ಶಾಶ್ವತ ಆರೋಗ್ಯಕ್ಕಾಗಿ ಯೋಗಕ್ಕೆ ಮೀಸಲಿಡಿ ಅಲ್ಪಸಮಯ- ಯೋಗಗುರು ಬಾಬಾ ರಾಮದೇವ ಸಲಹೆ

050220 Hosapete Yoga
Published on

ಹೊಸಪೇಟೆ: ಯೋಗಕ್ಕಾಗಿ ಪ್ರತಿಯೊಬ್ಬರೂ ದಿನದಲ್ಲಿ ಅಲ್ಪಸಮಯ ಮೀಸಲಿಟ್ಟರೆ ಶಾಶ್ವತ ಆರೋಗ್ಯ ಸಿಗುತ್ತದೆ ಎಂದು ಯೋಗಗುರು ಬಾಬಾ ರಾಮದೇವ ತಿಳಿಸಿದರು.

ತಾಲೂಕು ಕ್ರೀಡಾಂಗಣದಲ್ಲಿ ಹರಿದ್ವಾರ ಪತಂಜಲಿ ಯೋಗಸಮಿತಿ ಮತ್ತು ಎಂಎಸ್‌ಪಿಎಲ್ ಸಹಯೋಗದಲ್ಲಿ ಬುಧವಾರ ಆರಂಭವಾದ ಬೃಹತ್ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರ ಉದ್ದೇಶಿಸಿ ಮಾತನಾಡಿದರು. ಸತ್ವಯುತ ಆಹಾರದ ಕೊರತೆಯಿಂದ ರೋಗ ನಿರೋಧಕ ಶಕ್ತಿ ಕುಂದಿ ಕಾಯಿಲೆ ಬರುತ್ತವೆ. ಉತ್ತಮ ಆರೋಗ್ಯಕ್ಕಾಗಿ ಜಿಂಕ್ ಫುಡ್ ತ್ಯಜಿಸಬೇಕು. ತಾತ್ಕಾಲಿಕ ನೋವು ನಿವಾರಣೆ ಮಾತ್ರೆ ನುಂಗುವುದು ರೂಢಿಸಿಕೊಂಡು, ಬಿಪಿ, ಶುಗರ್, ಥೈರಾಯಿಡ್, ಹೃದಯ, ಕಿಡ್ನಿ, ಕ್ಯಾನ್ಸರ್‌ಗಳಿಗೂ ಜನ ತುತ್ತಾಗಿದ್ದಾರೆ. ನಿರಂತರ ಯೋಗ ಮಾಡುವವರ ಬಲಿ ರೋಗ ಸುಳಿಯುವುದಿಲ್ಲ. ಹತ್ತಾರು ವರ್ಷಗಳಿಂದ ಬಿಪಿ, ಶುಗರ್ ನಿಯಂತ್ರಣಕ್ಕೆ ಮಾತ್ರೆ ನುಂಗುತ್ತಿದ್ದವರು ಕನಿಷ್ಠ ಒಂದು ವಾರ ಯೋಗದಲ್ಲಿ ತೊಡಗಿಸಿಕೊಂಡರೆ ಮಾತ್ರೆ ನುಂಗುವುದನ್ನೇ ಬಿಡಬಹುದು. ಮೊದಲ ದಿನ ಯೋಗದ ಮೂಲ ಆಸನಗಳನ್ನು ಹೇಳಿಕೊಟ್ಟಿದ್ದೇನೆ. ಇನ್ನುಳಿದ ನಾಲ್ಕು ದಿನಗಳಲ್ಲಿ ಎಲ್ಲ ಆಸನ ತಿಳಿಸುತ್ತೇನೆ ಎಂದರು.

ಮಕ್ಕಳೂ ಭಾಗಿ
ಯೋಗ ಶಿಬಿರ ಬುಧವಾರ ಬೆಳಗ್ಗೆ 4.30ಕ್ಕೆ ಆರಂಭವಾಯಿತು. ಎಳೆಯ ಕಂದಮ್ಮಗನ್ನು ಕೆಲ ತಾಯಂದಿರು ಕ್ರೀಡಾಂಗಣಕ್ಕೆ ಕರೆ ತಂದಿದ್ದರು. ಪುಟಾಣಿಗಳೂ ಯೋಗದಲ್ಲಿ ತೊಡಗಿಸಿಕೊಂಡು, ಗಮನ ಸೆಳೆದರು. ಬಾಬಾ ರಾಮದೇವರ ಪಕ್ಕದಲ್ಲೇ ಕುಳಿತ ಬಾಲಕಿ ನಕ್ಷತ್ರ, ಯೋಗ ಸೂತ್ರದ ಸಮಾಧಿಪಾದದ ಶ್ಲೋಕಗಳನ್ನು ಹೇಳಿ ಅಚ್ಚರಿ ಮೂಡಿಸಿದಳು. ಶಾಲೆಗೆ ಹೋಗುವ ಮುನ್ನ ಮಕ್ಕಳು ಯೋಗ ಮಾಡುವುದು, ಭಗವದ್ಗೀತೆ ಶ್ಲೋಕ ಹೇಳುವುದು ಹೆಮ್ಮೆಯ ಸಂಗತಿ ಎಂದು ಬಾಬಾ ರಾಮದೇವ ಪ್ರಶಂಸಿದರು.

ಹಾವೇರಿಯ ದಿಂಗಾಲೇಶ್ವರ ಸ್ವಾಮಿಜಿ ಉದ್ಘಾಟಿಸಿದರು. ಶಂಭುಲಿಂಗೇಶ್ವರ ಸ್ವಾಮೀಜಿ, ಬಲ್ಡೋಟ್ ಸಂಸ್ಥೆಯ ಅಧ್ಯಕ್ಷ ನರೇಂದ್ರ ಕುಮಾರ್ ಬಲ್ಡೋಟ, ಚಿತ್ರ ಬಲ್ದೋಟ, ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರ ಭವರಲಾಲ್ ಆರ್ಯ, ಹರಿದ್ವಾರದ ಮುಖ್ಯ ಕೇಂದ್ರದ ಪ್ರಭಾರ ದೇವಪ್ರಿಯಾ ಮಾತಾಜಿ, ಉತ್ತರ ಕರ್ನಾಟಕ ಪ್ರಾಂತ ಪ್ರಭಾರ ಆರತಿ ಕಾನ್ಗೋ, ಉತ್ತರ ಕರ್ನಾಟಕ ಪ್ರಾಂತ ಸಹಪ್ರಭಾರ ದಾಕ್ಷಾಯಿಣಿ ಶಿವಕುಮಾರ, ದಕ್ಷಿಣ ಕನ್ನಡದ ಪ್ರಭಾರ ಸುಜಾತ ಮೋರ‌್ಲಾ, ಮಹಾರಾಷ್ಟ್ರದ ಪ್ರಭಾರ ಸುಧಾ.ಜಿ. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net