ಜನಸೇವೆಯೇ ಜನಪ್ರತಿನಿಧಿಗಳ ಧ್ಯೇಯ

2 SKP 4
ಶಿಕಾರಿಪುರದಲ್ಲಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಬಿ.ಎಸ್.ಯಡಿಯೂರಪ್ಪ, ಟಿ.ಡಿ.ಮೇಘರಾಜ್, ವೀರೇಂದ್ರ ಪಾಟೀಲ್, ಕೆ.ಎಸ್.ಗುರುಮೂರ್ತಿ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ರೂಪಾ ಬಸವರಾಜ್ ಇತರರಿದ್ದರು.
Published on

ಶಿಕಾರಿಪುರ: ನೀವೆಲ್ಲರೂ ಜನಪ್ರತಿನಿಧಿಗಳು, ಜನಸೇವೆಯೇ ನಿಮ್ಮ ಧ್ಯೇಯವಾಗಬೇಕು. ಜನಹಿತ ಕಾರ್ಯದಿಂದ ನಮಗೆ ಬಲ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದ ಕುಮದ್ವತಿ ಕಾಲೇಜಿನ ಆಡಿಟೋರಿಯಂನಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿ ಗ್ರಾಮಪಂಚಾಯತಿಯೂ ಒಂದು ಸರ್ಕಾರವಿದ್ದಂತೆ. ಅಧಿಕಾರ ವಿಕೇಂದ್ರೀಕರಣದಿಂದ ಜನಸಾಮಾನ್ಯರೂ ಅಧಿಕಾರದ ಗದ್ದುಗೆ ಹಿಡಿಯುವಂತಾಗಿದೆ. ಇದು ನಮ್ಮ ಸಂವಿಧಾನದ ಹಿರಿಮೆ ಎಂದರು.
ಗ್ರಾಮರಾಜ್ಯದಿಂದ ರಾಮರಾಜ್ಯ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಗ್ರಾಮಗಳ ಉದ್ಧಾರದಿಂದ ಮಾತ್ರ ದೇಶದ ಉದ್ಧಾರ ಸಾಧ್ಯ. ಸರ್ಕಾರಗಳು ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡಿವೆ. ಅನುದಾನವನ್ನು ಬಳಸಿಕೊಂಡು ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು. ಜನತೆ ನಿಮ್ಮ ಮೇಲಿಟ್ಟಿರುವ ನಂಬಿಕೆ, ವಿಶ್ವಾಸಗಳು ದ್ವಿಗುಣಗೊಳ್ಳಬೇಕು. ಒಂದು ಪಂಚಾಯಿತಿಯು ಅತ್ಯುತ್ತಮ ಪಂಚಾಯಿತಿಯಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದಾಗಿದೆ. ಈ ಅವಕಾಶ ನಿಮಗೆಲ್ಲರಿಗೂ ಸಿಕ್ಕಂತಹ ಅದ್ಭುತವಾದಂತಹ ಅವಕಾಶವಾಗಿದೆ. ಇದನ್ನು ನೀವೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ರಾಯಭಾರಿಗಳಾಗಿ ಗ್ರಾಮಗಳ ಅಭಿವೃದ್ಧಿಯ ನೇತೃತ್ವ ವಹಿಸಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪಕ್ಷಾತೀತವಾಗಿ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ನಾವು ಜಾತ್ಯತೀತ ನಿಲುವಿನಲ್ಲಿ ಜನರಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಪ್ರತಿ ಮನೆಯೂ ನಿಮ್ಮದೆನ್ನುವಂತೆ ಕರ್ತವ್ಯ ನಿರ್ವಹಿಸಿ ಜನಸಾಮಾನ್ಯರ ಸಂಕಷ್ಟ ಗಳಿಗೆ ಸ್ಪಂದಿಸಿ. ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಕಡೆಗೆ ಹೆಚ್ಚಿನ ಗಮನಹರಿಸಿ. ಜನ ನಿಮ್ಮ ಮೇಲಿಟ್ಟಿರುವ ವಿಶ್ವಾಸ ಎಂದಿಗೂ ಸುಳ್ಳಾಗಬಾರದು. ಇಡೀ ಪಂಚಾಯಿತಿ ಅಭಿವೃದ್ಧಿ ನಿಮ್ಮ ಗುರಿಯಾಗಲಿ. ನಿಮ್ಮ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿಯು ಮಾದರಿ ಗ್ರಾಮಪಂಚಾಯಿತಿ ಆಗಲಿ ಎಂದು ಹೇಳಿದರು.
ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಮಾತನಾಡಿ, ಗ್ರಾಮಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರಿಗೆ ಈಗ ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ಅನುದಾನ ದೊರೆಯುತ್ತಿದೆ. ನಿಮ್ಮ ಸಂಕಲ್ಪ ಶಕ್ತಿಯ ಮೇಲೆ ನಿಮ್ಮ ಯಶಸ್ಸು ನಿಂತಿರುತ್ತದೆ. ಜನರ ಸಮಸ್ಯೆಗಳಿಗೆ ನೀವು ದನಿಯಾಗಿ ಕೆಲಸ ಮಾಡಬೇಕು. ಪಕ್ಷಾತೀತ, ಜಾತ್ಯತೀತ ಭಾವನೆಯಿಂದ ಅಧಿಕಾರವನ್ನು ಚಲಾಯಿಸಿ ಎಂದು ತಿಳಿಸಿದರು.
ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್, ಮುಖಂಡರಾದ ಕೆ.ಎಸ್.ಗುರುಮೂರ್ತಿ, ನಿಂಬೆಗೊಂದಿ ಸಿದ್ದಲಿಂಗಪ್ಪ, ಸಂಕ್ಲಾಪುರ ಹನುಮಂತಪ್ಪ, ರೂಪಾ ಬಸವರಾಜ್, ತಾಳಗುಂದ ಸತೀಶ್, ಅಂಬಾರಗೊಪ್ಪ ಮಲ್ಲೇಶಪ್ಪ ಸೇರಿದಂತೆ, ಪಕ್ಷದ ಪದಾಧಿಕಾರಿಗಳು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net