

ವಿಜಯವಾಣಿ ಸುದ್ದಿಜಾಲ ಉಡುಪಿ
ವಿಶೇಷ ವ್ಯಕ್ತಿಗಳ ವೈಶಿಷ್ಟ್ಯತೆ ಸಾರುವ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಇಲಾಖೆಯು ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು (ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್)ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಮೊಹರಿನ ಮೂಲಕ ಸ್ಥಳೀಯ ಇತಿಹಾಸ ಪ್ರಚುರಪಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಉಡುಪಿ ಅಂಚೆ ವಿಭಾಗದ ಅಧೀಕ್ಷಕ ರಮೇಶ್ ಪ್ರಭು ತಿಳಿಸಿದರು.
ಶಂಕರಪುರ ಉಪ ಅಂಚೆ ಕಚೇರಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಂಕರಪುರ ಮಲ್ಲಿಗೆ ಹಾಗೂ ಮಟ್ಟುಗುಳ್ಳ ಚಿತ್ರವಿರುವ ಮೊಹರು ಬಿಡುಗಡೆಗೊಳಿಸಿ ಮಾತನಾಡಿದರು.
ಮೊಹರು ವಿನ್ಯಾಸಗೊಳಿಸಿದ ಹಿರಿಯ ಅಂಚೆ ಚೀಟಿ ಸಂಗ್ರಹಣಾಕಾರ ಎಂ.ಕೆ. ಕೃಷ್ಣಯ್ಯ, ಹಿರಿಯ ಅಂಚೆ ಚೀಟಿ ಸಂಗ್ರಾಹಕರಾದ ವಿದ್ಯಾ ಬಾಗಲೋಡಿ, ನಾಗೇಂದ್ರ ನಾಯಕ್ ಅಮ್ಮುಂಜೆ ಉಪಸ್ಥಿತರಿದ್ದರು.
ಶಂಕರಪುರ ಉಪ ಅಂಚೆ ಕಚೇರಿಯ ಅಂಚೆ ಪಾಲಕ ಹರೀಶ್ ಕಿರಣ್ ಸ್ವಾಗತಿಸಿದರು. ಅಂಚೆ ನಿರೀಕ್ಷಕ ಶಂಕರ್ ಲಮಾಣಿ, ಉಡುಪಿ ವಿಭಾಗೀಯ ಕಚೇರಿಯ ಪ್ರಜ್ವಲ್ ಸಹಕರಿಸಿದರು. ಸಹಾಯಕ ಅಂಚೆ ಅಧೀಕ್ಷಕ ವಸಂತ್ ವಂದಿಸಿದರು. ಉಡುಪಿ ಅಂಚೆ ಕಚೇರಿಯ ಪೂರ್ಣಿಮಾ ಜನಾರ್ದನ ನಿರೂಪಿಸಿದರು.
ಕರ್ನಾಟಕ ಅಂಚೆ ವೃತ್ತದಿಂದ ಅನಾವರಣಗೊಂಡ ಹನ್ನೆರಡು ಪಿಪಿಸಿಗಳಲ್ಲಿ ಭೌಗೋಳಿಕ ಮಾನ್ಯತೆ ಇರುವ ಶಂಕರಪುರ ಮಲ್ಲಿಗೆ ಹಾಗೂ ಮಟ್ಟುಗುಳ್ಳ ಮೊಹರನ್ನು ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ನ ಆಡಿಟೋರಿಯಂನಲ್ಲಿ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್ ಅವರು ವರ್ಚುಯಲ್ ಮೂಲಕ ಅನಾವರಣಗೊಳಿಸಿದರು. ಬಳಿಕ ಮಾತನಾಡಿ, ಭಾರತೀಯ ಅಂಚೆ ಇಲಾಖೆಯ ಅಸ್ಮಿತೆಗಳಲ್ಲಿ ಅಂಚೆ ಚೀಟಿ ಪ್ರಮುಖವಾಗಿದೆ. ಅದರಂತೆ, ಅಂಚೆ ಪರಿಕರಗಳ ಭಾಗವಾಗಿರುವ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಸಹ ಆದ್ಯತೆಗೊಳಪಟ್ಟಿದೆ. ಅದು ವಿಶೇಷ ವ್ಯಕ್ತಿಗಳೊಂದಿಗೆ, ವಿಶಿಷ್ಟ ವಸ್ತು ಹಾಗೂ ಸ್ಥಳಗಳೊಂದಿಗೆ ವೈಶಿಷ್ಟ್ಯಪೂರ್ಣ ನಂಟು ಹೊಂದಿದೆ ಎಂದರು.
ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳುವಂತಾಗಬೇಕು. ಉಚಿತ ಸೇವೆಯಾಗಿ ಲಭ್ಯವಿರುವ ಈ ಮೊಹರನ್ನು ಪತ್ರ ವ್ಯವಹಾರಗಳಲ್ಲಿ ಅಥವಾ ಸಂಗ್ರಹಣೆಯಲ್ಲಿ ಹೆಚ್ಚು ಬಳಸುವಂತಾಗಬೇಕು. ಚಿತ್ರದಲ್ಲಿರುವ ಆ ವಸ್ತುವಿನ ಪ್ರಾಮುಖ್ಯತೆ ಎಲ್ಲರಿಗೂ ಮನದಟ್ಟಾಗಬೇಕು. | ರಮೇಶ್ ಪ್ರಭು. ಅಂಚೆ ಅಧೀಕ್ಷಕ, ಉಡುಪಿ ವಿಭಾಗ