

ಕವಿತಾಳ: ಕರೊನಾ ನಿಯಂತ್ರಣಕ್ಕೆ ಸರ್ಕಾರ ಅನೇಕ ಕ್ರಮ ಕೈಗೊಂಡಿದ್ದರೂ ಸಾರ್ವಜನಿಕರು ಅದಕ್ಕೆ ಪೂರಕವಾಗಿ ಸ್ಪಂದಿಸದೆ ಎಲ್ಲೆಂದರಲ್ಲಿ ಓಡಾಡುತ್ತಿದ್ದು ಅಧಿಕಾರಿ ವರ್ಗಕ್ಕೆ ತಲೆನೋವಾಗಿದೆ.
ಸಾರ್ವಜನಿಕರು ಒಂದೆಡೆ ಸೇರಬಾರದು, ಹೊರ ಊರುಗಳಿಂದ ಬಂದವರು ಸಮೀಪದ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಬೇಕು ಮತ್ತು ವಿನಾ ಕಾರಣ ವಾಹನಗಳಲ್ಲಿ ತಿರುಗಾಡಬಾರದು ಎಂಬಿತ್ಯಾದಿ ಸಲಹೆ ನೀಡುತ್ತಿದ್ದರೂ ಸಾರ್ವಜನಿಕರು ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸದಿರುವುದು ಅಧಿಕಾರಿಗಳ ಪೇಚಾಟಕ್ಕೆ ಕಾರಣವಾಗಿದೆ. ಪೊಲೀಸ್ ಇಲಾಖೆ ಅಲ್ಲಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆದು ವಾಹನ ತಪಾಸಣೆ ಮಾಡಲು ಮುಂದಾಗಿದೆ. ಆದರೆ, ಕೆಲವರು ಕಳ್ಳದಾರಿ ಹಿಡಿದಿದ್ದಾರೆ. ವಾಹನಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ತಡೆದರೆ ಮುಖಂಡರು, ಪ್ರಭಾವಿಗಳು ಶಿಫಾರಸು ಮಾಡುತ್ತಿದ್ದಾರೆ. ದಿನಸಿ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸುಣ್ಣದ ಗುರುತು ಹಾಕಿದ್ದರೂ ಪಾಲನೆಯಾಗುತ್ತಿಲ್ಲ.
ಪಟ್ಟಣದಿಂದ ಪ್ರತಿ ದಿನವೂ ತಂಡೋಪ ತಂಡವಾಗಿ ವಾಪಸಾಗುತ್ತಿರುವುದು ಆರೋಗ್ಯ ಇಲಾಖೆಗೆ ತಲೆ ನೋವಾಗಿದೆ. ವಾಪಸಾದವರಲ್ಲಿ ಪೋಕರಿಗಳು ಗ್ರಾಮೀಣ ಭಾಗದಲ್ಲಿ ಮೊಬೈಲ್‌ನಲ್ಲಿ ಹಾಡು ಹಾಕಿಕೊಂಡು ಎಲ್ಲೆಂದರಲ್ಲಿ ಗುಂಪುಗೂಡಿ ಹರಟೆ ಹೊಡೆಯುವುದು ಕಂಡು ಬರುತ್ತಿದೆ.