

ಅವಿನಾಶ್ ಜೈನಹಳ್ಳಿ ಮೈಸೂರು
ದಾಯಾದಿ ಕಲಹಕ್ಕೆ ಹೆಸರುವಾಸಿಯಾಗಿದ್ದ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ವರ್ಷಕ್ಕೂ ಮುನ್ನವೇ ವಿಧಾನಸಭೆ ಚುನಾವಣೆಯ ಕಾವು ಏರತೊಡಗಿದ್ದು, ವಿವಿಧ ಪಕ್ಷದ ಟಿಕೆಟ್ ಆಕಾಂಕ್ಷಿಗಳ ತಿರುಗಾಟ ಜೋರಾಗಿದೆ. ಅದರಲ್ಲೂ ವಿಶೇಷವಾಗಿ, ಈ ಬಾರಿಯೂ ಜೆಡಿಎಸ್‌ನಿಂದ ಶಾಸಕ ಕೆ.ಮಹದೇವ್, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿರುವುದು, ಚುನಾವಣಾ ಕಣ ರಂಗೇರುವಂತೆ ಮಾಡಿದೆ.
ಈ ಮೂವರ ಪೈಕಿ 2023ರ ಚುನಾವಣೆಗೆ ಜೆಡಿಎಸ್‌ನಿಂದ ಶಾಸಕ ಕೆ.ಮಹದೇವ್ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಆಕಾಂಕ್ಷಿಗಳ ಪಟ್ಟಿ ಕೊಂಚ ಹೆಚ್ಚಾಗಿದ್ದು, ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಇದೆ. ಈ ಮಧ್ಯೆ ಎಲ್ಲ ಪಕ್ಷದ ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರದಲ್ಲಿ ಮತಬೇಟೆ ಆರಂಭಿಸಿದ್ದಾರೆ. 2023ರ ಚುನಾವಣೆಗೂ ಜೆಡಿಎಸ್ ಟಿಕೆಟ್ ಖಚಿತವಾಗಿರುವುದರಿಂದ ಕ್ಷೇತ್ರದಲ್ಲಿ ಶಾಸಕರ ತಿರುಗಾಟವೂ ಜೋರಾಗಿದ್ದು, ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ನಾಲ್ಕು ವರ್ಷದಿಂದಲೂ ಕ್ಷೇತ್ರದಲ್ಲಿ ಬಿರುಸಿನ ಓಡಾಟ, ಕಾರ್ಯಕರ್ತರ ಸಭೆ ನಡೆಸುತ್ತಾ, ಸಂಘಟನೆಯಲ್ಲಿ ನಿರತರಾಗಿದ್ದಾರೆ. ಪಕ್ಷ ಸಂಘಟನೆಗೆ ಮೈಮುಲ್ ಅಧ್ಯಕ್ಷರೂ ಆದ ಶಾಸಕರ ಪುತ್ರ ಪ್ರಸನ್ನ ಸಾಥ್ ನೀಡುತ್ತಿದ್ದಾರೆ. ಕ್ಷೇತ್ರದ ಯಾವುದೇ ಮೂಲೆಯಲ್ಲಿ ಸಾವು-ನೋವಾದರೂ ಅಲ್ಲಿ ಪ್ರಸನ್ನ ಇರುತ್ತಾರೆ. ಎಲ್ಲರ ಕಷ್ಟ-ಸುಖಗಳಲ್ಲೂ ಭಾಗಿಯಾಗುತ್ತಿದ್ದಾರೆ.
ಶಾಸಕ ಕೆ.ಮಹದೇವ್ ಕ್ಷೇತ್ರದಲ್ಲಿ ಈವರೆಗೆ ಮೂರು ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಪೈಕಿ 2008 ಮತ್ತು 2013ರಲ್ಲಿ ಕೆ.ವೆಂಕಟೇಶ್ ಎದುರು ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. ಬಳಿಕ ಅದರ ಅನುಕಂಪ ಹಾಗೂ ಎಚ್.ಡಿ.ಕುಮಾರಸ್ವಾಮಿ ಅಲೆಯಿಂದ 2018ರಲ್ಲಿ ಗೆಲುವು ದಾಖಲಿಸಿದ್ದರು.
ಕಾಂಗ್ರೆಸ್‌ನಲ್ಲೂ ಇದ್ದಾರೆ ಆಕಾಂಕ್ಷಿಗಳು:
ಮಾಜಿ ಸಚಿವ ಕೆ.ವೆಂಕಟೇಶ್ ಅವರಲ್ಲದೆ, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮುಖಂಡರಾದ ಪಿ.ಪ್ರಶಾಂತ್‌ಗೌಡ, ಎಚ್.ಡಿ.ಗಣೇಶ್ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕೆ.ವೆಂಕಟೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪೈಕಿ ಗಣೇಶ್ ಕುರುಬ ಸಮುದಾಯ, ಉಳಿದವರು ಒಕ್ಕಲಿಗ ಸಮುದಾಯದವರು. ಕೆ.ವೆಂಕಟೇಶ್ 8 ಬಾರಿ ಚುನಾವಣೆಗೆ ಸ್ಪರ್ಧಿಸಿ 5 ಬಾರಿ ಶಾಸಕರಾಗಿದ್ದರು. ಜನತಾ ಪರಿವಾರದಿಂದ 3 ಬಾರಿ ವಿಧಾನಸಭೆ ಪ್ರವೇಶಿಸಿದ್ದ ಅವರು, ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ನಂತರ ಸಿದ್ದರಾಮಯ್ಯ ಅವರ ಜತೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ 2008 ಮತ್ತು 2013ರಲ್ಲಿ ಆ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಕಳೆದ 2018ರ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಈಗ ಮತ್ತೊಂದು ಚುನಾವಣೆಗೆ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಕ್ಷೇತ್ರವನ್ನು ಸುತ್ತುತ್ತಾ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಕ್ಷೇತ್ರದ 34 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಕಾಂಗ್ರೆಸ್ ಪಕ್ಷದ ಗ್ರಾಮ ಸ್ವರಾಜ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದಾರೆ. ಸುಮಾರು 22 ಸಾವಿರ ಕಾಂಗ್ರೆಸ್ ಸದಸ್ಯರನ್ನು ನೋಂದಣಿ ಮಾಡಿಸಿದ್ದಾರೆ.
ಬಿ.ಜೆ.ವಿಜಯಕುಮಾರ್ ಕಳೆದ ಬಾರಿಯೂ ಟಿಕೆಟ್ ಕೇಳಿದ್ದರು. ಈಗಲೂ ಕೇಳುತ್ತಿದ್ದಾರೆ. ಈ ಬಾರಿ ಕೊಂಚ ಹೆಚ್ಚಾಗಿ ಪ್ರಯತ್ನ ನಡೆಸುತ್ತಿದ್ದಾರೆ. ತಮಗೆ ಟಿಕೆಟ್ ನೀಡಬೇಕು ಎಂದು ನಾಯಕರ ಮೇಲೆ ಒತ್ತಡ ಹಾಕುತ್ತ್ತಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್‌ಗೌಡ ಪಿರಿಯಾಪಟ್ಟಣದಿಂದ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಗಣೇಶ್ ಎರಡು ಬಾರಿ ಬಿಜೆಪಿ ಹಾಗೂ ಒಮ್ಮೆ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಸದ್ಯ ಕಾಂಗ್ರೆಸ್‌ನಲ್ಲಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನಾಲ್ವರೂ ಕಾರ್ಯಕರ್ತರ ಸಂಪರ್ಕದಲ್ಲಿದ್ದು, ಕ್ಷೇತ್ರ ಪ್ರದಕ್ಷಿಣೆ ಮಾಡುತ್ತಾ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ.
ಸಿ.ಎಚ್.ವಿಜಯಶಂಕರ್ ಮುನ್ನೆಲೆಗೆ:
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಕ್ಷೇತ್ರದಲ್ಲಿ ಮುನ್ನೆಲೆಯಲ್ಲಿದ್ದಾರೆ. 2018ರ ಚುನಾವಣೆಯಲ್ಲೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಆಗ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕುರುಬ ಸಮುದಾಯದ ಎಸ್.ಮಂಜುನಾಥ್‌ಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಪರಿಣಾಮ, ವಿಜಯಶಂಕರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಬಳಿಕ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡರು. ಈಗ ಮತ್ತೆ ಬಿಜೆಪಿಗೆ ಮರಳಿರುವ ಅವರು, ಪಿರಿಯಾಪಟ್ಟಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಒಂದು ವರ್ಷದಿಂದ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಜತೆ ಅನೇಕ ಸಭೆ ನಡೆಸಿದ್ದಾರೆ. ಕ್ಷೇತ್ರದ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದಾರೆ. ಕ್ಷೇತ್ರದಲ್ಲಿ ಮತ್ತೆ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಹಾಗಾಗಿ, ಮೈಸೂರಿನ ನಿವಾಸದಿಂದ ಹುಣಸೂರಿನಲ್ಲಿರುವ ನಿವಾಸಕ್ಕೆ ತಮ್ಮ ವಾಸ್ತವ್ಯ ವರ್ಗಾವಣೆ ಮಾಡಲು ಚಿಂತಿಸಿದ್ದಾರೆ.
ವಿಜಯಶಂಕರ್ ಈ ಹಿಂದೆ ಒಮ್ಮೆ ಹುಣಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಸಂಸದರಾಗಿ, ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯ ಸರ್ಕಾರದಲ್ಲಿ ಅರಣ್ಯ ಮತ್ತು ಸಣ್ಣ ಕೈಗಾರಿಕಾ ಸಚಿವರಾಗಿಯೂ ಜವಾಬ್ದಾರಿ ನಿರ್ವಹಣೆ ಮಾಡಿದ್ದು, ಈಗ ಮತ್ತೆ ವಿಧಾನಸಭಾ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ.ವಿಜಯಶಂಕರ್ ಅಲ್ಲದೆ, ಬಿಜೆಪಿಯಿಂದ ಒಕ್ಕಲಿಗ ಸಮುದಾಯದ ಕೌಲನಹಳ್ಳಿ ಸೋಮಶೇಖರ್, ಬಿಜೆಪಿ ತಾಲೂಕು ಘಟಕದ ಮಾಜಿ ಅಧ್ಯಕ್ಷರೂ ಆದ ವೀರಶೈವ ಸಮುದಾಯದ ಆರ್.ಟಿ.ಸತೀಶ್, ಬಿಜೆಪಿ ಮುಖಂಡರಾಗಿರುವ ನಿವೃತ್ತ ಸೈನಿಕ ವಿಕ್ರಂಗೌಡ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ತ್ರಿಕೋನ ಸ್ಪರ್ಧೆ ಸಾಧ್ಯತೆ: