ಶಾಶ್ವತ ಕುಡಿಯುವ ನೀರಿನ ಯೋಜನೆ ಶೀಘ್ರ ಪೂರ್ಣ

Permanent drinking water project to be completed soon
ಮುಧೋಳ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಿಮ್ಮಾಪೂರ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಎಂ.ಎಂ. ಬಾಗವಾನ, ತಹಸೀಲ್ದಾರ್ ಮಹಾದೇವ ಸನಮುರಿ, ನಗರಸಭೆ ಸದಸ್ಯರಾದ ಸಂತೋಷ ಪಾಲೋಜಿ, ಸತೀಶ ಗಾಡಿ ಇತರರದ್ದರು.
Published on

ಮುಧೋಳ: ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಪರಸ್ಪರ ಚರ್ಚೆ ಹಾಗೂ ನಿರ್ಣಯಗಳಿಗೆ ಸಾಕ್ಷಿಯಾಗುತ್ತಿದ್ದ ಸಭೆ ಸೋಮವಾರ ವಿರೋಧ ಪಕ್ಷದ ಸದಸ್ಯರ ಅನುಪಸ್ಥಿತಿಯಲ್ಲೇ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸಭೆಗೆ ಬರುವವರೆಗೂ ಸಭೆ ನಡೆಸಲ್ಲ ಎಂಬ ಅಧಿಕಾರಿಗಳ ಮಾತಿಗೆ ಬೇಸರಗೊಂಡು ಬಿಜೆಪಿ ಸದಸ್ಯರು ಸಭೆ ಬಹಿಷ್ಕರಿಸಿದರು.

ಒಂದೂವರೆ ಗಂಟೆ ತಡವಾಗಿ ಆಗಮಿಸಿದ ಸಚಿವ ಆರ್.ಬಿ. ತಿಮ್ಮಾಪೂರ ಸಾಮಾನ್ಯ ಸಭೆ ನಡೆಸಿದರು.

2017-18ರಲ್ಲಿ ಅಂದಾಜು 112 ಕೋಟಿ ರೂ. ವೆಚ್ಚದಲ್ಲಿ ನಗರಕ್ಕೆ ಶಾಶ್ವತ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಅದು ಇನ್ನೂ ಆರಂಭವಾಗದ ಕಾರಣ ಒಂದು ಯೋಜನಾ ವೆಚ್ಚ 117 ಕೋಟಿ ರೂ. ತಲುಪಿದೆ. ಕೂಡಲೇ ಯೋಜನೆ ಆರಂಭಕ್ಕೆ ಕ್ರಮ ಕೈಗೊಂಡು ನಗರಕ್ಕೆ ನೀರು ಪೂರೈಸಬೇಕೆಂದು ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಎಲ್ಲ ವಾರ್ಡ್‌ಗಳಲ್ಲಿ ಶೌಚಗೃಹ ನಿರ್ಮಿಸಲು ಆದ್ಯತೆ ನೀಡಬೇಕು. ಎಷ್ಟೇ ಹಣ ಖರ್ಚಾದರೂ ನಮ್ಮ ಸರ್ಕಾರ ನೀಡಲು ಸಿದ್ಧ. ಆದರೆ, ಸೂಕ್ತ ಜಾಗ ಗುರುತಿಸಿ ನಮ್ಮ ಗಮನಕ್ಕೆ ತರಬೇಕು ಎಂದರು.

ನಗರಸಭೆ ಸದಸ್ಯ ಡಾ. ಸತೀಶ ಮಲಘಾಣ ಮಾತನಾಡಿ, ನಗರದಲ್ಲಿ ಎರಡೇ ಸ್ಮಶಾನಗಳಿದ್ದು, ಅಂತ್ಯಸಂಸ್ಕಾರಕ್ಕೆ ತೊಂದರೆ ಆಗುತ್ತಿದೆ. ಬಳ್ಳೂರ ಆರ್.ಸಿ. ಹಾಗೂ ಗುಡದಿನ್ನಿ ಆರ್.ಸಿಯಲ್ಲಿನ ಸ್ಮಶಾನ ಜಾಗ ಪಡೆದು ಅವುಗಳ ಬಳಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಸಚಿವರು ಸ್ಮಶಾನ ಬಳಕೆ ಬಗ್ಗೆ ಸೂಕ್ತ ಕ್ರಮವಹಿಸಿ ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

ನಗರದಲ್ಲಿ 33 ಸಿಎ ಪ್ಲಾಟ್‌ಗಳನ್ನು ವಿವಿಧ ನಿರ್ಮಾಣಕ್ಕಾಗಿ ಲೀಸ್ ಆಧಾರದ ಮೇಲೆ ನೀಡಲಾಗಿದೆ. ಆದರೆ ಯಾವುದೇ ಸಮುದಾಯದವರು ಲೀಸ್‌ಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಅಧಿಕಾರಿಗಳು ಸಭೆ ಗಮನಕ್ಕೆ ತಂದರು.

ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಎಂ.ಎಂ. ಬಾಗವಾನ, ತಹಸೀಲ್ದಾರ್ ಮಹಾದೇವ ಸನಮುರಿ, ನಗರಸಭೆ ಸದಸ್ಯರಾದ ಸಂತೋಷ ಪಾಲೋಜಿ, ಸತೀಶ ಗಾಡಿ ಇದ್ದರು.

ಮೂರ್ತಿ ಪ್ರತಿಷ್ಠಾಪನೆಗೆ ಸಹಮತ

ರಾಜಾ ಮಾಲೋಜಿರಾವ್ ಅವರ ಮೂರ್ತಿ ಪ್ರತಿಷ್ಠಾಪನೆ ನಿರ್ಧಾರಕ್ಕೆ ಸಭೆಯಲ್ಲಿದ್ದ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. ಸಚಿವ ತಿಮ್ಮಾಪೂರ ಮುಧೋಳ ನಗರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ರಾಜಾ ಮಾಲೋಜಿರಾವ್ ಘೋರ್ಪಡೆಯವರ ಗೌರವ ಧ್ಯೋತಕವಾಗಿ ಯೋಗ್ಯ ಸ್ಥಳ ಗುರುತಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡೋಣ ಎಂದು ಸದಸ್ಯರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net