭವನ ಉದ್ಘಾಟಿಸಿ, ಆಶೀರ್ವಚನ ನೀಡಿದ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಪ್ರಸ್ತುತ ದಿನದಲ್ಲಿ ಸಂಘಟನೆಯ ಮಹತ್ವ ವಿವರಿಸಿದರು. ಸಮಾಜದ ಪ್ರತಿಯೊಬ್ಬರೂ ಸಂಘಟನೆಯ ಯಶಸ್ಸಿಗೆ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ. ಎಸ್.ರಾಮಪ್ಪ ಸಿಗಂದೂರು, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಸುಮತಿ ಪೂಜಾರ್, ಎಲ್.ನಾಗರಾಜ್, ಬಿ.ಎಸ್.ಸುಂದರ್, ರಾಜು ಬೇಸೂರು, ಕೆ.ನಾಗರಾಜ್, ಅಂಕಿತಾ, ಈಶ್ವರ ಸಿ.ಅಡ್ಡೇರಿ, ನಾಗರಾಜ್ ಗೀಜಗಾರು, ಎಸ್.ರಾಜು, ಎಂ.ನಾಗರಾಜ್ ಇತರರಿದ್ದರು.

ಜಸ್ಟ್ ಮಿಸ್
ಕಳೆದ ಸರ್ಕಾರದ ಅವಧಿಯಲ್ಲಿ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಗೆಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಅದು ಸಾಧ್ಯವಾಗಿರಲಿಲ್ಲ. ಈಗಿನ ಸರ್ಕಾರದಲ್ಲಿ ಅದನ್ನು ಅನುಷ್ಠಾನಕ್ಕೆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಬಿಲ್ಲವ ಸಮಾಜದವರು ಅತ್ಯಂತ ಸುಂದರವಾದ ಸಮುದಾಯ ಭವನ ನಿರ್ಮಿಸಿದ್ದು ಇದಕ್ಕೆ ನಾನು ಸಚಿವನಾಗಿದ್ದಾಗ 75 ಲಕ್ಷ ರೂ. ಅನುದಾನ ನೀಡಿದ್ದೆ. ಜತೆಗೆ ಬಿ.ವೈ.ರಾಘವೇಂದ್ರ ಮತ್ತು ಹರತಾಳು ಹಾಲಪ್ಪ ಮನವಿ ಮೇರೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದರು. ಸಮಾಜದ ಬೆಳವಣಿಗೆಯ ದೃಷ್ಟಿಯಿಂದ ಇಂತಹ ಸಮುದಾಯಗಳು ಅವಶ್ಯಕತೆಯಿದೆ. ಸಮುದಾಯದ ಆರ್ಥಿಕ ಸಬಲತೆಯ ಬಗ್ಗೆಯೂ ಚಿಂತಿಸಬೇಕಾದ ಅಗತ್ಯತೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net