ಜನಪ್ರತಿನಿಧಿಗಳಿಗೆ ತಮ್ಮ ಕಾರ್ಯದ ಆತ್ಮಾವಲೋಕನ ಅಗತ್ಯ

22bhr 1 (1)
ಬಾಳೆಹೊನ್ನೂರು ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಎಂ.ವಿ.ಶ್ರೀನಿವಾಸಗೌಡ ನಿರ್ಗಮಿತ ಅಧ್ಯಕ್ಷ ಎಂ.ಡಿ.ಶಿವರಾಮ್ ಅವರಿಂದ ಅಧಿಕಾರ ಸ್ವೀಕರಿಸಿದರು.
Published on

ಬಾಳೆಹೊನ್ನೂರು: ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿರುವ ಶಾಸಕ, ಜನಪ್ರತಿನಿಧಿಗಳು ನಾವು ಸಮಾಜಕ್ಕಾಗಿ ಎಷ್ಟರಮಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಹೇಳಿದರು.
ಪಟ್ಟಣದ ಲಯನ್ಸ್ ಕ್ಲಬ್ ಭಾನುವಾರ ಆಯೋಜಿಸಿದ್ದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣ ವ್ಯವಸ್ಥೆ ಇಂದು ಸಾಕಷ್ಟು ಬದಲಾವಣೆ ಕಾಣಬೇಕಿದೆ. ರಾಜಕಾರಣಿಗಳು ಸಾಮಾಜಿಕ ಸಂಘ, ಸಂಸ್ಥೆಗಳ ಮೂಲಕ ಹಲವು ವಿಷಯಗಳನ್ನು ಕಲಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸೇವೆ ಎಂದರೆ ಏನು ಎನ್ನುವುದನ್ನು ರಾಜಕಾರಣಿಗಳು ಅಗತ್ಯವಾಗಿ ಕಲಿಯಬೇಕಿದೆ ಎಂದರು.
ಜನಸಾಮಾನ್ಯರು, ಬಡವರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮನೋಭಾವನೆಯನ್ನು ಸಂಘ ಸಂಸ್ಥೆಗಳ ಮೂಲಕ ರಾಜಕಾರಣಿಗಳು ಅರ್ಥೈಸಿಕೊಳ್ಳಬೇಕಿದೆ. ಸರ್ಕಾರದ ಯೋಜನೆಗಳನ್ನು ಜನರು ಇಂದು ಗುಮಾನಿಯಲ್ಲಿ ನೋಡುವ ಪರಿಸ್ಥಿತಿ ಎದುರಾಗಿದ್ದು, ಸರ್ಕಾರದ ಭಾಗವಾಗಿರುವ ಆಡಳಿತ ಪಕ್ಷಗಳು ಘೋಷಿಸುವ ಯೋಜನೆಗಳು ಸ್ವಾರ್ಥದಿಂದಲೇ ಕೂಡಿವೆ ಎಂಬುದು ಜನರಿಗೆ ಅರ್ಥವಾಗಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಎಂ.ವಿ.ಶ್ರೀನಿವಾಸಗೌಡ ನಿರ್ಗಮಿತ ಅಧ್ಯಕ್ಷ ಎಂ.ಡಿ.ಶಿವರಾಮ್ ಅವರಿಂದ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಕಾರ್ಯದರ್ಶಿ ವಿಲಿಯಂ ಡಯಾಸ್, ನೂತನ ಕಾರ್ಯದರ್ಶಿ ಎಂ.ನಾರಾಯಣ, ಶಿವಮೊಗ್ಗ ಡಿವಿಎಸ್ ಕಾಲೇಜಿನ ಅಧ್ಯಕ್ಷ ಕೆ.ಎನ್.ರುದ್ರಪ್ಪ, ಖಜಾಂಚಿ ಸಿ.ಎ.ಶರತ್‌ಕುಮಾರ್, ಕೆ.ನಾರಾಯಣಶೆಟ್ಟಿ ತುಪ್ಪೂರು, ಸುಮಾ, ಸವಿತಾ, ಗೋಪಾಲಗೌಡ, ಮಂಜುನಾಥ್ ತುಪ್ಪೂರು, ಜ್ಯೋತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net