

ಹಿರೇಕೆರೂರ: ಕಾರ್ಯಾಂಗ ಮತ್ತು ಶಾಸಕಾಂಗ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜನಸಾಮಾನ್ಯರ ಸೇವೆ ಮಾಡಲು ಈ ಎರಡೂ ಅಂಗಗಳು ಕಂಕಣಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ 2022-23ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ, ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿಗಳಲ್ಲಿ ಉನ್ನತ ಶ್ರೇಣಿ ಪಡೆದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನೌಕರರು ಸರ್ಕಾರದ ಆಶಯದಂತೆ ಕೆಲಸ ಮಾಡುವ ಮೂಲಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಬೇಕು. ಸೇವಾ ಅವಧಿಯಲ್ಲಿ ಮಾಡಿದ ಕೆಲಸಗಳೇ ನಿವೃತ್ತಿ ಜೀವನದಲ್ಲಿ ಸುಂದರ ಕ್ಷಣಗಳಾಗಲಿವೆ ಎಂದರು.
ಅಧ್ಯಕ್ಷರ ಮನವಿಯಂತೆ ಸಂಘದ ಕಟ್ಟಡಕ್ಕಾಗಿ ಶಾಸಕರ ಅನುದಾನದಿಂದ 5 ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ನೌಕರರ ಸಂಘದ ಅಧ್ಯಕ್ಷ ಡಾ.ಎಸ್.ಪಿ. ಗೌಡರ ಮಾತನಾಡಿ, ಸಂಘವು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ನೌಕರರ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಸಂಘದ ಚಟುವಟಿಕೆಗಳಲ್ಲಿ ನೌಕರರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಂಘದ ಶಕ್ತಿಯನ್ನು ಇನ್ನಷ್ಟು ಬಲಪಡಿಸಬೇಕು ಎಂದರು.
ತಾಪಂ ಇಒ ಶಶಿಧರ ಎಚ್., ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎನ್. ಸುರೇಶಕುಮಾರ, ಅಕ್ಷರ ದಾಸೋಹ ಅಧಿಕಾರಿ ಮಾರುತೆಪ್ಪ ಕೆ.ಎಚ್., ರಾಜ್ಯ ಪರಿಷತ್ ಸದಸ್ಯ ಎನ್.ಎಸ್. ಹೆಗ್ಗೇರಿ, ಖಜಾಂಚಿ ಸುರೇಶ ಮಲ್ಲಾಡದ, ಕಾರ್ಯದರ್ಶಿ ಕುಮಾರ ಮಡಿವಾಳ, ತಾಲೂಕಿನ ವೃಂದ ಸಂಘಗಳ ಅಧ್ಯಕ್ಷ ಕುಮಾರ ಪುಟ್ಟಪ್ಪಗೌಡ್ರ, ಅಶೋಕ ಬಡಗೌಡ್ರ, ಕೃಷ್ಣಪ್ಪ ಯತ್ತಿನಹಳ್ಳಿ, ಸಿ.ಎಸ್. ಚಳಗೇರಿ, ಬಿ.ವಿ. ಸೊರಟೂರ, ಚಂದ್ರಕಲಾ ನಂದೆಣ್ಣವರ, ಸುಧಾ ಟಿ.ಆರ್., ಚಂದ್ರಶೇಖರ ಕಣ್ಣಪ್ಪಳವರ, ಸತೀಶಕುಮಾರ ಎಂ.ಎನ್., ಯುವರಾಜ ಭಜಂತ್ರಿ, ಶಿವಕುಮಾರ ಬಂಗೇರ, ಸುರೇಶ ಹಾವನೂರ, ಮಹೇಶ ಮರಿಗೌಡರ, ಪ್ರೊ. ಹೇಮಲತಾ ಕೆ., ಡಿ.ಟಿ. ಲಮಾಣಿ ಮಂಜುಳಾ ಎಸ್.ಕೆ., ಮಂಗಳಾ ಗುಬ್ಬಿ, ಕೆ.ಸಿ. ನಂಜುಂಡಪ್ಪ, ಬಸನಗೌಡ ಮುದುಕನಗೌಡರ, ಮನೋಜ ಪಾಟೀಲ ಇತರರಿದ್ದರು.