ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪ
ಮಂಗಳೂರು: ಎಸ್‌ಎಸ್‌ಆರ್ (ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ವೇಳೆ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಹುನ್ನಾರದ ಭಾಗವಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ನೀಡಲು ಮುಂದಾಗಿದೆ. ಇದು ದೇಶದ ಆಂತರಿಕ ಭದ್ರತೆಗೆ ಬಹುದೊಡ್ಡ ಸವಾಲಾಗಬಹುದು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಶನಿವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ರಾಜ್ಯ ಸರ್ಕಾರದ ಈ ಕ್ರಮ ಸಂವಿಧಾನ ಹಾಗೂ ರಾಷ್ಟ್ರ ವಿರೋಧಿಯಾಗಿದೆ. ಪಿಆರ್‌ಸಿ ಕುರಿತು ಮೂರು ದಿನಗಳ ಹಿಂದೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಎಸ್‌ಎಸ್‌ಆರ್‌ಗೂ ಪಿಆರ್‌ಸಿಗೂ ಸಂಬಂಧವಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಹಾಗಾದರೆ ತರಾತುರಿಯಲ್ಲಿ ಪಿಆರ್‌ಸಿ ಪ್ರಕ್ರಿಯೆ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿರುವ ಅವರು, ಗ್ಯಾರಂಟಿ ಯೋಜನೆಗಳನ್ನು ಅಕ್ರಮ ವಲಸಿಗರಿಗೂ ನೀಡುವ ಮೂಲಕ ಒಂದು ವರ್ಗವನ್ನು ಓಲೈಸುವ ಕೆಲಸ ಈ ಮೂಲಕ ಆಗುತ್ತಿದೆ. ಕಾಂಗ್ರೆಸ್ ಸಂವಿಧಾನವನ್ನು ಧಿಕ್ಕರಿಸಿ ಅವರಿಗೆ ಬೇಕಾದಂತೆ ಕಾನೂನು ಜಾರಿಗೊಳಿಸುತ್ತಿದೆ. ಡಿಕೆಶಿ ಅವರು ಅಹಂಕಾರದೊಂದಿಗೆ ತನ್ನ ಮತಬ್ಯಾಂಕ್ ಗಟ್ಟಿಗೊಳಿಸಲು ಈ ಪ್ರಯತ್ನ ನಡೆಸಿದ್ದಾರೆ ಎಂದರು.
ಸಂಸದರಿಂದ ಗೃಹ ಸಚಿವರಿಗೆ ಪತ್ರ
ದಕ್ಷಿಣ ಕನ್ನಡ ಜಿಲ್ಲೆಯ 1876 ಬೂತ್‌ಗಳ ಪೈಕಿ ಕೆಲವು ಅತ್ಯಂತ ಸೂಕ್ಷ್ಮ ಬೂತ್‌ಗಳಾಗಿವೆ. ಅಲ್ಲಿ ಬಿಜೆಪಿಗೆ ಬಿಎಲ್‌ಎ 2 ನೇಮಕ ಮಾಡದ ಸ್ಥಿತಿಯಿದೆ. ಅಂತಹ ಬೂತ್‌ಗಳಲ್ಲಿ ವಾಸ್ತವ್ಯ ಪ್ರಮಾಣಪತ್ರ ನೀಡಿ ಅಕ್ರಮ ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ. ಈ ಕುರಿತು ಚುನಾವಣಾ ಆಯೋಗ ಎಚ್ಚರ ವಹಿಸಬೇಕು. ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ಸತೀಶ್ ಕುಂಪಲ ತಿಳಿಸಿದರು.
ಶಾಸಕರಾದ ವೇದವ್ಯಾಸ ಕಾಮತ್, ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಪ್ರಮುಖರಾದ ಜಯಶ್ರೀ ಕರ್ಕೇರ, ವಸಂತ ಜೆ. ಪೂಜಾರಿ ಉಪಸ್ಥಿತರಿದ್ದರು.
ಕೋಟ್ ಸುರತ್ಕಲ್‌ನಲ್ಲಿ ಶುಕ್ರವಾರ 8 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ. ಅಕ್ರಮ ವಲಸಿಗರನ್ನು ದೇಶದಿಂದ ಗಡಿಪಾರು ಮಾಡಬೇಕೆ ವಿನಃ ಅವರಿಗೆ ಇಲ್ಲಿ ಸೌಲಭ್ಯ ಕಲ್ಪಿಸುವುದು ದೇಶಕ್ಕೆ ಅಪಾಯ. ದಕ್ಷಿಣ ಕನ್ನಡ ಜಿಲ್ಲೆಗೆ ಬೇರೆ ರಾಜ್ಯದಿಂದ ವಲಸೆ ಬಂದು ಇಲ್ಲಿ ವಿವಿಧ ಕೆಲಸ ನಿರ್ವಹಿಸುತ್ತಿರುವವರ ಬಗ್ಗೆ ಜಿಲ್ಲಾಡಳಿತ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು.
— ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷರು
ಕೋಟ್ ಅಕ್ರಮ ಬಾಂಗ್ಲಾ ವಲಸಿಗರಿಗೆ ರಾಜ್ಯ ಸರ್ಕಾರ ಅಕ್ರಮವಾಗಿ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಿದರೆ ಸರ್ಕಾರದ ಯೋಜನೆಗಳು ಇಲ್ಲಿನ ಮೂಲ ಮುಸ್ಲಿಮರಿಗೆ ಸಿಗಲು ತೊಂದರೆಯಾಗಬಹುದು. ಸಮುದಾಯದ ಅನುದಾನಗಳು ಹಂಚಿ ಹೋಗಬಹುದು. ಈ ವಿಚಾರವನ್ನು ಪ್ರತಿಯೊಬ್ಬರೂ ಸೂಕ್ಷ್ಮವಾಗಿ ಚಿಂತಿಸಬೇಕಾಗಿದೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಕೆಲಸವನ್ನು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಮಾಡಿ, ಪಿಆರ್‌ಸಿ ದುರ್ಬಳಕೆಯನ್ನು ತಡೆಯಬೇಕು.