ಪೆರಿಫೆರಲ್ ರಿಂಗ್ ರಸ್ತೆ ನೈಸ್ ಆಸಕ್ತಿ

prr project
Published on

ಆರ್​​.ತುಳಸಿಕುಮಾರ್​

ಬೆಂಗಳೂರು: ಮಹಾನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ರೂಪಿಸಿರುವ ಬಹುಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಯೋಜನೆಯನ್ನು ಕಾರ್ಯಗತಗೊಳಿಸಲು ‘ನೈಸ್’ ಕಂಪನಿ ಆಸಕ್ತಿ ವ್ಯಕ್ತಪಡಿಸಿದೆ. ಇತ್ತೀಚಿಗೆ ಪಿಆರ್‌ಆರ್ ಟೆಂಡರ್ 3ನೇ ಬಾರಿ ವಿಲವಾದ ಬೆನ್ನಲ್ಲೇ ಯೋಜನೆಯನ್ನು ಮೂರು ಪ್ಯಾಕೇಜ್‌ಗಳಲ್ಲಿ ಕೈಗೊಳ್ಳಲು ಬಿಡಿಎ ಆಲೋಚಿಸುತ್ತಿದ್ದು, ಇದರಲ್ಲಿ ಒಂದನ್ನು ಅನುಷ್ಠಾನಕ್ಕೆ ತರಲು ಈ ಕಂಪನಿಯು ಉತ್ಸುಕತೆ ಹೊಂದಿದೆ.

ಪಿಆರ್‌ಆರ್ ಯೋಜನೆಯು ತುಮಕುರು ರಸ್ತೆಯ ನೈಸ್ ಜಂಕ್ಷನ್‌ನಿಂದ ಆರಂಭಗೊಂಡು ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹಳೇ ಮದರಾಸು ರಸ್ತೆ ಮೂಲಕ ಹೊಸರೂ ರಸ್ತೆ ಜಂಕ್ಷನ್‌ನಲ್ಲಿ ಮುಕ್ತಾಯ ಕಾಣಲಿದೆ. ಯೋಜನೆಯ ಎರಡೂ ತುದಿಗಳಲ್ಲಿ ನೈಸ್ ರಸ್ತೆ ಸಂದಿಸುವ ಕಾರಣ ತುಮಕೂರು ರಸ್ತೆ ಅಥವಾ ಹೊಸೂರು ರಸ್ತೆಯಿಂದ ಆರಂಭವಾಗುವ 2 ಪ್ಯಾಕೇಜ್‌ಗಳಲ್ಲಿ ಪಾಲ್ಗೊಂಡು ಸುಲಭವಾಗಿ ಕಾಮಗಾರಿ ಪೂರ್ಣಗೊಳಿಸಬಹುದು ಎಂಬ ಲೆಕ್ಕಾಚಾರ ನೈಸ್ ಕಂಪನಿಯದ್ದಾಗಿದೆ.

ಈಗಾಗಲೇ ನೈಸ್ ಕಂಪನಿ ತುಮಕೂರು ರಸ್ತೆಯಿಂದ ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ ಮೂಲಕ ಹೊಸೂರು ರಸ್ತೆವರೆಗೆ ಚತುಷ್ಪಥ ಮಾರ್ಗವನ್ನು ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಮಾರ್ಗವು ನಗರದ ಸುತ್ತ ಅರ್ಧ ವರ್ತುಲಾಕಾರದಲ್ಲಿ ರೂಪಗೊಂಡಿದ್ದು, ಇನ್ನರ್ಧ ಮಾರ್ಗವು ಪಿಆರ್‌ಆರ್ ಒಳಗೊಂಡಿರುತ್ತದೆ. ಸದ್ಯ ನೈಸ್ ಬೇರೆ ಯಾವ ಯೋಜನೆಗಳನ್ನು ವಹಿಸಿ ಜಾರಿಗೊಳಿಸುವ ಹೊಣೆ ಹೊತ್ತಿಲ್ಲ. ಹೀಗಾಗಿ ಪಿಆರ್‌ಆರ್‌ನ ಒಂದು ಪ್ಯಾಕೇಜ್ ಮೂಲಕ ಮತ್ತೆ ರಸ್ತೆ ನಿರ್ಮಾಣ ಕ್ಷೇತ್ರಕ್ಕೆ ಧುಮುಕಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ನೈಸ್ ಕಂಪನಿಯ ಪ್ರತಿನಿಧಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಔಪಚಾರಿಕವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಡಿಸಿಎಂ ನೇತೃತ್ವದಲ್ಲಿ ಎಸ್‌ಪಿವಿ ರಚನೆ:

ಪ್ರಸ್ತುತ ಪಿಆರ್‌ಆರ್ ಟೆಂಡರ್‌ಅನ್ನು ಬಿಡಿಎ ಹಿಂಪಡೆದಿದೆ. ಆದರೆ, ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದೆ. ಡಿಸಿಎಂ ಕೂಡ ಇದೇ ಮಾತನ್ನು ಪುನರುಚ್ಚಿಸಿದ್ದು, ಹೊಸ ರೂಪದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ನೀಲಿನಕ್ಷೆ ತಯಾರಿಸುವಂತೆ ಬಿಡಿಎಗೆ ಸೂಚಿಸಿದ್ದಾರೆ. ಜತೆಗೆ ಯೋಜನೆಗೆ ದೊಡ್ಡ ಮೊತ್ತ ಬೇಕಿರುವ ಕಾರಣ ಈವರೆಗೆ ಯಾವ ಕಂಪನಿಯೂ ಅಷ್ಟೂ ಹಣವನ್ನು ಭರಿಸಲು ಗ್ಯಾರಂಟಿ ನೀಡಿಲ್ಲ. ಇದನ್ನು ಗಮನಿಸಿಯೇ ಈಗ ಯೋಜನೆಯನ್ನು 3 ಪ್ಯಾಕೇಜ್‌ಗಳಾಗಿ ವಿಂಗಡಿಸಿ ಜಾರಿಗೊಳಿಸಲು ಸಿದ್ಧತೆ ಆರಂಭಿಸಲಾಗಿದೆದೆ. ಈ ಪ್ರಸ್ತಾಪ ಕಾರ್ಯಗತವಾಗಲು ಡಿಸಿಎಂ ಅಧ್ಯಕ್ಷತೆಯಲ್ಲಿ ವಿಶೇಷ ಯೋಜನಾ ಘಟಕ (ಎಸ್‌ಪಿವಿ) ರಚಿಸಲಾಗಿದೆ. ಈ ಎಸ್‌ಪಿವಿ ಈಗಾಗಲೇ ತನ್ನ ಕಾರ್ಯವನ್ನು ಪ್ರಾರಂಭಿಸಿದ್ದು, ಹೊಸದಾಗಿ ಟೆಂಡರ್ ಆಹ್ವಾನಿಸಲು 3 ಅಥವಾ 4 ಪ್ಯಾಕೇಜ್‌ಗಳಲ್ಲಿ ಪಿಆರ್‌ಆರ್ ಕಾಮಗಾರಿ ಕೈಗೊಳ್ಳಲು ಬೇಕಿರುವ ತಾಂತ್ರಿಕತೆ, ಆರ್ಥಿಕ ಸಂಪನ್ಮೂಲ, ಟೋಲ್ ದರ, ರಸ್ತೆ ನಿರ್ವಹಣೆ ಇತ್ಯಾದಿ ಅಂಶಗಳತ್ತ ದೃಷ್ಟಿಹರಿಸಿದೆ.

ಮುಖ್ಯವಾಗಿ ಪಿಆರ್‌ಆರ್‌ನ ಹಾಲಿ ಮಾರ್ಗದ ಉದ್ದ 73.5 ಕಿ.ಮೀ. ಇರಲಿದೆ. ಇದನ್ನು ತುಮಕೂರು ರಸ್ತೆ - ಬಳ್ಳಾರಿ ರಸ್ತೆ, ಬಳ್ಳಾರಿ ರಸೆ ್ತ- ಹಳೇ ಮದರಾಸು ರಸ್ತೆ ಹಾಗೂ ಹಳೇ ಮದರಾಸು ರಸ್ತೆ - ಹೊಸೂರು ರಸ್ತೆ ವ್ಯಾಪ್ತಿಯೊಂದಿಗೆ ಪ್ಯಾಕೇಜ್‌ಗಳಾಗಿ ವಿಂಗಡಿಸುವುದು ಸುಲಭ ಎಂಬ ಮಾತು ಕೇಳಿಬಂದಿದೆ. ಮೊದಲೆರಡು ಪ್ಯಾಕೇಜ್‌ಗಳು ಅಂದಾಜು ತಲಾ 20 ಕಿ.ಮೀ. ಉದ್ದವಿರುವ ಕಾರಣ ಕಂಪನಿಗಳು ಆಸಕ್ತಿ ವಹಿಸಲಿವೆ. ಮೂರನೇಯ ಪ್ಯಾಕೇಜ್ ಅಂದಾಜು 30 ಕಿ.ಮೀ. ಉದ್ದ ಒಳಗೊಳ್ಳಲಿದ್ದು, ಕೊನೆಯದಾಗಿ ಕಾರ್ಯಗತಗೊಳಿಸಿದ್ದಲ್ಲಿ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬಹುದು ಎಂಬ ಚರ್ಚೆ ಅಧಿಕಾರಿ ಮಟ್ಟದಲ್ಲಿ ನಡೆದಿದೆ. ಈ ಚರ್ಚೆಯ ಸಾರಾಂಶವು ಇನ್ನಷ್ಟೇ ಡಿಸಿಎಂ ನೇತೃತ್ವದ ಎಸ್‌ಪಿವಿ ಸಭೆಯಲ್ಲಿ ಮಂಡನೆಯಾಗಿ ಸ್ಪಷ್ಟರೂಪ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ‘ವಿಜಯವಾಣಿ’ಗೆ ತಿಳಿಸಿವೆ.

ಟೋಲ್ ದರ ನಿಗದಿಗೆ ಕಸರತ್ತು:

ಪಿಆರ್‌ಆರ್ ಯೋಜನೆಗೆ ಅಗಾಧ ಹಣ ಬೇಕಿರುವ ಕಾರಣ ಟೆಂಡರ್ ಪಡೆಯುವ ಕಂಪನಿ ತಾನೂ ಹೂಡಿದ ಬಂಡವಾಳವನ್ನು ವಾಪಸ್ ಪಡೆಯಲು ಟೋಲ್ ಸಂಗ್ರಹ ಅವಧಿಯನ್ನು ಹೆಚ್ಚು ನಿಗದಿ ಮಾಡುವಂತೆ ಹಿಂದೆಯೇ ಹೇಳಿವೆ. ಈಗಲೂ ಭೂಸ್ವಾಧೀನ ಬಾಬ್ತನ್ನೂ ಕಂಪನಿಗಳೇ ಭರಿಸಬೇಕಿದ್ದಲ್ಲಿ ಟೋಲ್ ವಸೂಲಾತಿ ಅವಧಿಯನ್ನು ಅನಿವಾರ್ಯವಾಗಿ ಹೆಚ್ಚಿಸಬೇಕಾಗುತ್ತದೆ. ಜತೆಗೆ ಪ್ರತೀ ಪ್ಯಾಕೇಜ್‌ನಲ್ಲಿ ಬರುವಂತೆ ಪಿಆರ್‌ಆರ್ ಪ್ರವೇಶ/ನಿರ್ಗಮನ ಜಂಕ್ಷನ್‌ನಲ್ಲಿ ಸುಂಕ ವಸೂಲಾತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ ನೈಸ್ ತನ್ನ ರಸ್ತೆಯುದ್ದಕ್ಕೂ ಬರುವ ಪ್ರತೀ ಜಂಕ್ಷನ್‌ನಲ್ಲೂ ಟೋಲ್ ವಸೂಲು ಮಾಡುತ್ತಿದೆ. ಇದೇ ನಿಯಮವನ್ನು ಹೊಸ ಪ್ಯಾಕೇಜ್‌ನಲ್ಲಿ ಅಡಕಗೊಳಿಸಲು ಅಧಿಕಾರಿಗಳು ಉತ್ಸುಕರಾಗಿದ್ದಾರೆ.

ಪಿಆರ್‌ಆರ್ ಯೋಜನೆ ಜಾರಿಗೆ 3ನೇ ಬಾರಿ ಆಹ್ವಾನಿಸಿದ್ದ ಟೆಂಡರ್ ಕಾರ್ಯಗತವಾಗದ ಕಾರಣ ಹೊಸ ರೂಪದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. 3 ಅಥವಾ ಅದಕ್ಕಿಂತ ಹೆಚ್ಚು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸುವ ಬಗ್ಗೆ ಡಿಸಿಎಂ ನೇತೃತ್ವದ ಎಸ್‌ಪಿವಿಯಲ್ಲಿ ಚರ್ಚೆಯಾದ ಬಳಿಕ ಸ್ಪಷ್ಟತೆ ಸಿಗಲಿದೆ. ನೈಸ್ ಕಂಪನಿ ಪಿಆರ್‌ಆರ್ ಪ್ಯಾಕೇಜ್ ವಹಿಸಿಕೊಳ್ಳಲು ಅವಕಾಶವಿದ್ದು, ಆ ಬಗ್ಗೆ ನಮಗೆ ಮಾಹಿತಿ ಇಲ್ಲ.

- ಎನ್.ಜಯರಾಮ್, ಬಿಡಿಎ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net