

ಮಡಿಕೇರಿ: ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳ ಮೂಲಕವೇ ಸುದೀರ್ಘ ಕಾಲ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜು ಅರಸು ಹಾಗೂ ಅವರ ಆಡಳಿತವನ್ನು ಇಂದಿಗೂ ರಾಜ್ಯ ಸ್ಮರಿಸಿಕೊಳ್ಳುತ್ತಿದೆ. ಆದರೆ ಇಂದಿನ ವ್ಯವಸ್ಥೆಗಳನ್ನು ಗಮನಿಸಿದರೆ ನಾವುಗಳು ನೈತಿಕ ಅಧ:ಪತನದಲ್ಲಿದ್ದೇವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ನೀಲಗಿರಿ ತಳವಾರ ವಿಷಾದ ವ್ಯಕ್ತಪಡಿಸಿದರು.
ಸಾಮಾಜಿಕ ಸುಧಾರಣೆಯ ಹರಿಕಾರ ಡಿ.ದೇವರಾಜ ಅರಸುರವರ ೧೦೭ನೇ ಜನ್ಮದಿನಾಚರಣೆ ಮತ್ತು ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಸಮಾನತೆಗೆ ಕಾರಣವಾದ ಹಾವನೂರು ಅವರ ವರದಿ ಜಾರಿಗೊಂಡು ೫೦ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಹಮತ ವೇದಿಕೆ ಹಾಗೂ ಅಹಿಂದ ಒಕ್ಕೂಟದಿಂದ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಷ್ಟಮದಗಳಲ್ಲಿ ಅಧಿಕಾರದ ಮದವೂ ಒಂದಾಗಿದ್ದು, ಸತ್ಯ, ಸೌಹಾರ್ದತೆ ಮತ್ತು ಆದರ್ಶಗಳನ್ನು ಉಳಿಸಿಕೊಂಡು ಅಧಿಕಾರ ನಡೆಸುವುದು ತುಂಬಾ ಕಷ್ಟ. ಆದರೆ ಇದೆಲ್ಲವನ್ನು ಸಾಧಿಸಿ ತೋರಿಸಿದವರು ಡಿ.ದೇವರಾಜ ಅರಸು ಹಾಗೂ ಹಾವನೂರು ಎಂದು ಶ್ಲಾಘಿಸಿದರು.
ಜನಕಲ್ಯಾಣ ಕಾರ್ಯಕ್ರಮಗಳನ್ನು ಅತ್ಯಂತ ಬುದ್ಧಿವಂತಿಕೆಯಿಂದ ಬಳಸಿಕೊಂಡು ಸಾಮಾಜಿಕ ಸುಧಾರಣೆಯ ಮೂಲಕ ಅಧಿಕಾರ ನಡೆಸಿದ ಕಾರಣಕ್ಕಾಗಿ ಅರಸು ಅವರನ್ನು ರಾಜ್ಯದ ಜನರು ಇಂದಿಗೂ ನೆನಪಿನಲ್ಲಿ ಉಳಿಸಿಕೊಂಡಿದ್ದಾರೆ. ಆದರೆ ಇಂದಿನ ಆಡಳಿತ ವ್ಯವಸ್ಥೆಯ ಪರಿಸ್ಥಿತಿಯೇ ಬದಲಾಗಿದ್ದು, ಮಂತ್ರಿಗಳ ಜುಟ್ಟು ಐಎಎಸ್ ಅಧಿಕಾರಿಗಳ ಕೈಯಲ್ಲಿದೆ. ಅಧಿಕಾರ ನಡೆಸುವವರಿಗೆ ಬುದ್ಧಿ ಮತ್ತು ಚಾಕಚಕ್ಯತೆ ಬೇಕು, ಇದು ಎರಡೂ ಇಲ್ಲದ ಕಾರಣ ಎಡವಟ್ಟುವಗಳಾಗುತ್ತಿವೆ ಎಂದು ಆರೋಪಿಸಿದರು.
ಸಂಘಟನಾ ಶಕ್ತಿ ಮತ್ತು ದೂರದೃಷ್ಟಿ ಇದ್ದ ಕಾರಣದಿಂದಲೇ ಅರಸು ಅವರು ಸುದೀರ್ಘ ಕಾಲ ಆಡಳಿತ ನಡೆಸಿದರು. ವಿರೋಧ ಪಕ್ಷವನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರು. ಅಧಿಕಾರವನ್ನು ವಿವೇಚನೆಯಿಂದ ಬಳಸಬೇಕು, ಪ್ರತಿಕೂಲ ವಾತಾವರಣವನ್ನು ಅನುಕೂಲಕರ ಮಾಡಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ತಳವಾರ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಎ.ಎಸ್.ಪೊನ್ನಣ್ಣ, ಸಾಮಾಜಿಕ ಮತ್ತು ಶೈಕ್ಷಣಿಕ ಮೀಸಲಾತಿ ಪದ್ಧತಿಯನ್ನು ನ್ಯಾಯಾಲಯವೇ ಒಪ್ಪಿಕೊಂಡಿದೆ. ಆದರೆ ಇದರ ಸಮರ್ಪಕ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದುರಾಗಿದೆ. ಇಲ್ಲಿಯವರೆಗೆ ರಾಜ್ಯವನ್ನಾಳಿದ ಯಾವುದೇ ಸರ್ಕಾರ ಮೀಸಲಾತಿ ಜಾರಿಗೆ ನೈಜ ಕಾಳಜಿ ತೋರಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸನ್ಮಾನ: ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ರೆಹನಾ ಸುಲ್ತಾನ (ಸ್ತ್ರೀಶಕ್ತಿ ಸಂಘಟನೆ), ಬಿ.ಆರ್.ಶರವಣ (ಸಹಕಾರ ಕ್ಷೇತ್ರ) ಹಾಗೂ ಬಿ.ಎನ್.ರಂಗಪ್ಪ (ದುರ್ಬಲ ವರ್ಗಗಳ ಸಂಘಟನಾ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು. ಎಂ.ಎಂ.ನಂದಕುಮಾರ್(ಮುಖ್ಯಮಂತ್ರಿಗಳ ಪೊಲೀಸ್ ಪದಕ ವಿಜೇತ ಸಬ್ ಇನ್ಸ್‌ಪೆಕ್ಟರ್) ಅವರ ಗೈರು ಹಾಜರಿಯಲ್ಲಿ ತಾಯಿ ಸನ್ಮಾನ ಸ್ವೀಕರಿಸಿದರು.
ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಹಾಗೂ ಉಪನ್ಯಾಸಕ ಡಾ.ಮೋಹನ್ ಪಾಳೇಗಾರ್, ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಸರ್ವೋದಯ ಸಮಿತಿಯ ಜಿಲ್ಲಾಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.