ಕಾನೂನು ಪಾಲನೆಯೊಂದಿಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ

ವರ್ಗಾವಣೆ ಹಾಗೂ ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೆ.ಎಂ.ದೊಡ್ಡಿಯ ಬಾಲಾಜಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.
ವರ್ಗಾವಣೆ ಹಾಗೂ ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೆ.ಎಂ.ದೊಡ್ಡಿಯ ಬಾಲಾಜಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.
Published on

ಕೆ.ಎಂ.ದೊಡ್ಡಿ: ಕರ್ತವ್ಯದಲ್ಲಿರುವಾಗ ಪೊಲೀಸ್ ಅಧಿಕಾರಿಗಳು ಜನಾನುರಾಗಿ ಸಾರ್ವಜನಿಕರಿಗೆ ಸೇವೆ ನೀಡಿದಾಗ ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದು ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಎಂ.ಕೃಷ್ಣಪ್ಪ ತಿಳಿಸಿದರು.

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಹಾಗೂ ಪದೋನ್ನತಿ ಹೊಂದಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇಲ್ಲಿನ ಬಾಲಾಜಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವರ್ಗಾವಣೆ, ಪದೋನ್ನತಿ ಹಾಗೂ ನಿವೃತ್ತಿ ಸಾಮಾನ್ಯ. ಹಾಗಾಗಿ ಕರ್ತವ್ಯ ನಿರ್ವಹಿಸುವುದರ ಜತೆಗೆ ಕಾನೂನಿನ ಪಾಲನೆಯೊಂದಿಗೆ ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಜನಸಾಮಾನ್ಯರ ವಿಶ್ವಾಸ ಗಳಿಸಿದರೆ ಅದು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ. ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್, ಯಾವುದೇ ಠಾಣೆಯಲ್ಲಿ ಕರ್ತವ್ಯ ನಿರ್ವಾಹಿಸಿದರೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಗ ಅರ್ಧದಷ್ಟು ಕೆಲಸವಾಗುತ್ತದೆ. ಜತೆಗೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿ ಎಂದರು.

ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದು ಠಾಣೆಯಲ್ಲಿ ಕರ್ತವ್ಯ ಸಲ್ಲಿಸುವಾಗ ಮೇಲಧಿಕಾರಿಗಳು, ಹಿರಿಯ ಅಧಿಕಾರಿಗಳಿಂದ ಹಲವಾರು ವಿಷಯಗಳನ್ನು ಕಲಿತು ಕಾನೂನು ಸುವ್ಯವಸ್ಥೆ ಕಾಪಾಡುತ್ತಾರೆ. ಒಂದು ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಬೇಕಾದರೆ ಸಾರ್ವಜನಿಕರ ಸಹಕಾರದ ಜತೆಗೆ ಠಾಣಾ ಸಿಬ್ಬಂದಿ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಿಂದ ಮದ್ದೂರು ಸಂಚಾರ ಠಾಣೆಗೆ ಸಬ್ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆಗೊಂಡ ರಾಮಸ್ವಾಮಿ, ಕೊಪ್ಪ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಭೀಮಪ್ಪ ಬಾಣಾಸಿ, ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಆಗಿ ಪದೋನ್ನತಿ ಹೊಂದಿದ ರವಿಶಂಕರ್, ಹಲಗೂರು ಠಾಣೆಗೆ ವರ್ಗಾವಣೆಗೊಂಡ ಮೂಝ್ಯ ಪೇದೆ ರಾಜಶೇಖರ್, ಮಂಡ್ಯ ಸೆಂಟ್ರಲ್ ಠಾಣೆಗೆ ವರ್ಗಾವಣೆ ಗೊಂಡ ಮುಖ್ಯ ಪೇದೆ ಮಹೇಶ್, ಅರಕೆರೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಮಹೇಶ್ ಹಾಗೂ ಮದ್ದೂರು ಠಾಣೆಗೆ ವರ್ಗಾವಣೆಗೊಂಡ ಮಹೇಶ್ ಅವರನ್ನು ಅಭಿನಂದಸಲಾಯಿತು.

ಸಬ್ ಇನ್‌ಸ್ಪೆಕ್ಟರ್ ದೇವರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net