

ಶಿಗ್ಗಾಂವಿ(ಗ್ರಾ): ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಮನುಕುಲಕ್ಕೆ ಮುಖ್ಯವಾಗಿದೆ. ಆದ್ದರಿಂದ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ, ಗಂಗಮ್ಮ ಎಸ್.ಬೊಮ್ಮಾಯಿ ಟ್ರಸ್ಟ್, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಜನರು ಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಅವರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂಬುದನ್ನು ಅರಿತಿರುವ ಜನಪರ ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರಗಳನ್ನು ಆಯೋಜಿಸುತ್ತಿವೆ ಎಂದರು.
ನರರೋಗ ತಜ್ಞ ಡಾ. ಕ್ರಾಂತಿಕಿರಣ ಮಾತನಾಡಿ, ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಾವು ಆರೋಗ್ಯವಾಗಿದ್ದು, ಸಮಾಜದ ಆರೋಗ್ಯವನ್ನು ಕಾಪಾಡುವುದರ ಮೂಲಕ ಸ್ವಾಸ್ಥ ಸಮಾಜ ನಿರ್ಮಿಸಬಹುದಾಗಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮೃತ್ಯುಂಜಯ ತಿರ್ಲಾಪುರ ಮಾತನಾಡಿದರು. ಹೋತನಹಳ್ಳಿ ಸಿಂದಗಿ ಶಾಖಾಮಠದ ಶ್ರೀ ಶಂಭುಲಿಂಗ ಪಟ್ಟಾಧ್ಯಕ್ಷರು ಸಾನ್ನಿಧ್ಯ ವಹಿಸಿದ್ದರು.
ಶಿಬಿರದಲ್ಲಿ 600ಕ್ಕೂ ಅಧಿಕ ಜನ ಚಿಕಿತ್ಸೆ ಮತ್ತು ಔಷಧ ಪಡೆದುಕೊಂಡರು. 22ಜನರನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷೆ ಲಲಿತಾ ಸವಣೂರ, ಉಪಾಧ್ಯಕ್ಷ ಬಸನಗೌಡ ಕೆಮ್ಮಣಕೇರಿ, ನರಹರಿ ಕಟ್ಟಿ, ಡಾ. ಆನಂದ ಕಟ್ಟಿ, ಡಾ. ಹರಿಕೃಷ್ಣ, ಡಾ. ಶ್ರೀನಿವಾಸ ಜೋಷಿ, ನಾಗಪ್ಪ ಮೂಡೂರ, ಪ್ರವೀಣ ಗೂಳಣ್ಣವರ, ಧರ್ಮಣ್ಣ ಭಂಗಿ, ಚಂದ್ರಣ್ಣ ಬೆಳವತ್ತಿ ಇತರರು ಉಪಸ್ಥಿತರಿದ್ದರು.