ಬಿಬಿಎಂಪಿ ಪ್ರೌಢಶಾಲೆಗಳಲ್ಲಿ ಶೇ. 68.73 ಫಲಿತಾಂಶ

palike sslc
Published on

ಬೆಂಗಳೂರು: ಎಸ್‌ಎಸ್‌ಎಲ್​​ಸಿಯ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಬಿಬಿಎಂಪಿಯ 33 ಪ್ರೌಢಶಾಲೆಗಳು ಶೇ. 68.78 ಫಲಿತಾಂಶ ದಾಖಲಿಸಿವೆ.

ಪರೀಕ್ಷೆ ಬರೆದಿದ್ದ ಒಟ್ಟು 2,502 ವಿದ್ಯಾರ್ಥಿಗಳ ಪೈಕಿ 1,721 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 66 ವಿದ್ಯಾರ್ಥಿಗಳು ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಶ್ರೀರಾಮಪುರ ಬಾಲಕಿಯರ ಪ್ರೌಢಶಾಲೆಯ ಚಂದನ ಪಿ 625ಕ್ಕೆ 619 ಅಂಕ (ಶೇ. 99) ಗಳಿಸಿ ಪಾಲಿಕೆ ಪ್ರೌಢಶಾಲೆಗಳಲ್ಲಿ ಅತೀ ಹೆಚ್ಚು ಮಾರ್ಕ್ಸ್ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ರಾಜ್ಯ ಮಟ್ಟದಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ 7ನೇ ಸ್ಥಾನವನ್ನೂ ಹಂಚಿಕೊಂಡಿದ್ದಾರೆ. ಈಕೆ ಪ್ರಥಮ ಭಾಷೆ ಸಂಸ್ಕೃತದಲ್ಲಿ 125, ದ್ವಿತೀಯ ಭಾಷೆ ಇಂಗ್ಲಿಷ್‌ನಲ್ಲಿ 98, ತೃತೀಯ ಭಾಷೆ ಕನ್ನಡದಲ್ಲಿ 100 ಅಂಕ ಗಳಿಸಿದ್ದಾರೆ. ಗಣಿತದಲ್ಲಿ 100, ವಿಜ್ಞಾನದಲ್ಲಿ 97 ಹಾಗೂ ಸಮಾಜ ವಿಜ್ಞಾನದಲ್ಲಿ 99 ಅಂಕ ಗಳಿಸಿ ಪಾಲಿಕೆ ಶಾಲೆಗೆ ಕೋಡು ಮೂಡಿಸಿದ್ದಾರೆ.

ಇದೇ ರೀತಿ ಲಗ್ಗೆರೆ ಪ್ರೌಢಶಾಲೆಯ ಯಶವಂತ್ ಟಿ.ಜೆ. 625ಕ್ಕೆ 610 ಅಂಕ (ಶೇ. 97.60) ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಚಂದನಾಗೆ ವೈದ್ಯೆಯಾಗುವ ಗುರಿ:

ಈ ಬಾರಿ ಪಾಲಿಕೆ ಶಾಲೆಗಳ ಪೈಕಿ ಅತೀ ಹೆಚ್ಚು ಅಂಕಗಳನ್ನು ಗಳಿಸಿ ರಾಜ್ಯಕ್ಕೆ 7ನೇ ಸ್ಥಾನವನ್ನು ಪಡೆದಿರುವ ಚಂದನಾ ಪಿ ಅವರು ಮುಂದಿನ ದಿನಗಳಲ್ಲಿ ಉನ್ನತ ವ್ಯಾಸಂಗ ಮಾಡಿ ವೈದ್ಯೆಯಾಗುವ ಗುರಿ ಹೊಂದಿದ್ದಾರೆ. ಸಾಮಾನ್ಯ ಕುಟುಂಬಕ್ಕೆ ಸೇರಿದ ಈಕೆ ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂಬ ಛಲದಿಂದ ಓದಿದ್ದಕ್ಕೆ ತಕ್ಕ ಪ್ರತಿಲ ಬಂದಿದೆ. ಪಾಲಿಕೆ ಶಾಲೆ ಎಂದು ಮೂಗು ಮುರಿಯಬೇಕಿಲ್ಲ. ನಮ್ಮ ಶಾಲೆಯಲ್ಲಿ ಓದುಲು ಉತ್ತಮ ವಾತಾವರಣ ಇತ್ತು. ಶಿಕ್ಷಕರು ವರ್ಷವಿಡೀ ನಮ್ಮ ವ್ಯಾಸಂಗಕ್ಕೆ ಹಲವು ವಿಶೇಷ ಪ್ರಯತ್ನ ನಡೆಸಿದ್ದರು. ಶಾಲೆಯ ಜತೆಗೆ ಅಲ್ಲಿನ ಕಲಿಕೆಯ ವಾತಾವರಣ ಮುಖ್ಯ ಎನ್ನುತ್ತಾರೆ ಚಂದನಾ.

ಮತ್ತೀಕೆರೆ ಶಾಲೆ ಮುಂದು:

ಬಿಬಿಎಂಪಿ ಶಾಲೆಗಳ ಪೈಕಿ ಮತ್ತಿಕೆರೆ ಬಾಲಕಿಯರ ಪ್ರೌಢಶಾಲೆಯು ಶೇ. 92.78 ಫಲಿತಾಂಶವನ್ನು ದಾಖಲಿಸಿದೆ. ಭೈರವೇಶ್ವರನಗರ ಪ್ರೌಢಶಾಲೆಯು ಶೇ. 91.98 ಹಾಗೂ ಹೇರೋಹಳ್ಳಿ ಪ್ರೌಢಶಾಲೆಯು ಶೇ. 90.56 ಫಲಿತಾಂಶವನ್ನು ದಾಖಲಿಸಿ ಗಮನ ಸೆಳೆದಿವೆ.

ಶಾಲೆಯಲ್ಲಿ ಅಂದು ಮಾಡಿದ ಪಾಠವನ್ನು ಮನೆಗೆ ಬಂದು ಮನದಟ್ಟು ಮಾಡಿಕೊಳ್ಳುತ್ತಿದ್ದೆ. ಶಿಕ್ಷಕರು ಪ್ರತೀ ದಿನ ನಮ್ಮ ಪಾಠ-ಪ್ರವಚನದ ಮೇಲೆ ನಿಗಾ ಇಡುತ್ತಿದ್ದರು. ಹೆಚ್ಚುವರಿ ತರಗತಿ ಕೂಡ ತೆಗೆದುಕೊಳ್ಳುತ್ತಿದ್ದರು. ಮನೆಯಲ್ಲಿ ಅಕ್ಕ ಕೂಡ ಪರೀಕ್ಷೆ ಎದುರಿಸಲು ಸಜ್ಜುಗೊಳಿಸಿದ್ದು ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಅಂತರ ಪ್ರೌಢಶಾಲೆ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು ಹೆಚ್ಚಿನ ಧೈರ್ಯ ತಂದುಕೊಟ್ಟಿತು.

- ಚಂದನಾ ಪಿ, ಬಿಬಿಎಂಪಿ ಪ್ರೌಢಶಾಲೆ ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net