ಮನಸ್ಸು ಮಾಡಿದರೆ ಸಾಧನೆ ಸುಲಭ

12_07_Mdy_Food Kit
Published on

ಮಂಡ್ಯ: ಶಿಕ್ಷಣ ಇಲಾಖೆ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಮೂಲಕ ತೋರಿಸಿಕೊಟ್ಟಿದ್ದೇವೆ ಎಂದು ಡಿಡಿಪಿಐ ಆರ್.ರಘುನಂದನ್ ಹೇಳಿದರು.

ನಗರದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿರುವ ಬ್ರೈಟ್ ಗುರುಕುಲ ಅಕಾಡೆಮಿ ಆವರಣದಲ್ಲಿ ಶನಿವಾರ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಮತ್ತು ಸತ್ಯ ಎಜುಕೇಟ್ ಕಾಂಪಿಟೇನ್ಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದ ಅವರು ಮಾತನಾಡಿದರು.

ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷೆಯನ್ನು ಮಾತ್ರ ನಡೆಸಲಿಲ್ಲ. ಪರೀಕ್ಷೆಯ ಸಂದರ್ಭದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ, ಪರಸ್ಪರ ಅಂತರ ಮತ್ತಿತರ ಮಹತ್ವದ ವಿಚಾರಗಳನ್ನು ತಿಳಿಸಿಕೊಟ್ಟು ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಪಾಡಲಾಗಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗದೇ ಪರೀಕ್ಷೆಯನ್ನೇ ರದ್ದುಪಡಿಸಿರುವಾಗ ಕರ್ನಾಟಕದಲ್ಲಿ 8.5 ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಯಶಸ್ವಿಯಾಗಿದ್ದೇವೆ. ಶಿಕ್ಷಣ ಸಚಿವರು ಪರೀಕ್ಷೆ ಘೋಷಣೆ ಮಾಡಿದ ಸಂದರ್ಭದಲ್ಲಿ ಹಲವರು ಅದನ್ನು ವಿರೋಧಿಸಿದ್ದೂ ಉಂಟು. ಇದೊಂದು ಸವಾಲಿನ ಕೆಲಸವೂ ಆಗಿತ್ತು. ಆದರೂ ಶಿಕ್ಷಣ ಇಲಾಖೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳೇ ಮೇಲುಗೈ ಸಾಧಿಸುತ್ತಿರುವುದು ಹೆಮ್ಮೆಯ ವಿಚಾರ. ಕೋವಿಡ್‌ನಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಅನುಮತಿ ನೀಡಿದ್ದರೂ, ಪಾಲಕರಿಂದ ಬಲವಂತವಾಗಿ ಶುಲ್ಕ ವಸೂಲಾತಿ ಮಾಡಬಾರದೆಂಬ ಕಠಿಣ ಆದೇಶ ಹೊರಡಿಸಿದೆ ಎಂದರು.

ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಾಳೇಗೌಡ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಭಾಗ ಬಿಜೆಪಿ ಉಸ್ತುವಾರಿ ಮೈ.ವಿ.ರವಿಶಂಕರ್, ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಾಜು, ಅಕ್ಷರ ದಾಸೋಹ ಯೋಜನೆ ಇಒ ನಟರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net