

ರಟ್ಟಿಹಳ್ಳಿ: ಕೆಸರು ಗದ್ದೆಯಂತಾದ ರಸ್ತೆಗಳು, ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತ ಜಾಲಿ ಮುಳ್ಳಿನ ಕಂಟಿಗಳು, ಕುಡಿಯುವ ನೀರಿನ ಸಮಸ್ಯೆ, ಬೆಳಗದ ವಿದ್ಯುತ್ ದೀಪಗಳು, ದುರ್ವಾಸನೆ ಸೂಸುವ ಗಟಾರಗಳು...ಇವು ಪಟ್ಟಣದ ತರಳಬಾಳು ಬಡವಾವಣೆಯ ಸದ್ಯದ ಸ್ಥಿತಿ.
ಪಟ್ಟಣದ ತರಳಬಾಳು ಬಡಾವಣೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿ 250ಕ್ಕೂ ಅಧಿಕ ಮನೆಗಳಿದ್ದು, ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಶಿಕ್ಷಕರು, ವಿವಿಧ ಇಲಾಖೆಯ ನೌಕರರು, ಅಧಿಕಾರಿಗಳು, ಮಧ್ಯಮ ವರ್ಗದ ಜನರು ಈ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಸ್ಥಳೀಯ ಪಟ್ಟಣ ಪಂಚಾಯಿತಿಗೆ ಇಲ್ಲಿಂದ ಉತ್ತಮ ಆದಾಯವಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಗಟಾರಗಳ ಮಧ್ಯೆಯೇ ವಾಸಿಸುವುದು ಇಲ್ಲಿನ ನಿವಾಸಿಗಳಿಗೆ ಅನಿವಾರ್ಯವಾಗಿದೆ.
2005-06ನೇ ಸಾಲಿನಲ್ಲಿ ಸುವರ್ಣಗ್ರಾಮ ಯೋಜನೆಯಡಿ ಬಡವಾಣೆಯಲ್ಲಿ ಮೂರ್ನಾಲ್ಕು ಬೀದಿಗಳಲ್ಲಿ ಸಿ.ಸಿ. ರಸ್ತೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಕಳೆದ 20 ವರ್ಷಗಳಿಂದ ರಸ್ತೆಗಳು ದುರಸ್ತಿಯಾಗದೇ ಇರುವುದರಿಂದ ಕಚ್ಚಾ ರಸ್ತೆಗಳಾಗಿ ಮಾರ್ಪಟ್ಟು ತಗ್ಗು ಗುಂಡಿಗಳಿಂದ ಕೂಡಿವೆ. ಬಡಾವಣೆಯ 5ನೇ ಕ್ರಾಸ್ ಬಳಿ ಅಂಗನವಾಡಿ ಮತ್ತು ಸಾಯಿಬಾಬಾ ದೇವಸ್ಥಾನ ಇರುವುದರಿಂದ ಮಕ್ಕಳು ಮತ್ತು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ತೊಂದರೆಯಾಗಿದೆ. ಈ ಐದು ರಸ್ತೆಗಳನ್ನು ಡಾಂಬರ್ ಅಥವಾ ಸಿ.ಸಿ. ರಸ್ತೆ ನಿರ್ಮಾಣ ಮಾಡಬೇಕೆಂದು ಹಲವು ಬಾರಿ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಎ.ಆರ್. ಮಣಕೂರು, ಎಂ. ಕುಬೇರಪ್ಪ, ಮಹೇಶ ಕೆರೂರು ಅಳಲು ತೋಡಿಕೊಂಡಿದ್ದಾರೆ.
ಸ್ವಚ್ಛತೆ ಮರೀಚಿಕೆ: ಬಡಾವಣೆ ಮಾತ್ರವಲ್ಲದೆ ಪಟ್ಟಣದ ಎಲ್ಲೆಡೆ ಖಾಲಿ ನಿವೇಶನಗಳಲ್ಲಿ ಜಾಲಿ ಗಿಡ ಮರಗಳು ಬೆಳೆದು ನಿಂತಿವೆ. ಮುಳ್ಳಿನ ಗಿಡ-ಗಂಟಿಗಳು ಬೆಳೆದು ವಿಷ ಜಂತುಗಳ ವಾಸ ಸ್ಥಳವಾಗಿ ಮಾರ್ಪಟ್ಟಿವೆ. ತರಳಬಾಳು ಬಡಾವಣೆಯಲ್ಲಿಯೇ 50ಕ್ಕೂ ಅಧಿಕ ಖಾಲಿ ನಿವೇಶನಗಳು ಜಂಗಲ್ನಂತಾಗಿವೆ. ಇತ್ತೀಚೆಗೆ 3ನೇ ಕ್ರಾಸ್ನಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕನಿಗೆ ನಾಗರ ಹಾವು ಕಚ್ಚಿತ್ತು. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಖಾಲಿ ನಿವೇಶನದ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಸ್ವಚ್ಛತೆ ಕಾಪಾಡಬೇಕಿದೆ.
ಕುಡಿಯುವ ನೀರು, ವಿದ್ಯುತ್, ಗಟಾರ ಸಮಸ್ಯೆ: ತರಳಬಾಳು ಬಡಾವಣೆಯಲ್ಲಿ ಪಟ್ಟಣದ ಓವರ್ಹೆಡ್ ಟ್ಯಾಂಕ್ಗೆ ಪೈಪ್ಲೈನ್ ಸಂಪರ್ಕ ಮಾಡದೇ ಇರುವುದರಿಂದ ಬಡಾವಣೆಯಲ್ಲಿ ಪಂಚಾಯಿತಿ ವತಿಯಿಂದ ಇರುವ ಒಂದು ಬೋರ್ವೆಲ್ ಮಾತ್ರ ಅವಲಂಬಿಸಲಾಗಿದೆ. 2 ದಿನಕ್ಕೊಮ್ಮೆ ಬೋರ್ವೆಲ್ ನೀರು ಸರಬರಾಜ ಮಾಡಲಾಗುತ್ತಿದ್ದು, ತುಂಗಾಭದ್ರಾ ನದಿ ನೀರು ಬಡಾವಣೆ ಜನರಿಗೆ ವಂಚಿತವಾಗಿದೆ.
ತರಳಬಾಳು ಬಡಾವಣೆಯಲ್ಲಿ ಈಗಾಗಲೇ 2 ಮತ್ತು 3ನೇ ಕ್ರಾಸ್ನಲ್ಲಿ ಡಾಂಬರ್ ರಸ್ತೆ ನಿರ್ವಣಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿತ್ತು. 2024-25ನೇ ಸಾಲಿನ 15ನೇ ಹಣಕಾಸು ಯೋಜನೆ ಮಂಜೂರಾಗದೇ ಇರುವುದರಿಂದ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ, ಬಡಾವಣೆಯಲ್ಲಿನ ಎಲ್ಲ ರಸ್ತೆಗಳನ್ನು ಹಂತಹಂತವಾಗಿ ಡಾಂಬರ್ ರಸ್ತೆ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಖಾಲಿ ನಿವೇಶನಗಳಲ್ಲಿ ಮೂಲ ಮಾಲೀಕರಿಗೆ ಸ್ವಚ್ಛತೆ ಕಾಪಾಡುವಂತೆ ನೋಟಿಸ್ ಜಾರಿ ಮಾಡಲಾಗುವುದು ಅಥವಾ ದಂಡ ವಿಧಿಸಲಾಗುವುದು. | ಸಂತೋಷ ಚಂದ್ರಿಕೇರ, ಪ.ಪಂ. ಮುಖ್ಯಾಧಿಕಾರಿ ರಟ್ಟಿಹಳ್ಳಿ ಅನೇಕ ವರ್ಷಗಳಿಂದ ಬಡವಾಣೆಯಲ್ಲಿನ 5 ರಸ್ತೆಗಳು ಅಭಿವೃದ್ಧಿ ಕಾಣದೇ ಕೆಸರುಗದ್ದೆಗಳಾಗಿವೆ. ಸಂಚಾರ ಮಾಡಲು ನಿತ್ಯ ತೊಂದರೆ ಉಂಟಾಗಿದೆ. ರಸ್ತೆಗಳನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಅಭಿವೃದ್ಧಿಪಡಿಸಬೇಕಾಗಿದೆ. ಖಾಲಿ ನಿವೇಶನಗಳಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿವೆ. ಇದರಿಂದ ರಸ್ತೆ ತಿರುವುಗಳು ಕಾಣದಂತಾಗಿದೆ. ಪಟ್ಟಣ ಪಂಚಾಯಿತಿ ಈ ಎಲ್ಲ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು. ಇಲ್ಲವಾದರೆ ಸ್ಥಳೀಯ ನಿವಾಸಿಗಳೆಲ್ಲ ಸೇರಿ ಪ್ರತಿಭಟನೆ ಮಾಡುತ್ತೇವೆ. | ವೀರನಗೌಡ ಮಕರಿ, ತರಳಬಾಳು ಬಡಾವಣೆ ನಿವಾಸಿ