

ಕಡೂರು: ಗ್ರಾಮ ಪಂಚಾಯಿತಿಗಳ ಆಡಳಿತದ ವ್ಯವಸ್ಥೆ ಪರಿಣಾಮಕಾರಿಯಾಗಿ ಬಲವರ್ಧನೆಗೊಳ್ಳಲು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಆಡಳಿತಾದವಧಿಯಲ್ಲಿ ಅನುಷ್ಟಾನಗೊಳಿಸಿದ ಯೋಜನೆಗಳೇ ಮುಖ್ಯ ಕಾರಣ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಂಗಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಜೀವ್ ಗಾಂಧಿ ಸೇವಾ ಕೇಂದ್ರ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಅಧಿಕಾರ ವಿಕೇಂದ್ರೀಕರಣದ ಕನಸು ಕಂಡವರು ರಾಜೀವ್ ಗಾಂಧಿ. ಅದನ್ನು ಕರ್ನಾಟಕದಲ್ಲಿ ಪರಿಣಾಮ ಕಾರಿಯಾಗಿ ಅನುಷ್ಟಾನಗೊಳಿಸಿದ ರಾಮಕೃಷ್ಣ ಹೆಗಡೆಯವರು. ಸ್ಥಳೀಯ ಸರ್ಕಾರವಾಗಿ ಕಾರ್ಯ ನಿರ್ವಹಿಸುವ ಗ್ರಾಪಂ ಕಟ್ಟಡವನ್ನು ನರೇಗಾ ಯೋಜನೆಯಲ್ಲಿ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಹಾಗೂ ಭದ್ರಾ ಉಪಕಣಿವೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಗಳು ಪ್ರಗತಿಯಲಿದ್ದು, ಈಗಾಗಲೇ ನಬಾರ್ಡ್ ನಡಿ ಅನುದಾನ ಬಿಡುಗಡೆಗೊಳಿಸಲಾಗಿದೆ. ತಂಗಲಿ ಭಾಗಕ್ಕೂ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಈ ಭಾಗದ ಸುತ್ತಮುತ್ತಲ ಗ್ರಾಮಗಳ ಅಂತರ್ಜಲವೃದ್ಧಿಗೆ ತಂಗಲಿ ಗ್ರಾಮವನ್ನೇ ಜಂಕ್ಷನ್ ರೂಪದಲ್ಲಿ ಕೆರೆ ನೀರನ್ನು ಶಾಶ್ವತವಾಗಿ ತುಂಬುವಂತೆ ಮಾಡಲಾಗುವುದು ಎಂದರು.
ಕಳೆದ 40 ವರ್ಷಗಳ ಗ್ರಾಪಂ ಸದಸ್ಯರನ್ನು ಗೌರವಿಸಲಾಯಿತು. ತಂಗಲಿ ಕೆರೆಗೆ ಗ್ರಾಪಂ ಸದಸ್ಯರೊಡನೆ ಶಾಸಕರು ಬಾಗಿನ ಸಮರ್ಪಿಸಿದರು. ಗ್ರಾಪಂ ಅಧ್ಯಕ್ಷ ರಘುರಾಮ್, ಉಪಾಧ್ಯಕ್ಷೆ ವಿಜಯಾಬಾಯಿ ಶ್ರೀ ನಿವಾಸ್‌ನಾಯ್ಕ, ಪರಮೇಶ್ವರಪ್ಪ, ಟಿ.ರಮೇಶ್, ಕೆ.ಆರ್.ಗಿರೀಶ್, ಆರತಿ, ಜ್ಯೋತಿ ಎಸ್.ನಾರಾಯಣನಾಯ್ಕ, ಕಾವೇರಿ ಬಾಯಿ ಕೃಷ್ಣನಾಯ್ಕ, ಸುಧಾಲೇಪಾಕ್ಷಿ, ಜಿಪಂ ಮಾಜಿ ಸದಸ್ಯ ಶರತ್‌ಕಷ್ಣಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಶಿವುಕುಮಾರ್, ಮಾಜಿ ಸದಸ್ಯೆ ಸವಿತಾ ಆನಂದ್, ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್, ಇಒ ಪ್ರವೀಣ್, ನರೇಗಾ ಸಹಾಯಕ ನಿರ್ದೇಶಕ ಕಲ್ಲಪ್ಪ, ಪಿಡಿಒ ಎನ್.ಸುನಿಲ್‌ಕುಮಾರ್, ಕಾರ್ಯದರ್ಶಿ ಸುಶ್ಮೀತಾ ಮತ್ತಿತರಿದ್ದರು.