ಕರೊನಾ ಸೋಂಕು ತಡೆಗೆ ತಂಡಗಳ ಕಾರ್ಯನಿರ್ವಹಣೆ

21mdkj4
Published on

ಮಡಿಕೇರಿ: ಕೋವಿಡ್-19 ನಿಯಂತ್ರಣ ಸಂಬಂಧ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಉಸ್ತುವಾರಿಯಲ್ಲಿ ಬಿಎಲ್‌ಒ, ನಗರಸಭೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘಗಳನ್ನೊಳಗೊಂಡ ತಂಡವನ್ನು ಪ್ರತಿ ವಾರ್ಡ್‌ನಲ್ಲಿಯೂ ರಚಿಸಲಾಗಿದೆ ಎಂದು ಪೌರಾಯುಕ್ತ ಶ್ರೀನಿವಾಸ್ ಹೇಳಿದರು.

ಮಡಿಕೇರಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೋವಿಡ್ ನಿಯಂತ್ರಣ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಈ ತಂಡಗಳು ಕರೊನಾ ಪಾಸಿಟಿವ್ ಪ್ರಕರಣ ಬಂದ ಸಂದರ್ಭ ಅದನ್ನು ನಿರ್ವಹಿಸಲಿದೆ. ಸಣ್ಣ-ಪುಟ್ಟ ಸಮಸ್ಯೆ ಸ್ಥಳೀಯವಾಗಿಯೇ ಬಗೆಹರಿಸಿಕೊಂಡು ಕಾರ್ಯನಿರ್ವಸಲಿವೆ. ವೃದ್ಧರು, ಅನಾರೋಗ್ಯ ಪೀಡಿತರ ವಿವರ ಸಂಗ್ರಹಿಸಲಿದೆ. 120 ಜನರು ಪ್ರತ್ಯೇಕ ತಂಡಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಕೋವಿಡ್ ಬಗ್ಗೆ ಭಯ ಬೇಡ. ಎಚ್ಚರಿಕೆ ಇರಲಿ ಎಂಬ ಸಂದೇಶದಡಿ ಪ್ರತಿ ವಾರ್ಡ್‌ನಲ್ಲಿಯೂ ಸಹ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ ಮತ್ತು ಅದರ ಮಹತ್ವ, ವೈಯಕ್ತಿಕ ಶುಚಿತ್ವ, ಸ್ಯಾನಿಟೈಸರ್ ಬಳಕೆ ಮತ್ತು ಮಾಸ್ಕ್ ಧರಿಸುವ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಮೂಲಕ ಕೋವಿಡ್-19 ಸಂಬಂಧ ಸಾರ್ವಜನಿಕರಲ್ಲಿನ ಗೊಂದಲ ಮತ್ತು ಭಯ ನಿವಾರಿಸುವ ಮತ್ತು ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಅರಿವು ಮೂಡಿಸಲಾಗುತ್ತಿದೆ ಎಂದರು.

ರಾಜ್ಯಮಟ್ಟದಲ್ಲಿ ಆನ್‌ಲೈನ್ ಮೂಲಕ ತರಬೇತಿ ಕಾರ್ಯಗಾರ ನಡೆಸಲಾಗಿದೆ. ಈ ತರಬೇತಿಯಲ್ಲಿ 4 ನಗರ ಸ್ಥಳೀಯ ಸಂಸ್ಥೆಯ ಉಸ್ತುವಾರಿ, ಅಧಿಕಾರಿ, ಸಿಬ್ಬಂದಿ ಸೇರಿದಂತೆ ಇತರರು ಭಾಗಿಯಾಗಿ ತರಬೇತಿ ಪಡೆದುಕೊಂಡಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಪಾಸಿಟಿವ್ ಪ್ರಕರಣ ಬಂದ ಸಂದರ್ಭ ಅಂತಹ ಕಟ್ಟಡ ಸ್ಯಾನಿಟೈಸೇಷನ್ ಮಾಡುವ ಕಾರ್ಯನಿರ್ವಹಣೆ, ಸೋಂಕಿನಿಂದ ಮೃತರಾದವರ ಶವ ಸಂಸ್ಕಾರ ಸಂದರ್ಭ ಪೌರಕಾರ್ಮಿಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net