ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ

1 vikram 1
Published on

ಧಾರವಾಡ: ಪೊಲೀಸ್ ಹಾಗೂ ಕಾರಾಗೃಹ ಇಲಾಖೆಗೆ ಸೇರುವ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ಷಮತೆ, ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ ವೃತ್ತಿಪರತೆ ಅಳವಡಿಸಿಕೊಳ್ಳಬೇಕು ಎಂದು ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ ಹೇಳಿದರು.

ನಗರದ ಪೊಲೀಸ್ ಇಲಾಖೆ ಡಿಎಆರ್ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 22ನೇ ತಂಡದ ಹಾಗೂ 2ನೇ ಕಾರಾಗೃಹ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಲಾಖೆಯಲ್ಲಿ ಸೇವೆ ಸಲ್ಲಿಸುವವರಿಗೆ ಮಾನಸಿಕ ಧೈರ್ಯ, ದೈಹಿಕ ಸದೃಢತೆ ಮತ್ತು ಪರಿಸ್ಥಿತಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮನೋಬಲ ಇರಬೇಕು. ಪ್ರತಿ ಶಿಕ್ಷಣಾರ್ಥಿಗೆ ಆತ್ಮಸ್ಥೈರ್ಯ ತುಂಬುವ, ಕೌಶಲ ಕಲಿಸುವ ತರಬೇತಿ ನೀಡಲಾಗುತ್ತಿದೆ. ತಮ್ಮ ಸೇವಾವಧಿಯುದ್ದಕ್ಕೂ ಅದನ್ನು ತಪ್ಪದೆ ಪಾಲಿಸಬೇಕು ಎಂದರು.

ಇಲಾಖೆ ಸೇವೆಗೆ ವಿವಿಧ ರೀತಿಯ ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರರು ಸೇರುತ್ತಿದ್ದಾರೆ. ಸೇರ್ಪಡೆ ಮೊದಲ ಮೆಟ್ಟಿಲಾಗಿದ್ದು, ಮುಂದೆ ಪೊಲೀಸ್ ಹಾಗೂ ಇತರ ಇಲಾಖೆಗಳಲ್ಲಿ ಸೇವೆಗೆ ಇಚ್ಛಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಈ ಅವಕಾಶ ಬಳಸಿಕೊಂಡು ಉನ್ನತ ಹುದ್ದೆಗಳಿಗೆ ಆಯ್ಕೆಯಾಗಬೇಕು. ಇಲಾಖೆ ಶಿಸ್ತು, ಸಂಯಮ, ಕಾನೂನುಗಳನ್ನು ಪಾಲಿಸಿ ಅನುಷ್ಠಾನಗೊಳಿಸಿ, ಕರ್ತವ್ಯ ಪ್ರಜ್ಞೆ ಮೆರೆಯಬೇಕು ಎಂದರು.

ಉತ್ತರ ವಲಯ ಕಾರಾಗೃಹಗಳ ಉಪ ಮಹಾನಿರೀಕ್ಷಕ ಎಂ. ಸೋಮಶೇಖರ, ಹು-ಧಾ ಪೊಲೀಸ್ ಆಯುಕ್ತ ಲಾಬುರಾಮ್ ಉಪ ಪೊಲೀಸ್ ಆಯುಕ್ತರಾದ ರಾಮರಾಜನ್, ಆರ್.ಬಿ. ಬಸರಗಿ, ಡಿವೈಎಸ್​ಪಿ ಎಂ.ಬಿ. ಸಂಕದ, ಇಲಾಖೆ ಅಧಿಕಾರಿಗಳು, ಇತರರಿದ್ದರು.

ಡಿಎಆರ್ ವಿಭಾಗದ ಡಿವೈಎಸ್​ಪಿ ಹಾಗೂ ಉಪ ಪ್ರಾಂಶುಪಾಲ ಜಿ.ಸಿ. ಶಿವಾನಂದ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಆರ್​ಪಿಐ ಬಿ.ಸಿ. ಡೂಗನವರ, ಆರ್​ಎಸ್​ಐ ರಾಜು ಗುಡನಟ್ಟಿ ನೇತೃತ್ವದಲ್ಲಿ ವನಿತಾ ಎಚ್., ಸಂಗೀತಾ ಲಮಾಣಿ, ಅನಿತಾ ಪಿ. ಮತ್ತು ರಾಣಮ್ಮ ಮುಂದಾಳತ್ವದ ದಳಗಳಿಂದ ಪರೇಡ್ ನಡೆಸಿ ಗೌರವ ಸಲ್ಲಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಸ್ವಾಗತಿಸಿದರು. ಡಾ. ವೈ.ಪಿ. ಕಲ್ಲನಗೌಡರ ಹಾಗೂ ಡಾ.ಎ.ಸಿ. ಅಲ್ಲಯ್ಯನಮಠ ನಿರೂಪಿಸಿದರು. ಡಿಸಿಆರ್​ಬಿ ಡಿವೈಎಸ್​ಪಿ ರಾಮನಗೌಡ ಹಟ್ಟಿ ವಂದಿಸಿದರು.

ಕ್ರೀಡಾ ವಿಜೇತರಿಗೆ ಬಹುಮಾನ

ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ್ದ ಕ್ರೀಡಾಕೂಟದ ಒಳಾಂಗಣ ವಿಭಾಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಅನಿತಾ ಎಸ್.ಕೆ., ವಿಜಯಪುರ ಜಿಲ್ಲೆಯ ಶೃತಿ ಪಾಟೀಲ, ಉತ್ತರ ಕನ್ನಡ ಜಿಲ್ಲೆಯ ಲಾವಣ್ಯಾ ನಾಯಕ ಹಾಗೂ ಬೆಳಗಾವಿ ಜಿಲ್ಲೆಯ ಗೀತಾ ಚಿಮ್ಮಡ ಮತ್ತು ಹೊರಾಂಗಣ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ಪರವೀನ್​ಭಾನು ಮುನವಳ್ಳಿ, ಅಕ್ಷತಾ ಮಮದಾಪೂರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಲಾವಣ್ಯಾ ನಾಯಕ ವಿಜೇತರಾಗಿದ್ದಾರೆ. ಫೈರಿಂಗ್ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಸುಶ್ಮಿತಾ ಕೆ.ಎಸ್., ವಿಜಯಪುರ ಜಿಲ್ಲೆಯ ಭಾಗ್ಯಮ್ಮ ಕೋಟೆಗುಡ್ಡ ಹಾಗೂ ಧಾರವಾಡ ಜಿಲ್ಲೆಯ ಅಶ್ವಿನಿ ಹಿರೇಮಠ ವಿಜೇತರಾಗಿದ್ದಾರೆ. ಎಲ್ಲ ಕ್ರೀಡೆಗಳು ಸೇರಿ ಉತ್ತಮ ಪ್ರದರ್ಶನ ನೀಡಿದ ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಪ್ರಶಿಕ್ಷಣಾರ್ಥಿ ಲಾವಣ್ಯಾ ನಾಯಕ ಸವೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net