ಸಂಚಾರಿ ಪೊಲೀಸ್ ಠಾಣೆ ಮಂಜೂರು ಮಾಡಿಸಿ

hrr
Published on

ಹರಿಹರ: ಹರಿಹರದಲ್ಲಿ ಸಂಚಾರಿ ಪೊಲೀಸ್ ಠಾಣೆ ಮಂಜೂರಾತಿ ಕುರಿತ ವಿಷಯವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ಕೋರಿ ಜನಪರ ಹೋರಾಟ ವೇದಿಕೆಯಿಂದ ಶಾಸಕ ಬಿ.ಪಿ. ಹರೀಶ್ ಅವರಿಗೆ ಭಾನುವಾರ ಮನವಿ ಅರ್ಪಿಸಲಾಯಿತು.

ವೇದಿಕೆ ಸಂಚಾಲಕ ಜೆ. ಕಲೀಂಬಾಷಾ ಮಾತನಾಡಿ, ಜಿಲ್ಲೆಯಲ್ಲಿ ದಾವಣಗೆರೆಯ ನಂತರ ಹರಿಹರ ದೊಡ್ಡ ನಗರವಾಗಿದೆ. ಮಾಜಿ ಕೈಗಾರಿಕಾ ನಗರ, ಐತಿಹಾಸಿಕ ಶ್ರೀ ಹರಿಹರೇಶ್ವರ ದೇವಸ್ಥಾನದ ಮೂಲಕ ದಕ್ಷಿಣ ಕಾಶಿ ಎಂಬ ಖ್ಯಾತಿ ಹರಿಹರ ಹೊಂದಿದೆ. ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳಲ್ಲಿ ಅಂದಾಜು 20 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ, ಬ್ಯಾಂಕ್, ಹೋಟಲ್, ವಸತಿಗೃಹ, ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯದವರ ಅಧ್ಯಾತ್ಮಿಕ ಕೇಂದ್ರಗಳಿವೆ ಎಂದರು.

ಇದೆಲ್ಲದರ ಪರಿಣಾಮವಾಗಿ ನಗರದೊಳಗಿನ ಪ್ರಮುಖ ರಸ್ತೆ, ವ್ಯಾಪಾರ ಸ್ಥಳಗಳಲ್ಲಿ ಜನ ಹಾಗೂ ವಾಹನಗಳ ಸಂಚಾರ ಅಧಿಕವಾಗಿದೆ. ರಸ್ತೆಗಳಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲುಗಡೆ ಮಾಡಲಾಗುತ್ತಿದೆ, ಫುಟ್‌ಪಾತ್‌ಗಳೆಲ್ಲಾ ಅಂಗಡಿ, ಮುಂಗಟ್ಟುಗಳಿಂದ ಅಕ್ರಮಿತವಾಗಿವೆ, ಪರಿಣಾಮವಾಗಿ ಪಾದಚಾರಿಗಳು, ಸೈಕಲ್ ಸವಾರರು, ಶಾಲಾ ವಿದ್ಯಾರ್ಥಿಗಳು ರಸ್ತೆಗಳಲ್ಲಿ ಭಾರಿ ವಾಹನಗಳ ಜೊತೆಗೆ ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುತ್ತಿದ್ದಾರೆ.
ಸಿವಿಲ್ ಪೊಲೀಸರು ಕೆಲ ಮಟ್ಟಿಗೆ ವಾಹನ ಸಂಚಾರ ನಿಯಂತ್ರಣ ಮಾಡುತ್ತಾರಾದರೂ ಅದು ಪರಿಣಾಮ ಬೀರುತ್ತಿಲ್ಲ. ಈ ಸಮಸ್ಯೆಗೆ ಸೂಕ್ತ ಪರಿಹಾರವೆಂದರೆ ಸಂಚಾರಿ ಪೊಲೀಸ್ ಠಾಣೆ ಸ್ಥಾಪನೆಯಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಜು. 15ರಿಂದ ಜುಲೈ 26ರ ವರೆಗೆ ನಡೆಯುವ ರಾಜ್ಯದ ವಿಧಾನಸಭಾ ಅಧಿವೇಶನದಲ್ಲಿ ಸದರಿ ವಿಷಯ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಗಮನ ಸೆಳೆದು ನಗರಕ್ಕೆ ತುರ್ತಾಗಿ ಸಂಚಾರಿ ಪೊಲೀಸ್ ಠಾಣೆ ಮಂಜೂರು ಮಾಡಿಸಿಕೊಡಬೇಕಾಗಿ ಕೋರಿದರು.

ಕಳೆದ ವಿಧಾನಸಭಾ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸಿದ್ದೆ, ಈ ಬಾರಿಯೂ ಪ್ರಸ್ತಾಪಿಸಿ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಶಾಸಕ ಹರೀಶ್ ಭರವಸೆ ನೀಡಿದರು.

ವೇದಿಕೆ ಪದಾಧಿಕಾರಿಗಳಾದ ಎಚ್.ಕೆ. ಕೊಟ್ರಪ್ಪ, ಟಿ.ಜೆ. ಮುರುಗೇಶಪ್ಪ, ಪಿ.ಜೆ. ಮಹಾಂತೇಶ್, ಐರಣಿ ಹನುಮಂತಪ್ಪ, ಮೊಹ್ಮದ್ ಇಲಿಯಾಸ್ ಬಡೇಘರ್, ಹಲಗೇರಿ ನಜೀರ್ ಅಹ್ಮದ್, ಕಾನೂನು ಸಲಹೆಗಾರ ಇನಾಯತ್ ಉಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net