ಕೋಲಾರ ಬಂದ್​ಗೆ ಜನಬೆಂಬಲ

KOLAR BAND
Published on

ಕೋಲಾರ: ಕೇಂದ್ರ ಗೃಹ ಸಚಿವ ಅಮಿತ್​ ಷಾ ಸಂಸತ್ತಿನಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಕುರಿತು ಆಡಿದ್ದಾರೆನ್ನಲಾದ ಅವಹೇಳನಕಾರಿ ಮಾತುಗಳನ್ನು ವಿರೋಧಿಸಿ ದಲಿತಪರ ಸಂಘಟನೆಗಳು ಕರೆ ಕೊಟ್ಟಿದ್ದ ಕೋಲಾರ ಬಂದ್​ಗೆ ಶುಕ್ರವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಶುಕ್ರವಾರ ಬೆಳಗ್ಗೆ 5 ಗಂಟೆಯಿಂದಲೇ ಪ್ರತಿಭಟನಾಕಾರರು ಟಯರ್​ಗಳಿಗೆ ಬೆಂಕಿ ಹಚ್ಚಿ ರಸ್ತೆಗಳಲ್ಲಿ ಪ್ರತಿಭಟನೆ ಮಾಡಿದರು. ಕನ್ನಡಪರ, ಪ್ರಗತಿಪರ, ವರ್ತಕರ ಸಂಘ, ಕಾಂಗ್ರೆಸ್​ ಹೋರಾಟಕ್ಕೆ ಬೆಂಬಲ ನೀಡಿದ್ದವು.

ನಗರದಿಂದ ಹೊರ ಹೋಗುವ ಮತ್ತು ಒಳಬರುವ ಎಲ್ಲ ರಸ್ತೆಗಳನ್ನು ಮುಚ್ಚಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಬಿಜೆಪಿ ಮತ್ತು ಅಮಿತ್​ ಷಾ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆಎಸ್​ಆರ್​ಟಿಸಿ ಡಿಪೋದಿಂದ ಬಸ್​ಗಳನ್ನು ಹೊರಬಿಡದೆ ಪ್ರತಿಭಟನೆ ನಡೆಸಿ ಡಿಪೋ ಮುಂಭಾಗದ ಗೇಟಿಗೆ ಬೀಗ ಜಡಿಯಲಾಯಿತು. ಇದರಿಂದ ಖಾಸಗಿ ಸೇರಿ ಸರ್ಕಾರಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ನಗರದ ಎಲ್ಲ ವೃತ್ತಗಳಲ್ಲಿ ಪ್ರತಿಭಟನಾಕಾರರು ನಡು ರಸ್ತೆಯಲ್ಲಿಯೇ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ರಾಜೀನಾಮೆಗೆ ಒತ್ತಾಯ

ಪಂಡಿತ್​ ಮುನಿವೆಂಕಟಪ್ಪ, ಅಂಬರೀಶ್​, ಕೃಷ್ಣಪ್ಪ, ವರದೇನಹಳ್ಳಿ ವೆಂಕಟೇಶ್​ ಸೇರಿ ದಲಿತಪರ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು, ಅಮಿತ್​ ಷಾ ರಾಜೀನಾಮೆಗೆ ಒತ್ತಾಯಿಸಿ, ಧಿಕ್ಕಾರ ಕೂಗಿದರು.

ನಗರದ ವಿವಿಧೆಡೆ ಬೀಡು ಬಿಟ್ಟಿದ್ದ ಪೊಲೀಸರ ತಂಡ ಅಲ್ಲಲ್ಲಿ ಪ್ರತಿಭಟನೆಯನ್ನು ನಿಯಂತ್ರಿಸಿತು. ಮುಖ್ಯ ರಸ್ತೆಗಳಿಂದ ಬೇರೆ ದಾರಿ ಬಳಸುವಂತೆ ವಾಹನ ಸವಾರರಿಗೆ ಸೂಚಿಸಿ, ಭದ್ರತೆ ಒದಗಿಸಿದ್ದರು.

ವಾಗ್ವಾದ

ನಗರದಿಂದ ಹಾದುಹೋಗುವ ರಸ್ತೆಗಳ ಮೂಲಕ ಯಾವುದೇ ವಾಹನ ಬಿಡದೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಆಗಾಗ ವಾಗ್ವಾದ ನಡೆದವು. ಪ್ರತಿಭಟನಾಕಾರರು ದ್ವಿಚಕ್ರ ವಾಹನಗಳ ಮೂಲಕ ನಗರದ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟು ಮುಚ್ಚುವಂತೆ ಮನವಿ ಮಾಡಿದರು. ಇದಕ್ಕೆ ಅಂಗಡಿಗಳ ಮಾಲೀಕರೂ ಸಕಾರಾತ್ಮಕವಾಗಿ ಸ್ಪಂದಿಸಿದರು.

ಪ್ರಯಾಣಿಕರ ಪರದಾಟ

ಆಟೋ, ಬಸ್​ ಸೇರಿ ಯಾವುದೇ ವಾಹನಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಪರದಾಡುವಂತಾಗಿತ್ತು. ಬಂದ್​ ಅರಿವಿಲ್ಲದೆ ಕೆಲವು ಪ್ರಯಾಣಿಕರು ಬಸ್​ಗಾಗಿ ನಿಲ್ದಾಣದಲ್ಲಿ ಕಾಯುವಂತಾಗಿತ್ತು. ಹೂವಿನ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು ಹಾಗೂ ರೈತರು ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡಿದರು.

ಶಾಲೆಗಳಿಗೆ ತಟ್ಟಿದ ಬಂದ್​ ಬಿಸಿ

ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗದ ಕಾರಣ ಹಾಜರಾತಿ ಇರಲಿಲ್ಲ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ವೈಯುಕ್ತಿಕವಾಗಿ ರಜೆ ಘೋಷಣೆ ಮಾಡಿದ್ದವು. ವಿದ್ಯಾರ್ಥಿಗಳು ಬಸ್​ ವ್ಯವಸ್ಥೆ ಇಲ್ಲದೆ ಮನೆಯಲ್ಲಿಯೇ ಉಳಿದರೆ, ಬೇರೆ ಬೇರೆ ವಾಹನಗಳಲ್ಲಿ ಶಾಲಾ&ಕಾಲೇಜಿನತ್ತ ಬಂದವರು ವಾಪಸ್ಸಾಗುತ್ತಿದ್ದುದು ಕಂಡು ಬಂತು. ಖಾಸಗಿ ಶಾಲಾ&ಕಾಲೇಜುಗಳ ವಾಹನಗಳನ್ನೂ ತಡೆದ ಪ್ರತಿಭಟನಾಕಾರರು ವಾಪಸ್ಸು ಕಳುಹಿಸಿದರು. ಮಹಿಳಾ ಪಿ.ಯು.ಕಾಲೇಜು ಮುಂತಾದ ಕಾಲೇಜುಗಳಿಗೂ ತೆರಳಿ ರಜೆ ಘೋಷಣೆ ಮಾಡುವಂತೆ ಒತ್ತಾಯಪಡಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದರು.

ಬಿಕೋ ಎಂದ ಬಸ್​ ನಿಲ್ದಾಣ

ಡಿಪೋದಿಂದ ಬಸ್ಸುಗಳು ಬಿಡದ ಕಾರಣ ಕೆ.ಎಸ್​.ಆರ್​.ಟಿ.ಸಿ ಬಸ್​ ನಿಲ್ದಾಣದಲ್ಲಿ ಬಸ್ಸುಗಳು ಇರಲಿಲ್ಲ. ಬಸ್ಸಿಗಾಗಿ ಮಹಿಳೆಯರು ಮತ್ತು ವಿದ್ಯಾರ್ಥಿಗಳು, ಅಂಗವಿಕಲರು ಕಾಯುತ್ತಾ ಪರದಾಡುತ್ತಿದ್ದುದು ಕಂಡುಬಂತು. ದಿನವಿಡೀ ಜನ ಜಂಗುಳಿಯಿಂದ ಗಿಜುಗುಡುತ್ತಿದ್ದ ಬಸ್​ ನಿಲ್ದಾಣದಲ್ಲಿ ಕೋಲಾರ ಬಂದ್​ನಿಂದ ಮೌನ ಆವರಿಸಿತ್ತು.

ಅಂಗಡಿ ಮುಂಗಟ್ಟು ಬಂದ್​

ನಗರದ ಎಂ.ಬಿ.ಎ ರಸ್ತೆ, ದೊಡ್ಡಪೇಟೆ, ಬಂಬೂಬಜಾರ್​, ಅಮ್ಮಾವಾರಿಪೇಟೆ, ಹೊಸ ಬಸ್​ನಿಲ್ದಾಣ, ಹಳೇ ಬಸ್​ನಿಲ್ದಾಣ, ಡೂಂ ಲೈಟ್​ ವೃತ್ತ, ಬಂಗಾರಪೇಟೆ ವೃತ್ತ, ಟೇಕಲ್​ ರಸ್ತೆ, ಟವರ್​ ಮುಂತಾದ ಪ್ರಮುಖ ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟುಗಳು ಬಂದ್​ ಮಾಡಿ, ಬಂದ್​ಗೆ ಬೆಂಬಲ ವ್ಯಕ್ತಪಡಿಸಿದರು.

ಎಂ.ಎಲ್​.ಸಿ.ಕಾರಿಗೆ ಅಡ್ಡ

ಎಂ.ಎಲ್​.ಸಿ.ಗೋವಿಂದರಾಜು ಅವರ ಕಾರನ್ನು ಪ್ರತಿಭಟನಾಕಾರರು ಅಡ್ಡಗಟ್ಟಿ ನಿಲ್ಲಿಸಿದರು. ಆಗ ಪೋಲಿಸರು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ಎಂ.ಎಲ್​.ಸಿ.ಗೋವಿಂದರಾಜು ಕಾರಿನಿಂದ ಇಳಿದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದಾಗ ಕಾರು ಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net