

ಹುಬ್ಬಳ್ಳಿ : ನೈಋತ್ಯ ರೈಲ್ವೆಯ 31,230 (ಶೇ. 80ರಷ್ಟು) ನೌಕರರು ಕೇಂದ್ರ ಸರ್ಕಾರದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಯ ಪ್ರಯೋಜನ ಪಡೆಯಲಿದ್ದಾರೆ ಎಂದು ನೈಋತ್ಯ ರೈಲ್ವೆ ವಲಯದ ಆರ್ಥಿಕ ಸಲಹೆಗಾರ್ತಿ ಮತ್ತು ಮುಖ್ಯ ಲೆಕ್ಕಾಧಿಕಾರಿ ಕುಸುಮಾ ಹರಿಪ್ರಸಾದ ಹೇಳಿದರು.
ಇಲ್ಲಿನ ರೈಲ್ ಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೌಕರರು ನಿವೃತ್ತಿಯಾಗುವ 12ತಿಂಗಳು ಮೊದಲು ಪಡೆಯುತ್ತಿದ್ದ ಮೂಲ ವೇತನದ ಶೇ. 50ರಷ್ಟು ಪಿಂಚಣಿ ರೂಪದಲ್ಲಿ ದೊರೆಯಲಿದೆ ಎಂದರು.
ವಲಯದಲ್ಲಿ ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಅಡಿ 7,712 ನೌಕರರು ಇದ್ದಾರೆ. ಎನ್ಪಿಎಸ್ ಅಡಿ ನಿವೃತ್ತರಾದವರಿಗೆ ಮಾತ್ರ ಯುಪಿಎಸ್ ಅನ್ವಯಿಸುತ್ತದೆ. ನೈಋತ್ಯ ರೈಲ್ವೆಯಲ್ಲಿ ಎನ್ಪಿಎಸ್ ಅಡಿ 1 ಸಾವಿರ ನೌಕರರು ನಿವೃತ್ತರಾಗಿದ್ದಾರೆ. ಅದರಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ ಅಂದಾಜು 300 ನೌಕರರು ಇದ್ದಾರೆ ಎಂದು ಹೇಳಿದರು.
ವಲಯದ ಪ್ರಧಾನ ಕಚೇರಿಯಲ್ಲಿ 794, ಹುಬ್ಬಳ್ಳಿ ವಿಭಾಗದಲ್ಲಿ 10,215, ಬೆಂಗಳೂರು ವಿಭಾಗದಲ್ಲಿ 10,286, ಮೈಸೂರು ವಿಭಾಗದಲ್ಲಿ 5,952, ಹುಬ್ಬಳ್ಳಿ ಕಾರ್ಯಾಗಾರದಲ್ಲಿ 2,164, ಮೈಸೂರು ಕಾರ್ಯಾಗಾರದಲ್ಲಿ 1,358, ನಿರ್ಮಾಣ ವಿಭಾಗದಲ್ಲಿ 461 ನೌಕರರು ಸೇರಿ ಒಟ್ಟು 31,230 ನೌಕರರಿಗೆ ಇದರ ಪ್ರಯೋಜನ ದೊರೆಯಲಿದೆ ಎಂದು ತಿಳಿಸಿದರು.
ನೌಕರರು ಒಪಿಎಸ್ನಲ್ಲಿ ವಿಆರ್ಎಸ್ ತೆಗೆದುಕೊಳ್ಳಬಹುದು. ಆದರೆ, ಎನ್ಪಿಎಸ್ ಮತ್ತು ಯುಪಿಎಸ್ನಲ್ಲಿ ಈ ಸೌಲಭ್ಯವಿಲ್ಲ. ಈ ಮೊದಲು ಒಪಿಎಸ್ನಲ್ಲಿ ಕನಿಷ್ಠ ಪಿಂಚಣಿ ಇರಲಿಲ್ಲ. ಆದರೆ, ಈಗ ಯುಪಿಎಸ್ ಅಡಿ ನೌಕರರಿಗೆ ಮಾಸಿಕ ಕನಿಷ್ಠ 10ಸಾವಿರ ರೂ. ಪಿಂಚಣಿ ದೊರೆಯಲಿದೆ. ಹೀಗಾಗಿ, ಕೇಂದ್ರದ ಹೊಸ ಯುಪಿಎಸ್ ನೌಕರರಿಗೆ ಉಪಯುಕ್ತವಾಗಲಿದೆ ಎಂದರು.
ಒಪಿಎಸ್ನಲ್ಲಿ 10 ವರ್ಷ ಸೇವೆ ಸಲ್ಲಿಸಿದವರಿಗೆ 9ಸಾವಿರ ರೂ. ಪಿಂಚಣಿ ದೊರೆಯುತ್ತಿತ್ತು. ಇದೀಗ ಯುಪಿಎಸ್ನಲ್ಲಿ 10ಸಾವಿರ ರೂ. ದೊರೆಯಲಿದೆ. ಹೊಸ ಯೋಜನೆಯಿಂದ ನೌಕರರಿಗೆ ಸೇವೆಗೆ ತಕ್ಕಂತೆ ಪಿಂಚಣಿ ದೊರೆಯಲಿದೆ ಎಂದು ವಿವರಿಸಿದರು.
ಎನ್ಪಿಎಸ್ನಲ್ಲಿ ಸರ್ಕಾರ ಶೇ. 14ರಷ್ಟು ತನ್ನ ವಂತಿಗೆ ನೀಡುತ್ತಿದ್ದರೆ, ನೌಕರರು ತಮ್ಮ ಮೂಲ ವೇತನದ ಶೇ. 10ರಷ್ಟು ಕೊಡುಗೆ ನೀಡುತ್ತಿದ್ದರು. ಒಟ್ಟಾರೆ ಶೇ. 24ರಷ್ಟು ಕೊಡುಗೆ ನೀಡಲಾಗುತ್ತಿತ್ತು. ಯುಪಿಎಸ್ನಲ್ಲಿ ನೌಕರರು 25ವರ್ಷ ಸೇವೆ ಸಲ್ಲಿಸಿದರೆ ಅವರು ತಮ್ಮ ಮೂಲ ವೇತನದ ಶೇ. 50ರಷ್ಟು ಪಿಂಚಣಿ ಪಡೆಯಲಿದ್ದಾರೆ. 15ವರ್ಷ ಸೇವೆ ಸಲ್ಲಿಸಿದವರಿಗೆ ಶೇ. 30ರಷ್ಟು ಪಿಂಚಣಿ ದೊರೆಯು ಸಾಧ್ಯತೆಗಳಿವೆ ಎಂದರು.
ನೈಋತ್ಯ ರೈಲ್ವೆ ವಲಯದ ಮುಖ್ಯ ಸಿಬ್ಬಂದಿ ಅಧಿಕಾರಿ ಶುಜಾ ಮಹಮೂದ್, ಸಿಪಿಆರ್ಒ ಮಂಜುನಾಥ ಕನಮಡಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.