

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಪರೀಕ್ಷೆಗಳಲ್ಲಿ ಅಂಕಗಳನ್ನು ಪಡೆಯುವುದರ ಮೂಲಕ ಅನೇಕ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆಯಬಹುದು. ಆದರೆ ಕ್ರೀಡೆಯಲ್ಲಿ ಒಬ್ಬ ಮಾತ್ರ ಪ್ರಥಮ ಸ್ಥಾನ ಪಡೆಯಲು ಸಾಧ್ಯ. ಆರೋಗ್ಯಕ್ಕಾಗಿ, ಸ್ಪರ್ಧೆಗಾಗಿ ಹಾಗೂ ಮನರಂಜನೆಗಾಗಿ ಕ್ರೀಡೆ ಇದೆ. ಕ್ರೀಡೆಯಿಂದ ಜೀವನದಲ್ಲಿ ಪರಿಪೂರ್ಣತೆ ಕಾಣಲು ಸಾಧ್ಯ ಎಂದು ಕ್ರೀಡಾ ವಿಭಾಗದ ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ ಅಧಿಕಾರಿ ಹಾಗೂ ಮೇಲಂತಬೆಟ್ಟು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಧಾಕೃಷ್ಣ ಎಚ್.ಬಿ ಹೇಳಿದರು.
ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಮೇಲಂತಬೆಟ್ಟು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಧಾಕೃಷ್ಣ ಎಚ್.ಬಿ ರವರನ್ನು ಕಾಲೇಜಿನ ಪರವಾಗಿ ಗೌರವಿಸಲಾಯಿತು.
ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ.ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್.ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಕ್ರೀಡಾಪಟುಗಳಾದ ಅಪೂರ್ವ, ಲಾಂಛನ ಧನ್ಯಾ ಹಾಗೂ ಅನುಷಾ ಕ್ರೀಡಾಧ್ವಜಕ್ಕೆ ವಂದನೆ ಸಲ್ಲಿಸಿದರು. ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿ ಚರಿಷ್ಮಾ ಕ್ರೀಡಾಪಟುಗಳಿಗೆ ಪ್ರಮಾಣ ವಚನ ಬೋಧಿಸಿದರು.
ಆಕರ್ಷಕ ಪಥಸಂಚಲನ ನಡೆಯಿತು. ಇದರಲ್ಲಿ ಪ್ರಥಮ ಬಹುಮಾನ ದ್ವಿತೀಯ ವಿಜ್ಞಾನ ’ಡಿ’ ವಿಭಾಗ, ದ್ವಿತೀಯ ಸ್ಥಾನ ದ್ವಿತೀಯ ವಿಜ್ಞಾನ ’ಇ’ ಹಾಗೂ ತೃತೀಯ ಬಹುಮಾನವನ್ನು ಪ್ರಥಮ ವಿಜ್ಞಾನ ’ಡಿ’ ವಿಭಾಗ ಪಡೆದುಕೊಂಡಿತು. ಉಪ ಪ್ರಾಚಾರ್ಯ ಡಾ.ರಾಜೇಶ್ ಬಿ.ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಸಂದೇಶ ಪೂಂಜ ವಂದಿಸಿದರು. ಕನ್ನಡ ಭಾಷಾ ಉಪನ್ಯಾಸಕ ಮಹಾವೀರ ಜೈನ್ ನಿರೂಪಿಸಿದರು.