

ಮೈಸೂರು: ಸಾಂಘಿಕ ಪ್ರದರ್ಶನ ತೋರಿದ ಪರ್ಫೆಕ್ಟ್ ಫುಟ್‌ಬಾಲ್ ಅಕಾಡೆಮಿ ತಂಡವು ಜಿಲ್ಲಾ ಮಟ್ಟದ ‘ಆಹ್ವಾನಿತ ಅಂತರ ಶಾಲಾ ಮತ್ತು ಅಂತರ ಕ್ಲಬ್ ಫುಟ್‌ಬಾಲ್ ಚಾಂಪಿಯನ್‌ಶಿಪ್’ನಲ್ಲಿ ಪ್ರಥಮ ಸ್ಥಾನ ಪಡೆಯಿತು.
ಸಿದ್ದಾರ್ಥ ನಗರದ ಪರ್ಫೆಕ್ಟ್ ಫುಟ್‌ಬಾಲ್ ಅಕಾಡೆಮಿ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಿಮ ಪಂದ್ಯದಲ್ಲಿ ನಗರದ ಡೆಲ್ಲಿ ಪಬ್ಲಿಕ್ ಸ್ಕೂಲ್ ತಂಡದ ವಿರುದ್ಧ 2-0 ಗೋಲುಗಳಿಂದ ಭರ್ಜರಿ ಜಯ ಸಾಧಿಸಿತು.
ತಂಡದ ಪರ ಎಲ್.ಆದಿತ್ಯ ಹಾಗೂ ಗೌರವ್ ತಲಾ ಒಂದು ಗೋಲು ದಾಖಲಿಸಿ ಗೆಲುವಿನ ರುವಾರಿಯಾದರು. ಅಂತಿಮ ಪಂದ್ಯದ ಸೋಲಿನೊಂದಿಗೆ ಡೆಲ್ಲಿ ಪಬ್ಲಿಕ್ ಸ್ಕೂಲ್ ತಂಡ ದ್ವಿತೀಯ ಹಾಗೂ ಕೇಂದ್ರೀಯ ವಿದ್ಯಾಲಯ ತಂಡ ತೃತೀಯ ಸ್ಥಾನ ಪಡೆಯಿತು.
ಇದೇ ವೇಳೆ ನಗರ ಪಾಲಿಕೆ ಸದಸ್ಯೆ ರಜನಿ ಅಣ್ಣಯ್ಯ, ಮೈಸೂರು ಫುಟ್ಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಲ್.ಮಂಜುನಾಥ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಮಾಜಿ ಸೈನಿಕ ಮನು, ಮುಖಂಡರಾದ ರಾಮದಾಸ್, ಸಂಧ್ಯಾ, ತರಬೇತುದಾರರಾದ ಮಂಜುನಾಥ್, ಸುಹಾಸ್, ವಿಶ್ವ, ಚಂದನ್ ಇದ್ದರು.