26ರಂದು ರೈತರಿಂದ ಜನರ ಗಣರಾಜ್ಯೋತ್ಸವ: ಕೋಡಿಹಳ್ಳಿ ಚಂದ್ರಶೇಖರ್

Kodihalli Chandrashekhar
Published on

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಯಥಾವತ್ತಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಹೊರಟಿರುವುದನ್ನು ವಿರೋಧಿಸಿ ರೈತ ಸಂಘಟನೆಗಳು ಜ.26ರಂದು ಪ್ರತಿಭಟನೆ ನಡೆಸಲಿವೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

26ರಂದು ದೆಹಲಿಯಲ್ಲಿ ಸರ್ಕಾರ ಗಣರಾಜ್ಯೋತ್ಸವ ನಡೆಸಿದ ಬಳಿಕ ದೆಹಲಿ ಪ್ರವೇಶಿಸಲು ನಿರ್ಧರಿಸಿರುವ ರೈತರು ಜನರ ಗಣರಾಜ್ಯೋತ್ಸವ ಆಚರಿಸಲು ಮುಂದಾಗಿದ್ದಾರೆ. ಟ್ರ್ಯಾಕ್ಟರ್‍ಗಳಿಗೆ ರಾಷ್ಟ್ರ ಧ್ವಜ ಮತ್ತು ಹಸಿರು ಬಾವುಟಗಳನ್ನು ಕಟ್ಟಿಕೊಂಡು ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಖಾಸಗಿಗೆ:

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಚ್ಚಿ ಅವುಗಳನ್ನು ಖಾಸಗಿಯವರಿಗೆ ವಹಿಸಿಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ. ಈಗಾಗಲೇ ಸೇವಾ ವಲಯಗಳನ್ನು ಬಂಡವಾಳಶಾಹಿಗಳಿಗೆ ವಹಿಸಿಕೊಡಲಾಗುತ್ತಿದೆ. ವಿದ್ಯುತ್ ಕಂಪನಿ, ವಿಮಾನ ನಿಲ್ದಾಣ ಮತ್ತು ರೈಲು ಮಾರ್ಗಗಳಿಗೆ ಕಾರ್ಪೊರೇಟ್ ಕಂಪನಿಗಳ ಪ್ರವೇಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿಯಿಂದ ರೈತರನ್ನು ಹೊರಗಿಡುವ ತಂತ್ರ:

ಕೃಷಿ ಕಾಯ್ದೆಗಳ ಮೂಲಕ ರೈತರನ್ನು ಕೃಷಿ ವಲಯದಿಂದ ಹೊರಗಿಡುವ ತಂತ್ರ ನಡೆಯುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾನುವಾರು ಹತ್ಯೆ ವಿರೋಧಿ ಕಾನೂನಾಗಿ ಜಾರಿಗೊಳಿಸಿ ರೈತರ ಕೈಯಿಂದ ಹೈನುಗಾರಿಕೆ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ಇದನ್ನು ವಿರೋಧಿಸಿ ರಾಜ್ಯದಲ್ಲೂ ಜ.26ರಂದು ಜನರ ಗಣರಾಜ್ಯೋತ್ಸವ ಆಚರಿಸಲು ರೈತರು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.

ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪ ಗೌಡ, ರಾಜ್ಯ ಮುಖಂಡ ತರೀಕೆರೆ ಮಹೇಶ್, ಮುಖಂಡರಾದ ನಾಗೇಶ್, ಮಂಜೇಗೌಡ, ಓಂಕಾರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net