ಕೇಂದ್ರ ಸ್ಧಳದಲ್ಲಿದ್ದು ಕರ್ತವ್ಯ ನಿರ್ವಹಿಸಿ

28mdk04
ಮಳೆ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಯಿತು. ವಿ.ಪಿ.ಶಶಿಧರ್, ಜಯಲಕ್ಷ್ಮೀ ಚಂದ್ರು, ಕಿರಣ್ ಗೌರಯ್ಯ, ಪರಮೇಶ್ ಕುಮಾರ್, ಪ್ರಮೋದ್ ಮುತ್ತಪ್ಪ ಇದ್ದರು.
Published on

ಕುಶಾಲನಗರ: ಜಿಲ್ಲಾಧಿಕಾರಿ ಕಚೇರಿ ಸೂಚನೆಯಂತೆ ನೋಡಲ್ ಅಧಿಕಾರಿಗಳಾಗಿ ನೇಮಕಗೊಂಡ ಅಧಿಕಾರಿಗಳು ಕಡ್ಡಾಯವಾಗಿ ತಾಲೂಕು ಕೇಂದ್ರ ಸ್ಧಳದಲ್ಲಿದ್ದು ಕೆಲಸ ನಿರ್ವಹಿಸುವಂತೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಂಗಳವಾರ ಸಂಜೆ ಕೂಡಿಗೆಯ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಶೀಲನಾ ಸಭೆಯ ಮಾಹಿತಿ ಪಡೆದು ಮಾತನಾಡಿದರು.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪ ಪರಿಸ್ಥಿತಿಗಳ ಸಮರ್ಪಕ ನಿರ್ವಹಣೆ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಖಾತ್ರಿಪಡಿಸಿಕೊಂಡ ಡಾ. ಮಂತರ್ ಗೌಡ ತಾಲೂಕು ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮದ ಬಗ್ಗೆ ಕೈಗೊಂಡಿರುವ ಮಾಹಿತಿ, ಕಾಳಜಿ ಕೇಂದ್ರ ತೆರೆಯುವುದು, ನೋಡಲ್ ಅಧಿಕಾರಿಗಳ ಕಾರ್ಯವೈಖರಿ, ಸೆಸ್ಕ್, ಅರಣ್ಯ ಇಲಾಖೆಯಿಂದ ಇದೂವರೆಗೆ ನಡೆಸಲಾದ ಕಾರ್ಯಾಚರಣೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಅಲ್ಲದೆ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಯೋಜನೆ ಬಗ್ಗೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

2025-26ನೇ ಸಾಲಿನ ಅತಿವೃಷ್ಟಿ, ಅನಾವೃಷ್ಟಿಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸಿದ್ಧತೆ ಸೇರಿದಂತೆ, ಸ್ವಯಂಸೇವಕರ ನೇಮಕ, ಅತಿವೃಷ್ಟಿ ಸಂಭವಿಸಬಹುದಾದ ಸೂಕ್ಷ್ಮ ಪ್ರದೇಶಗಳ ಮಾಹಿತಿ, ನಿಗದಿತ ಕಾಳಜಿ ಕೇಂದ್ರಗಳ ಮಾಹಿತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.

ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಪ್ರವಾಹ ಸಂಭವಿಸಬಹುದಾದ ಸ್ಧಳಗಳ ಬಗ್ಗೆ ಮಾಹಿತಿ ಮತ್ತು ಈಗಾಗಲೇ 292 ಮನೆಗಳಿಗೆ ತಿಳಿವಳಿಕೆ ಪತ್ರ ನೀಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಅಹಾರ ಕಿಟ್ ಸಂಗ್ರಹ ಸೇರಿದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಮಾಹಿತಿ ನೀಡಿದರು.

ಸೆಸ್ಕ್ ಇಇ ಮಂಜುನಾಥ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ ಗಾಳಿ ಮಳೆಯಿಂದಾಗಿ 130 ವಿದ್ಯುತ್ ಕಂಬಗಳು ಮುರಿದಿವೆ. ಎರಡು ಟಿ.ಸಿ. ಹಾಳಾಗಿದೆ. ಇವುಗಳನ್ನು ಸರಿಪಡಿಸಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾದ ಆದೇಶದ ಮೇರೆಗೆ ಹೊಸದಾಗಿ ಹೊರ ಜಿಲ್ಲೆಯ 7 ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ಅರಣ್ಯ ಇಲಾಖೆಯರು ಮುಂಜಾಗ್ರತಾ ಕ್ರಮವಾಗಿ ಬಿಳುವ ಹಂತದಲ್ಲಿರುವ ರಸ್ತೆ ಬದಿಯ ಮರಗಳನ್ನು ತೆರವು ಮಾಡಬೇಕು, ಖಾಸಗಿ ಜಾಗದಲ್ಲಿರುವ ಮರಗಳು ಬಿಳುವ ಹಂತದಲ್ಲಿ ಇದ್ದರೆ ಅವುಗಳನ್ನು ಸಹ ಕಟ್ಟಾವು ಮಾಡಲು ಸಂಬಂಧಿಸಿದ ತೋಟದ ಮಾಲೀಕರಿಗೆ ಸೂಚನೆ ನೀಡಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಮರಗಳ ಕಟಾವಿಗೆ ಸಹಕಾರ ನೀಡಬೇಕು ಎಂದು ಇದೇ ಸಂದರ್ಭ ಶಾಸಕರು ಸೂಚನೆ ನೀಡಿದರು.

ಈಗಾಗಲೇ ಜಿಲ್ಲೆಯಲ್ಲಿ ವಿಪರೀತ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಆಯಾ ಇಲಾಖೆಯ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿಯಮಾನುಸಾರ ಕ್ರಮಬದ್ದವಾಗಿ ನಿರ್ವಹಿಸಬೇಕು. ಮಳೆಯಿಂದಾಗಿ ಆಗುವ ಅನಾಹುತ ತಪ್ಪಿಸಲು ಎಲ್ಲ ಅಧಿಕಾರಿಗಳ ಸಹಕಾರ ಬಹುಮುಖ್ಯವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಪ್ರವಾಹದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು, ತಹಸೀಲ್ದಾರ್ ಕಿರಣ್ ಗೌರಯ್ಯ, ತಾಪಂ ಇಒ ಪರಮೇಶ್ ಕುಮಾರ್, ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆ.ಡಿ.ಪಿ. ನಾಮ ನಿರ್ದೇಶಿತ ಸದಸ್ಯರಾದ ಕೆ.ಎನ್. ಆಶೋಕ್, ಟಿ.ಬಿ. ಜಗದೀಶ್, ಟಿ.ಪಿ. ಹಮೀದ್, ಸ್ವಾಮಿ, ಹನೀಫ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net