

ಪಿರಿಯಾಪಟ್ಟಣ: ತಾಲೂಕಿನಲ್ಲಿ ಮಂಗಳವಾರ ಮುಂಜಾನೆಯಿಂದಲೇ ಎಡೆಬಿಡದೆ ಮಳೆ ಸುರಿಯಿತು.
ಭಾನುವಾರದಿಂದಲೇ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡಿದ್ದ ಮಳೆ ಮಂಗಳವಾರ ಧಾರಕಾರ ಸುರಿಯಿತು. ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಮಳೆ ಬಿರುಸುಗೊಂಡಿದ್ದರಿಂದ ಕೊಡಗು ಜಿಲ್ಲೆಯ ಗಡಿಭಾಗವಾಗ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ, ಲಿಂಗಾಪುರ, ಕೋಗಿಲವಾಡಿ, ಬೂದಿತಿಟ್ಟು, ಆನೆ ಚೌಕೂರು ಅರಣ್ಯ ಪ್ರದೇಶ, ಆವರ್ತಿ, ದೊಡ್ಡಕಮರವಳ್ಳಿ, ಸೂಳೆಕೋಟೆ ಮತ್ತಿತರ ಪ್ರದೇಶಗಳಲ್ಲಿ ಮಳೆ ಹೆಚ್ಚಾಗಿದೆ. ತಾಲೂಕಿನಲ್ಲಿ ಕೃಷಿ ಚಟುವಟಿಕೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು ಕಳೆದ ತಿಂಗಳು ನಾಟಿ ಮತ್ತು ಬಿತ್ತನೆ ಮಾಡಿದ್ದ ತಂಬಾಕು, ಮುಸುಕಿನ ಜೋಳ ಮತ್ತಿತರ ಬೆಳೆಗಳಿಗೆ ಮಳೆ ಸಹಕಾರಿಯಾಗಿದೆ.
ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ರೈತರು ಜಮೀನುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ.