877 ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆ

ragavendra 3
Published on

ಗಂಗೊಳ್ಳಿ: ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ 43 ಗ್ರಾ.ಪಂ.ನ 67 ಗ್ರಾಮಗಳ 877 ಜನವಸತಿ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ನಬಾರ್ಡ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 505 ಕೋಟಿ ರೂ. ವೆಚ್ಚದಲ್ಲಿ ಎರಡು ಕಡೆ ಯೋಜನೆ ರೂಪಿಸಲಾಗಿದ್ದು, ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೈಂದೂರು ಕುಡಿಯುವ ನೀರಿನ ಯೋಜನೆ ರೂಪುರೇಷೆ ಕುರಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗಿನ ಪೂರ್ವ ಸಿದ್ಧತಾ ಸಭೆ ಬಳಿಕ ಮಾಹಿತಿ ನೀಡಿದರು.

ವಾರಾಹಿ ನದಿಯ ಶಂಕರನಾರಾಯಣ ಸಮೀಪ ಹಾಗೂ ಗುಲ್ವಾಡಿ ಸೇತುವೆ ಬಳಿಯಿಂದ ನೀರು ಪೂರೈಕೆಗೆ ಪಂಪಿಂಗ್ ಮಾಡಲು ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಅಲ್ಲಿಂದ ಕೊಲ್ಲೂರು ಕಡೆಗೆ, ಬೈಂದೂರು, ಶಿರೂರು ಕಡೆ ಹಾಗೂ ಇನ್ನುಳಿದ ಗ್ರಾಮೀಣ ಭಾಗಗಳಿಗೆ ಆದ್ಯತೆ ಮೇರೆಗೆ ನೀರು ಪೂರೈಕೆ ಮಾಡಲಾಗುತ್ತದೆ. ಈ ಯೋಜನೆಗಾಗಿ ನಬಾರ್ಡ್‌ನಿಂದ 181 ಕೋಟಿ ರೂ., ಕೇಂದ್ರದ ಜಲ ಜೀವನ್ ಮಿಷನ್‌ನಡಿ 135 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ ಅಂದಾಜು 123 ಕೋಟಿ ರೂ. ಸೇರಿದಂತೆ ಒಟ್ಟಾರೆ 505 ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.

220 ಓವರ್ ಹೆಡ್ ಟ್ಯಾಂಕ್: ಬೈಂದೂರು ಕ್ಷೇತ್ರದಲ್ಲಿ ಪ್ರಸ್ತುತ 59,386 ಮನೆಗಳಿದ್ದು, ಮುಂದಿನ ಐದು ವರ್ಷಗಳಲ್ಲಿ ಇದು 71 ಸಾವಿರವಾಗುವ ನಿರೀಕ್ಷೆಯಿದೆ. ಇದನ್ನು ಗಮನದಲ್ಲಿಟ್ಟು ಯೋಜನೆ ಸಿದ್ಧಪಡಿಸಲಾಗಿದೆ. ಕ್ಷೇತ್ರದಲ್ಲಿ ಈಗ 132 ಓವರ್ ಹೆಡ್ ಟ್ಯಾಂಕ್‌ಗಳಿದ್ದು, ಈ ಯೋಜನೆಯಡಿ ಹೊಸದಾಗಿ 220 ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಲಿದೆ. ಇವುಗಳಲ್ಲಿ 10 ಸಾವಿರ ಲೀಟರ್‌ನಿಂದ ಆರಂಭಗೊಂಡು 2 ಲಕ್ಷ ಲೀ. ನೀರು ಸಂಗ್ರಹ ಮಾಡುವಷ್ಟು ಸಾಮರ್ಥ್ಯವಿರಲಿದೆ. ಕಾಮಗಾರಿ ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಆ ಬಳಿಕ 5 ವರ್ಷಗಳವರೆಗೆ ನಿರ್ವಹಣೆ ಹೊಣೆಗೂ ಅನುದಾನ ಕಾಯ್ದಿರಿಸಲಾಗುವುದು. ಅನಂತರ ಸ್ಥಳೀಯ ಪಂಚಾಯಿತಿಗೆ ವಹಿಸಿಕೊಡಲಾಗುವುದು ಎಂದು ಸಂಸದರು ತಿಳಿಸಿದರು.

ಪ್ರತಿ ಮನೆಗೂ ನೀರು: ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಮುತವರ್ಜಿಯಿಂದಾಗಿ 505 ಕೋಟಿ ರೂ. ವೆಚ್ಚದ ಯೋಜನೆ ಮಂಜೂರಾಗಿದ್ದು, ಇದರೊಂದಿಗೆ ಪ್ರತಿ ಮನೆಗೂ ನೀರು ಕೊಡುವ ನನ್ನ ಸಂಕಲ್ಪ 2023ರೊಳಗೆ ಈಡೇರಿದಂತಾಗುತ್ತದೆ. ಇದಲ್ಲದೆ ಸುಬ್ಬರಾಡಿ ಅಣೆಕಟ್ಟು ನಿರ್ಮಾಣ ಮೂಲಕ 30 ವರ್ಷಗಳಿಗೂ ಹೆಚ್ಚು ಕಾಲದ ಕನಸು ನನಸಾದಂತಾಗುತ್ತದೆ. ಇದರಿಂದ 30 ಸಾವಿರ ಜನರಿಗೆ ಕುಡಿಯಲು ಹಾಗೂ ಕೃಷಿಗೆ ನೀರು ಪೂರೈಕೆಯಾಗಲಿದೆ. ಮಿನಿ ವಿಧಾನಸಭಾ ಕಟ್ಟಡ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಪ್ರವಾಸೋದ್ಯಮ, ಮೀನುಗಾರಿಕೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ 1,350 ಕೋಟಿ ರೂ. ಗೂ ಮಿಕ್ಕಿ ಅನುದಾನ ತರಿಸಲಾಗಿದೆ ಎಂದರು.

ಮುಖ್ಯಮಂತ್ರಿ ಕಚೇರಿಯ ಉಪ ಕಾರ‌್ಯದರ್ಶಿ ರವಿ, ವಿಶೇಷ ಅಧಿಕಾರಿ ರಾಜಪ್ಪ, ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಸುರೇಶ್ ಬಟವಾಡಿ, ಶಂಕರ ಪೂಜಾರಿ, ಶೋಭಾ ಜಿ. ಪುತ್ರನ್, ರೋಹಿತ್ ಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಕುಂದಾಪುರ ತಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ತಾಪಂ ಸದಸ್ಯರು, ಪಕ್ಷದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net