ಗುಣಮಟ್ಟದ ಕಾಮಗಾರಿ ನಡೆಸಿ

Perform quality work
ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡರು ಪಿಡಬ್ಲುೃಡಿ, ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸರ್ಕಾರಿ ಹಾಸ್ಟೇಲ್ ಕಟ್ಟಡಕ್ಕೆ ಬಳಸಲಾಗುತ್ತಿರುವ ಕಳಪೆ ಮರಳನ್ನು ಪರಿಶೀಲಿಸಿದರು. ಎಡಿ ಉಮೇಶ ಲಮಾಣಿ, ಗುತ್ತಿಗೆದಾರ ಪ್ರತಿನಿಧಿ ನಾಗರಾಜ, ವಾರ್ಡನ್ ಎಸ್.ಜಿ. ವಾಲಿಕಾರ ಮತ್ತಿತರರು ಇದ್ದರು.
Published on

ಮುದ್ದೇಬಿಹಾಳ: ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ಎಲ್ಲೆಲ್ಲಿ ಕಳಪೆ ಗುಣಮಟ್ಟದ ಕೆಲಸ ನಡೆದಿದೆಯೋ ಅದೆಲ್ಲವನ್ನೂ ತೆಗೆದು ಹಾಕಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಮತ್ತು ಕಾಮಗಾರಿಗಳಿಗೆ ಗುಣಮಟ್ಟದ ಮರಳು ಕಡ್ಡಾಯವಾಗಿ ಬಳಸಬೇಕು ಎಂದು ಶಾಸಕ ಸಿ.ಎಸ್. ನಾಡಗೌಡರು ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚಿಸಿದರು.

ಹುಡ್ಕೋ ಹತ್ತಿರ ನಿರ್ಮಾಣಗೊಂಡಿರುವ ಹೊಸ ಪ್ರವಾಸಿಮಂದಿರ, ಶಾಸಕರ ಭವನ, ಮಾರುತಿ ನಗರದಲ್ಲಿ ನಿರ್ಮಾಣಗೊಳ್ಳಲಿರುವ ಸಮಾಜಕಲ್ಯಾಣ ಇಲಾಖೆಯ ನಿಯೋಜಿತ ಬಾಲಕಿಯರ ಹಾಸ್ಟೇಲ್ ಕಟ್ಟಡದ ನಿವೇಶನ, ಪಿಲೇಕೆಮ್ಮ ನಗರದಲ್ಲಿ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ನಿರ್ಮಾಣಗೊಳ್ಳುತ್ತಿರುವ ಸಮಾಜಕಲ್ಯಾಣ ಇಲಾಖೆಯ ಬಾಲಕರ ಹಾಸ್ಟೇಲ್ ಕಟ್ಟಡ ಮತ್ತು ಆಲಮಟ್ಟಿ ರಸ್ತೆ ಪಕ್ಕದ ನಾಯ್ಡು ಬಡಾವಣೆಯ ಹತ್ತಿರ ಲೋಕಾರ್ಪಣೆಗೆ ಸಿದ್ಧವಾಗಿರುವ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಟ್ಟಡಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಪ್ರವಾಸಿಮಂದಿರ, ಶಾಸಕರ ಭವನ ಕಾಮಗಾರಿ ಪರಿಶೀಲಿಸಿದ ಶಾಸಕರು, 2017ರಲ್ಲಿ ತಾವು ಶಾಸಕರಾಗಿದ್ದಾಗ ಈ ಸ್ಥಳ ಗುರ್ತಿಸಿ ಆಗಲೇ 2ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿಸಲಾಗಿತ್ತು. 6ವರ್ಷ ಕಳೆದರೂ ಕಟ್ಟಡ ಲೋಕಾರ್ಪಣೆಗೊಂಡಿಲ್ಲವೇಕೆ ಎಂದು ಪ್ರಶ್ನಿಸಿದ ಅವರು, ಮುಖ್ಯ ಕಟ್ಟಡ ಗುಣಮಟ್ಟದಲ್ಲಿದ್ದರೂ ಸುತ್ತಲಿನ ಹೊರಭಾಗದ ನೆಲಹಾಸಿನ, ಮೆಟ್ಟಿಲುಗಳ ಕಾಮಗಾರಿ ಕಳಪೆಯಾಗಿ ಅಲ್ಲಲ್ಲಿ ಬಿರುಕು ಬಿಟ್ಟಿರುವುದನ್ನು ನೋಡಿ ಅದೆಲ್ಲವನ್ನೂ ತೆಗೆದು ಹಾಕಿ ಹೊಸದಾಗಿ ನಿರ್ಮಿಸುವಂತೆ ಸೂಚಿಸಿದರು.

ಕಟ್ಟಡದ ಕೋಣೆಗಳಲ್ಲಿ ಒಂದೆರಡು ಕೋಣೆಗಳ ಬಾಗಿಲನ್ನು ಮೂಲ ನಕ್ಷೆಯಲ್ಲಿರುವಂತೆ ಮಾಡದೆ ಬದಲಾಯಿಸಿದ್ದನ್ನು ಕಂಡು ಸರಿಪಡಿಸಲು ತಿಳಿಸಿ ಹೇಗೆ ಮಾಡಬೇಕು ಅನ್ನೋದನ್ನು ತಾವೇ ನಕ್ಷೆಯಲ್ಲಿ ಗುರ್ತು ಹಾಕಿಕೊಟ್ಟು ಸಣ್ಣಪುಟ್ಟ ಬದಲಾವಣೆಗೆ ಸಲಹೆ ನೀಡಿದರು.

ಮುಖ್ಯಮಂತ್ರಿ, ಸಚಿವರು, ನ್ಯಾಯಾಧೀಶರು ಸೇರಿ ವಿವಿಐಪಿಗಳಿಗೆ ಮಾತ್ರ ಕಟ್ಟಡ ಮೀಸಲಿಡಬೇಕು. ಮುಂಭಾಗದ 3 ಕೋಣೆಗಳಲ್ಲಿ ಶಾಸಕರ ಕಚೇರಿಗೆ ವ್ಯವಸ್ಥೆ ಮಾಡಬೇಕು. ಮೇಲ್ಭಾಗದಲ್ಲಿ ಪಕ್ಷಿಗಳು ಒಳನುಸುಳದಂತೆ ವೆಲ್ಡಿಂಗ್ ಮೆಸ್, ಬಿಸಿನೀರಿಗಾಗಿ ಸೋಲಾರ್ ಅಳವಡಿಸಬೇಕು. ಹೊಸದಾಗಿ ಬಿಡುಗಡೆ ಮಾಡಿಸಿರುವ 25 ಲಕ್ಷ ರೂ. ಅನುದಾನದಲ್ಲಿ ಕಟ್ಟಡದ ಹಿಂದೆ ಖಾಲಿ ಉಳಿದ ಜಾಗದಲ್ಲಿ ಕೊಠಡಿ ನಿರ್ಮಿಸುವುದನ್ನು ಮುಂದುವರೆಸಬೇಕು ಎಂದು ಎಇಇಗೆ ಸೂಚಿಸಿದರು.

ಮಡಿವಾಳೇಶ್ವರ ಮಠದ ಹತ್ತಿರ ಸಮಾಜಕಲ್ಯಾಣ ಇಲಾಖೆಯ ನಿವೇಶನಕ್ಕೆ ಭೇಟಿ ನೀಡಿದ ಶಾಸಕರು ಸರ್ಕಾರಿ ಬಾಲಕಿಯರ ಹಾಸ್ಟೇಲ್ ಕಟ್ಟಡದ ನೀಲನಕ್ಷೆ ಪರಿಶೀಲಿಸಿದರು. ಬಾಲಕಿಯರ ಸುರಕ್ಷತೆಯ ದೃಷ್ಟಿಯಿಂದ ಈ ನಿವೇಶನ ಸರಿಯಾದದ್ದಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿ ಬೇರೆ ಜಾಗ ಇದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಬೇರೆ ಜಾಗ ಇಲ್ಲ ಎನ್ನುವ ಮಾಹಿತಿ ಪಡೆದು ಇಲ್ಲಿ ಹಾಸ್ಟೇಲ್ ನಿರ್ಮಿಸಿದರೆ ಭದ್ರತೆ, ಮೂಲ ಸೌಕರ್ಯ, ಸಾರಿಗೆ ಸೌಲಭ್ಯಗಳಿಗೆ ಸಮಸ್ಯೆ ಆಗಬಹುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ತಂಗಡಗಿ ರಸ್ತೆಪಕ್ಕದ ಪಿಲೇಕೆಮ್ಮ ನಗರದಲ್ಲಿ ಜ್ಞಾನಭಾರತಿ ಶಾಲೆ ಪಕ್ಕದಲ್ಲಿ ಸಮಾಜಕಲ್ಯಾಣ ಇಲಾಖೆಯಡಿ ಬರುವ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ 4.40 ಕೋಟಿ ರೂ. ಅನುದಾನದಲ್ಲಿ ಕಟ್ಟಲಾಗುತ್ತಿರುವ 45ಕ್ಕೂ ಹೆಚ್ಚು ಕೊಠಡಿಗಳ ಮೂರಂತಸ್ತಿನ ಸರ್ಕಾರಿ ಬಾಲಕರ ಹಾಸ್ಟೇಲ್ ಕಟ್ಟಡಕ್ಕೆ ಭೇಟಿ ನೀಡಿದ ಶಾಸಕರು ಕಾಮಗಾರಿಗೆ ಕಳಪೆ ಗುಣಮಟ್ಟದ ಮರಳು ಬಳಸುತ್ತಿರುವುದನ್ನು ಪತ್ತೆ ಹಚ್ಚಿ ಗುತ್ತಿಗೆದಾರ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಂಡು ಗುಣಮಟ್ಟದ ಮರಳು ಬಳಸುವಂತೆ ಸೂಚಿಸಿದರು.

ಆಲಮಟ್ಟಿ ರಸ್ತೆ ಪಕ್ಕದ ನಾಯ್ಡು ಬಡಾವಣೆಯ ಹತ್ತಿರ ಸುಂದರವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿರುವ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಟ್ಟಡ ಪರಿಶೀಲಿಸಿ ಗುಣಮಟ್ಟ ಮತ್ತು ವಾಸ್ತುವಿಗನುಸಾರದ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಮುಖ್ಯಮಂತ್ರಿಗಳು ಫೆಬ್ರುವರಿಯಲ್ಲಿ ಆಗಮಿಸಲಿದ್ದು, ಅಷ್ಟರೊಳಗೆ ಲೋಕಾರ್ಪಣೆಗೊಳಿಸಲು ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.

ಪಿಡಬ್ಲುೃಡಿ ಎಇಇ ಎಸ್.ಜಿ. ಶಿವನಗುತ್ತಿ, ಸೆಕ್ಷನ್ ಅಧಿಕಾರಿಗಳಾದ ಎಇ ರಾಜು ಚವ್ಹಾಣ, ಎಇ ಗೌರೀಶ ನಡಗಡ್ಡಿ, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ (ಗ್ರೇಡ್-2) ಉಮೇಶ ಲಮಾಣಿ, ವಾರ್ಡನ್ ಎಸ್.ಜಿ. ವಾಲೀಕಾರ, ಗುತ್ತಿಗೆದಾರ ಪ್ರತಿನಿಧಿ ನಾಗರಾಜ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ, ಉಪವಲಯ ಅರಣ್ಯಾಧಿಕಾರಿ ಎಂ.ಎಚ್. ತೇಲಿ, ರಮೇಶ ಮೆಟಗುಡ್ಡ ಅವರು ತಮ್ಮ ಇಲಾಖೆ ವ್ಯಾಪ್ತಿಯ ಕಾವಗಾರಿಗಳ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net