ಪೆರಿಫೆರಲ್ ರಿಂಗ್ ರೋಡ್: ಭೂಸ್ವಾಧೀನವೇ ದೊಡ್ಡ ಸವಾಲು

myosre
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು


ತ್ವರಿತ ಗತಿಯಲ್ಲಿ ಪ್ರಗತಿ ಹೊಂದುತ್ತಿರುವ ಮೈಸೂರು ನಗರದಲ್ಲಿ ಹೊರ ಪರಿಧಿ ರಸ್ತೆ (ಪೆರಿಫೆರಲ್ ರಿಂಗ್ ರೋಡ್-ಪಿಆರ್‌ಆರ್) ನಿರ್ಮಾಣಕ್ಕೆ ಭೂಸ್ವಾಧೀನವೇ ದೊಡ್ಡ ಸವಾಲಿನ ಕೆಲಸವಾಗಿದೆ. ಯೋಜನಾ ವೆಚ್ಚಕ್ಕಿಂತ ಭೂಸ್ವಾಧೀನ ವೆಚ್ಚವೇ ಬಲು ದುಬಾರಿಯಾಗಿದೆ!


ಈ ರಸ್ತೆ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧಪಡಿಸಲು ಕ್ರಮ ವಹಿಸಲಾಗಿದ್ದು, ಖರ್ಚು-ವೆಚ್ಚಗಳ ಮಾಹಿತಿಯೊಂದಿಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರು ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಅದಕ್ಕೂ ಮುನ್ನ ಪ್ರಾಥಮಿಕ ವರದಿಯನ್ನೂ ವಿನ್ಯಾಸಗೊಳಿಸಿದೆ. ಬರೀ ರೋಡ್ ಮಾತ್ರ ನಿರ್ಮಿಸಲು ಚಿಂತಿಸಿಲ್ಲ, ಬದಲಿಗೆ ಬಹು ಉದ್ದೇಶಿತ ಯೋಜನೆಯಾಗಿ ರೂಪಿಸಲು ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.


ಅನುಮೋದಿತ ಮಾಸ್ಟರ್ ಪ್ಲಾೃನ್ ಪ್ರಕಾರ ಉದ್ದೇಶಿತ ಔಟರ್ ರಿಂಗ್‌ರೋಡ್‌ನ ಉದ್ದ 105 ಕಿಲೋಮೀಟರ್ ಇರಲಿದೆ. ಆರು ಪಥಗಳ ರಸ್ತೆಯ ಅಗಲ 90 ಮೀಟರ್ ವಿಸ್ತಾರವಾಗಿರಲಿದೆ. ಈ ಯೋಜನೆ ಕಾರ್ಯರೂಪಕ್ಕೆ ತರಲು ಅಂದಾಜು 2,350 ಎಕರೆ ಭೂಮಿ ಅಗತ್ಯವಿದೆ. ಇಷ್ಟು ಜಾಗದ ಸ್ವಾಧೀನಕ್ಕೆ ಬರೋಬ್ಬರಿ 3,550 ಕೋಟಿ ರೂ. ಬೇಕಾಗಲಿದೆ. ಆದರೆ, ಇಡೀ ಯೋಜನೆಯ ಅಭಿವೃದ್ಧಿ ವೆಚ್ಚವೇ 2,100 ಕೋಟಿ ರೂ.ಗಳೆಂದು ಸದ್ಯಕ್ಕೆ ಅಂದಾಜಿಸಲಾಗಿದೆ. ಆದರೆ, ಭೂಸ್ವಾಧೀನಕ್ಕಾಗಿಯೇ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಿದೆ. ಭೂಸ್ವಾಧೀನ ಮತ್ತು ಅಭಿವೃದ್ಧಿ ವೆಚ್ಚವನ್ನು ಸೇರಿಸಿದರೆ ಬರೋಬ್ಬರಿ 5,650 ಕೋಟಿ ರೂ. ಈ ರಸ್ತೆ ನಿರ್ಮಾಣಕ್ಕಾಗಿ ಬೇಕಾಗಲಿದೆ ಎಂದು ಮುಡಾ ಅಂದಾಜಿಸಿದೆ.


ನಗರದಲ್ಲಿ ಭೂಮಿಯ ದರ ಗಗನಕ್ಕೇರಿದೆ. ಬೆಂಗಳೂರು ನಂತರ ಇಲ್ಲಿ ರಿಯಲ್ ಎಸ್ಟೇಟ್ ನಿರೀಕ್ಷೆ ಮೀರಿ ಬೆಳೆಯುತ್ತಿದೆ. ನಗರದ ರಿಂಗ್ ರೋಡ್ ಸುತ್ತಲೂ ಈಗಾಗಲೇ ಬಡಾವಣೆಗಳು ನಿರ್ಮಾಣವಾಗಿವೆ. ಇದರಾಚೆಯೂ ಹೊಸ ಬಡಾವಣೆಗಳು ತ್ವರಿತಗತಿಯಲ್ಲಿ ತಲೆಎತ್ತುತ್ತಿವೆ. ಇದರಿಂದ ನಗರದ ಸುತ್ತಲಿನ ಭೂಮಿಗೆ ಚಿನ್ನದ ಬೆಲೆ ಬಂದಿದೆ.

ಆದ್ದರಿಂದ ವಿವಿಧ ಯೋಜನೆಗಳಿಗೆ ಭೂಸ್ವಾಧೀನವೇ ದೊಡ್ಡ ತಲೆನೋವಾಗಿದೆ. ಅಂತಹದರಲ್ಲಿ 2,350 ಎಕರೆಯಷ್ಟು ದೊಡ್ಡ ಪ್ರಮಾಣದ ಭೂಸ್ವಾಧೀನ ಬಲು ಕಷ್ಟಕರ ಕೆಲಸವಾಗಿದೆ. ಈ ರಸ್ತೆ ವ್ಯಾಪ್ತಿಗೆ ಬಹುತೇಕ ಕೃಷಿ ಭೂಮಿಯೇ ಬರಲಿದೆ. ಇದರೊಂದಿಗೆ, ಕೆಲ ಕಡೆ ಬಡಾವಣೆಗಳೂ ಇವೆ. ಜನವಸತಿ ಮನೆಗಳ ಸಂಖ್ಯೆ ಕಡಿಮೆ ಎಂದು ಅಂದಾಜಿಸಲಾಗಿದೆ.


ಭೂಮಾಲೀಕರ ಸಹಭಾಗಿತ್ವ:


ಭೂಸ್ವಾಧೀನ ಸಮಸ್ಯೆ ಸರಿದೂಗಿಸಿಕೊಳ್ಳಲು ಭೂಮಿ ನೀಡುವ ಮಾಲೀಕರ ಸಹಭಾಗಿತ್ವದಲ್ಲಿ ರಸ್ತೆ ಮತ್ತು ಇದಕ್ಕೆ ಸಂಬಂಧಿಸಿದ ಬಡಾವಣೆಯನ್ನು ಅಭಿವೃದ್ಧಿಪಡಿಸಲು ಮುಡಾ ಮುಂದಾಗಿದೆ. ಇದರಿಂದ ಭೂ ಮಾಲೀಕರಿಗೂ ಆರ್ಥಿಕ ಲಾಭವಾಗಲಿದೆ. ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯ ದೊರೆಯಲಿದೆ. ಅಭಿವೃದ್ಧಿಪಡಿಸಿದ ಭೂಮಿಯನ್ನು ಹಂಚಿಕೆ ಮೂಲಕ ಪಡೆದು ಭೂಮಾಲೀಕರು ಸಹ ಯೋಜನೆಯ ಒಂದು ಭಾಗವಾಗಲಿದ್ದಾರೆ.


ಭೂಮಾಲೀಕರಿಗೆ ಹಣ, ಬೇರೆ ಕಡೆ ಭೂಮಿ:


ಭೂಮಾಲೀಕರಿಗೆ ಆ ಜಾಗದ ಬೆಲೆಯ ಹಣ ಅಥವಾ ಬೇರೆ ಭೂಮಿಯನ್ನು ನೀಡುವ ಸೂತ್ರವನ್ನು ಸಿದ್ಧಪಡಿಸಲಾಗಿದೆ. ಅಭಿವೃದ್ಧಿ ಮಾಡಿದ ಬಡಾವಣೆಯಲ್ಲಿ ನಿವೇಶನವನ್ನೂ ನೀಡಲು ಉದ್ದೇಶಿಸಲಾಗಿದೆ. ಅಲ್ಲಿ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ, ಬೀದಿದೀಪ, ರಸ್ತೆ, ಕಸ ನಿರ್ವಹಣೆ ಇನ್ನಿತರ ಸೌಲಭ್ಯ ಇರಲಿವೆ. ಜತೆಗೆ, ಸರ್ಕಾರ ಮತ್ತು ಮುಡಾಕ್ಕೂ ಅನುಕೂಲವಾಗುವಂತೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಶೇ.7ರಿಂದ 10ರಷ್ಟು ಜಾಗವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಮೂಲಸೌಕರ್ಯಗಳ ಖರ್ಚುಗಳನ್ನು ಭರಿಸಿಕೊಳ್ಳಲು ಚಿಂತಿಸಲಾಗಿದೆ.


6 ಕಡೆ ಕ್ಲಸ್ಟರ್ ನಿರ್ಮಾಣ:


ಈ ರಸ್ತೆಯೊಂದಿಗೆ ಯೋಜನಾಬದ್ಧ ವಾಣಿಜ್ಯ, ವಸತಿ, ಬಹು ಉದ್ದೇಶಿತ ಬಡಾವಣೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಆರು ಕ್ಲಸ್ಟರ್‌ಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಪಾರಂಪರಿಕ-ಕ್ರೀಡಾ ಗ್ರಾಮ, ಔಷಧೀಯ ವಲಯ, ಬಟ್ಟೆ ತಯಾರಿಸುವ ಗಾರ್ಮೆಂಟ್ಸ್ ವಲಯ, ಮಾಹಿತಿ ತಂತ್ರಜ್ಞಾನ- ಜೈವಿಕ ತಂತ್ರಜ್ಞಾನ(ಐಟಿ-ಬಿಟಿ) ವಲಯ, ಶಿಕ್ಷಣ-ಆರೋಗ್ಯ ವಲಯ, ಹಾರ್ಡ್‌ವೇರ್-ಸಾಫ್ಟ್ ವೇರ್ ವಲಯ ಎಂಬ ಕ್ಲಸ್ಟರ್ ನಿರ್ಮಾಣ ಮಾಡಲು ಆಲೋಚಿಸಲಾಗಿದೆ. ಇದು ಮುಡಾ ಮತ್ತು ಸರ್ಕಾರದ ಮೇಲೆ ಉಂಟಾಗುವ ಆರ್ಥಿಕ ಹೊರೆ ಕಡಿಮೆ ಮಾಡುವ ಉಪಕ್ರಮವಾಗಿದೆ.


ಉದ್ಯೋಗ ಅವಕಾಶವೂ ಸೃಷ್ಟಿ:


ಪಿಆರ್‌ಆರ್ ಯೋಜನೆಯಿಂದ ಅನೇಕ ಲಾಭವಾಗಲಿದೆ. ಜನಸಂಪರ್ಕ, ಕ್ಲಸ್ಟರ್‌ಗಳ ಅಭಿವೃದ್ಧಿ, ರಸ್ತೆ ಸಂಪರ್ಕಗಳ ಉನ್ನತೀಕರಣ, ನಗರ ಅಭಿವೃದ್ಧಿಗೆ ಪೂರಕವಾಗಲಿದೆ. ಇದರೊಂದಿಗೆ, ಈ ರಸ್ತೆ ಸುತ್ತಲು ಕೈಗಾರಿಕೆ ಪ್ರಗತಿಗೂ ವೇಗವರ್ಧನೆ ದೊರೆಯಲಿದೆ. ತ್ವರಿತಗತಿಯಲ್ಲಿ ಸ್ಥಳೀಯ ಉದ್ಯೋಗ ಅವಕಾಶವೂ ಸೃಷ್ಟಿಯಾಗಲಿದೆ ಎಂದು ಮುಡಾ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದರು.


ಈ ರಸ್ತೆಯಲ್ಲಿ ವಿವಿಧ ಸೌಕರ್ಯ ಕಲ್ಪಿಸಿಕೊಡಲಾಗುತ್ತದೆ. ಉದ್ಯಾನ, ಪೆಟ್ರೋಲ್ ಬಂಕ್, ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರ, ಹೋಟೆಲ್, ಆಟೋ ವರ್ಕ್‌ಶಾಪ್, ಗೋದಾಮುಗಳು, ವೈದ್ಯಕೀಯ ಕ್ಲಿನಿಕ್ ಸೌಲಭ್ಯವೂ ಇರಲಿದೆ. ಭವಿಷ್ಯದಲ್ಲಿ 20ರಿಂದ 30 ಮೀಟರ್ ರಸ್ತೆ ವಿಸ್ತರಣೆಗೆ ಅನುವು ಆಗುವಂತೆ ಈ ಯೋಜನೆ ರೂಪಿಸಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.


ಮೈಸೂರಿನಲ್ಲಿ ನಗರ ಹೊರ ಪರಿಧಿ ರಸ್ತೆ ನಿರ್ಮಾಣ ಮಾಡಲಾಗುವುದು. ವೇಗವಾಗಿ ಬೆಳೆಯುತ್ತಿರುವ ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಇದನ್ನು ರೂಪಿಸಲಾಗಿದೆ. ಈ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದವರಿಗೆ ಆ ಜಾಗದ ಬೆಲೆಯ ಹಣ ಅಥವಾ ಬೇರೆ ಭೂಮಿಯನ್ನು ನೀಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.
ಬಿ.ಎಸ್. ಸುರೇಶ್
ಸಚಿವ ನಗರಾಭಿವೃದ್ಧಿ ಮತ್ತು ನಗರ ಯೋಜನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net