

ವಿ.ಶಿವಾರೆಡ್ಡಿ ಬಂಗಾರಪೇಟೆ
ಪಂಚಾಯಿತಿ ವ್ಯಾಪ್ತಿಯ ಕಟ್ಟಡ ಮತ್ತು ನಿವೇಶನ ಖಾತೆಗಳನ್ನು ಪುರಸಭೆಗೆ ವರ್ಗಾವಣೆ ಮಾಡಿಕೊಂಡಿದ್ದರೂ, ಪಿಐಡಿ ಸಂಖ್ಯೆಇಲ್ಲದ ಕಾರಣ ಕಂದಾಯ ಪಾವತಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ಖಾತೆದಾರರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಬಂಗಾರಪೇಟೆ ಪುರಸಭೆಗೆ ಹೊಂದಿಕೊಂಡಿರುವ ಬಹುತೇಕ ಗ್ರಾಪಂಗಳ ಪೈಕಿ ಕಾರಹಳ್ಳಿ ಗ್ರಾಮ ಪಂಚಾಯಿತಿಗೆ ಬರುವ ಹಲವು ಸರ್ವೇ ನಂಬರ್ಗಳನ್ನು ಪಂಚಾಯಿತಿ ವ್ಯಾಪ್ತಿಯಿಂದ ಪುರಸಭೆಗೆ ಸೇರಿಸಿಕೊಳ್ಳಲಾಗಿದೆ. ಪುರಸಭೆ ವ್ಯಾಪ್ತಿಗೆ ಸೇರಿದ ಹಲವು ಸರ್ವೇ ನಂಬರ್ಗಳಲ್ಲಿ ವಿಂಗಡಿಸಿದ ನಿವೇಶನ ಮತ್ತು ಕಟ್ಟಡಗಳು ಪಂಚಾಯಿತಿಯಲ್ಲಿ ಖಾತೆ ತೆರೆಯಲಾಗಿತ್ತು. ಪಂಚಾಯಿತಿಯಲ್ಲಿ ಖಾತೆ ತೆರೆದಿರುವ ಹಲವು ಸರ್ವೇ ನಂ.ಗಳ ನಿವೇಶನ ಮತ್ತು ಕಟ್ಟಡಗಳನ್ನು ಪಂಚಾಯಿತಿಯಲ್ಲಿ ರದ್ದು ಪಡಿಸಿ ಪುರಸಭೆಗೆ ವರ್ಗಾಯಿಸಿ ಖಾತೆ ಮಾಡಿಕೊಳ್ಳಲಾಗಿದೆ.
ಈ ಖಾತೆಗಳ ಪೈಕಿ ಹಲವು ವಾಸದ ಮನೆಗಳೂ ನಿಮಾರ್ಣವಾಗಿದ್ದು, ಪುರಸಭೆಯಿಂದ ಕುಡಿಯುವ ನೀರಿನ ಸಂಪರ್ಕವೂ ನೀಡಲಾಗಿದೆ. ಕೋಲಾರ ಮುಖ್ಯ ರಸ್ತೆಯಿಂದ ಕಾರಹಳ್ಳಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ಅಕ್ಕ ಪಕ್ಕದ ನಿವೇಶನ ಮತ್ತು ಕಟ್ಟಡಗಳು ಹೆಚ್ಚಾಗಿ ಪಂಚಾಯಿತಿಯಿಂದ ಕೈ ಬಿಟ್ಟು ಪುರಸಭೆಯಲ್ಲಿ ಕೈ ಬರಹದ (ಮ್ಯಾನ್ಯುಯಲ್) ಖಾತೆ ತೆರೆದಿರುವುದೇ ಈಗ ಆನ್ಲೈನ್ ಕಂದಾಯ ಪಾವತಿಗೆ ಸಮಸ್ಯೆಯಾಗುತ್ತಿದೆ.
ಈ ರಸ್ತೆಯ ಭಾಗದಲ್ಲಿ 40ಕ್ಕೂ ಹೆಚ್ಚು ಕೈ ಬರಹ ಖಾತೆಗಳು ಪುರಸಭೆಯಲ್ಲಿ ತೆರೆಯಲಾಗಿದೆ. ಆದರೆ ಖಾತೆದಾರರಿಗೆ ಪಿಐಡಿ ಸಂಖ್ಯೆ ಇಲ್ಲದ ಕಾರಣ ಆನ್ಲೈನ್ ಪಾವತಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸುಮಾರು ನಾಲ್ಕೆ$ದು ವರ್ಷಗಳ ಹಿಂದೆ ಪುರಸಭೆಯಲ್ಲಿ ಖಾತೆಯಾಗಿ ನೀರಿನ ಸಂಪರ್ಕವೂ ಪಡೆದುಕೊಂಡು ವಾಸ ಮಾಡುತ್ತಿದ್ದೇವೆ. ಆದರೆ ಕಂದಾಯ ಕಟ್ಟಿಸಿಕೊಳ್ಳಲು ಪುರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಪಂಚಾಯಿತಿಯಲ್ಲೇ ಖಾತೆ ಮಾಡಿಕೊಳ್ಳಿ ಎಂದು ತಿಳಿಸುತ್ತಾರೆ. ನಮಗೆ ಹಿಂಬರಹ ನೀಡಿ ಎಂದರೂ ನೀಡುತ್ತಿಲ್ಲ ಎಂದು ಖಾತೆದಾರರು ಅಸಮಾಧಾನ ಹೊರ ಹಾಕಿದ್ದಾರೆ.
ಪಂಚಾಯಿತಿ ವ್ಯಾಪ್ತಿಗೆ ಬರುವ ನಿವೇಶನ, ಕಟ್ಟಡಗಳಿಗೆ ಪುರಸಭೆಯಲ್ಲಿ ಖಾತೆ ತೆರೆದ ಬಗ್ಗೆ ಕಂದಾಯ ಕಟ್ಟಿಸಿಕೊಳ್ಳಬೇಕು. ಖಾತೆ ಸಮಯದಲ್ಲೇ ಪಿಐಡಿ ಸಂಖ್ಯೆ ನೀಡಬೇಕಾದದ್ದು, ಪುರಸಭೆ ಅಧಿಕಾರಿಗಳ ಕರ್ತವ್ಯ. ಈಗ ಪಿಐಡಿ ಸಂಖ್ಯೆ ಇಲ್ಲ ಎಂದು ಹೇಳಿ ಕಂದಾಯ ಕಟ್ಟಿಸಿಕೊಳ್ಳದೆ ಇರುವುದು ಯಾವ ನ್ಯಾಯ? ಹಾಗಾದರೆ ಪುರಸಭೆಯಲ್ಲಿ ಏಕೆ ಖಾತೆ ಮಾಡಿಕೊಡಬೇಕು ಎನ್ನುವುದು ಖಾತೆದಾರರ ವಾದವಾಗಿದೆ.
ಸಾರ್ವಜನಿಕರಿಗೆ ತೊಂದರೆ
ಈ ಹಿಂದೆ ಇದ್ದ ಮುಖ್ಯಾಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯ ಜಾಗಗಳನ್ನು ಪುರಸಭೆಯಲ್ಲಿ ತೆರೆದಿದ್ದ ಖಾತೆಗಳಿಗೆ ಆಕ್ಷೇಪಣೆ ಸಲ್ಲಿಸಿ ಹಿಂಬರಹ ನೀಡಿದ್ದರು. ಆದರೆ ತಮ್ಮ ವ್ಯಾಪ್ತಿಗೆ ಬರದೆ ಇದ್ದರೂ ಪುರಸಭೆಯಲ್ಲಿ ತೆಗೆದಿರುವ ಅಕ್ರಮ ಖಾತೆಗಳ ಬಗ್ಗೆ ತನಿಖೆ ಏಕೆ ನಡೆದಿಲ್ಲ. ಅಕ್ರಮ ಖಾತೆ ತೆರೆದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೂ, ಅಂತಹವರ ವಿರುದ್ಧ ಇದುವರೆಗೂ ಕಾನೂನು ಕ್ರಮ ಯಾಕೆ ನಡೆಸಿಲ್ಲ ಎಂಬುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ. ಒಟ್ಟಿನಲ್ಲಿ ಬೇಲಿಯೇ ಎದ್ದು ಹೊಲಮೈಯ್ದರೇ ರಕ್ಷಣೆ ಮಾಡೋರು ಎಂಬಂತಿದೆ ಪುರಸಭೆಯಲ್ಲಿ ಬೆಳಕಿಗೆ ಬಂದಿರುವ ವ್ಯಾಪ್ತಿ ಮೀರಿದ ಖಾತೆಗಳು.!
ಈ ಹಿಂದೆ ಪಂಚಾಯಿತಿ ವ್ಯಾಪ್ತಿ ಗೊತ್ತಿಲ್ಲದೆ ಪುರಸಭೆಯಲ್ಲಿ ಹಲವು ಖಾತೆ ಮಾಡಲಾಗಿದೆ. ಈ ಹಿಂದೆ ಇದ್ದ ಮುಖ್ಯಾಧಿಕಾರಿ ಮೀನಾಕ್ಷಿ ಅವರು ಸದರಿ ಖಾತೆಗಳು ಪುರಸಭೆ ವ್ಯಾಪ್ತಿಗೆ ಬರುವುದಿಲ್ಲ. ಪಂಚಾಯಿತಿಯಲ್ಲಿ ಖಾತೆ ಮಾಡಿಸಿಕೊಳ್ಳಿ ಎಂದು ಹಿಂಬರಹ ನೀಡಿದ್ದಾರೆ. ಅದೇ ಮಾದರಿಯಲ್ಲಿ ಈಗಲೂ ಸಹ ಹಿಂಬರಹ ನೀಡುತ್ತಿದ್ದೇವೆ. ಈಗಾಗಲೇ ಏಳೆಂಟು ಖಾತಾದಾರರಿಗೆ ಹಿಂಬರಹ ನೀಡಲಾಗಿದೆ.
- ಸತ್ಯನಾರಾಯಣ
ಮುಖ್ಯಾಧಿಕಾರಿ