

ಅರವಿಂದ ಅಕ್ಲಾಪುರ ಶಿವಮೊಗ್ಗ
ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಅಸಮರ್ಥರಾದವರು ಪ್ರತ್ಯೇಕ ಜಿಲ್ಲಾಸ್ಪತ್ರೆ ಕನವರಿಕೆ ಮಾಡುತ್ತಿದ್ದಾರೆ. ಸಿಮ್ಸ್ ಬೋಧನಾ ಆಸ್ಪತ್ರೆಯಾಗಿರುವ ಮೆಗ್ಗಾನ್ ಬದಲಿಗೆ ಬೇರೆ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಜನಪ್ರತಿನಿಧಿಗಳ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದು ನೆಗಡಿ ಬಂತೆಂದು ಮೂಗನ್ನೇ ಕತ್ತರಿಸಿಕೊಂಡವರ ಕಥೆಯಂತಾಗಿದೆ.
ಕಳೆದೊಂದು ದಶಕದವರೆಗೂ ಮೆಗ್ಗಾನ್ ಆಸ್ಪತ್ರೆಯೇ ಜಿಲ್ಲಾಸ್ಪತ್ರೆಯೂ ಆಗಿತ್ತು. ಬಳಿಕ ಶಿಕಾರಿಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಸ್ಪತ್ರೆವ ಪಟ್ಟ ನೀಡಲಾಯಿತು. ನಂತರ ಮತ್ತೆ ರಾಜಕೀಯ ಕಾರಣದಿಂದ ಜಿಲ್ಲಾಸ್ಪತ್ರೆ ಮೆಗ್ಗಾನ್‌ಗೆ ವರ್ಗಾವಣೆಯಾಯಿತು. ಜಿಲ್ಲಾ ಸರ್ಜನ್ ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದೀಗ ಕಳೆದ ಕೆಲ ತಿಂಗಳಿನಿಂದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೊಸದೊಂದು ಪ್ರಸ್ತಾವನೆ ಮಾಡುತ್ತಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಸಚಿವರ ಪ್ರಕಾರ ಮೆಗ್ಗಾನ್ ಆಸ್ಪತ್ರೆ ಸಿಮ್ಸ್ ಬೋಧನಾ ಆಸ್ಪತ್ರೆ ಆಗಿರುವುದರಿಂದ ಇಲ್ಲಿನ ಸಿಬ್ಬಂದಿಯಿಂದ ಸರಿಯಾದ ಸೇವೆ ಸಿಗುತ್ತಿಲ್ಲ. ಹೀಗಾಗಿ ಪ್ರತ್ಯೇಕವಾಗಿ ಜಿಲ್ಲಾಸ್ಪತ್ರೆ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಈ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅಲ್ಲಿಂದ ಸಕಾರಾತ್ಮಕ ಸ್ಪಂದನೆಯೂ ಸಿಕ್ಕಿದೆ. ಆದರೆ ಇರುವ ಅವ್ಯವಸ್ಥೆಯನ್ನು ಸುಧಾರಿಸದೆ ಮತ್ತೊಂದು ವ್ಯವಸ್ಥೆಯನ್ನು ಹುಟ್ಟುಹಾಕುವುದು ಎಷ್ಟು ಸಮಂಜಸ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಕೇಳಿ ಬರುತ್ತಿವೆ.
ಯಾರ ಅಂಕುಶವೂ ಇಲ್ಲ: ಸಿಮ್ಸ್ ಬೋಧನಾ ಆಸ್ಪತ್ರೆ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ಆರೋಗ್ಯ ಇಲಾಖೆ ಆದೇಶಗಳು ಪಾಲನೆಯಾಗುವುದಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿ ಮಾತೂ ನಡೆಯುವುದಿಲ್ಲ. ಸಲಹಾ ಸಮಿತಿ ನೆಪ ಮಾತ್ರ ಎಂಬಂತಾಗಿದೆ. ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ಸರ್ಜನ್ ಹೀಗೆ ವಿವಿಧ ಸ್ತರಗಳಲ್ಲಿ ಹಿರಿಯ ಅಧಿಕಾರಿಗಳಿದ್ದರೂ ವ್ಯವಸ್ಥೆ ಸುಧಾರಿಸುವುದು ಇವರಿಂದ ಸಾಧ್ಯವಾಗುತ್ತಿಲ್ಲ. ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಮುಂತಾದ ಅತಿರಥ ಮಹಾರಥರು ಸರಣಿ ಸಭೆ ನಡೆಸಿ ಎಚ್ಚರಿಕೆ ನೀಡಿದರೂ ಸಿಮ್ಸ್ ಬೋಧನಾ ಆಸ್ಪತ್ರೆಯಲ್ಲಿ ಗುಣಮಟ್ಟ ಸುಧಾರಣೆಯಾಗಲಿಲ್ಲ.
ಗುಂಪುಗಾರಿಕೆ-ಜಾತಿ ವ್ಯವಸ್ಥೆ: ಸರ್ಕಾರಗಳು ಬದಲಾದ ಸಂದರ್ಭದಲ್ಲಿ ಸಿಮ್ಸ್‌ನಲ್ಲಿ ಹಿರಿಯ ಅಧಿಕಾರಿಗಳ ಎತ್ತಂಗಡಿ ಪ್ರಕ್ರಿಯೆ ನಡೆಯುತ್ತದೆ. ಈ ವಿಷಯದಲ್ಲಿ ಸಾಮರ್ಥ್ಯಕ್ಕಿಂತ ಜಾತಿಗೇ ಹೆಚ್ಚು ಒತ್ತು. ಆಸ್ಪತ್ರೆಯೊಳಗಿನ ಗುಂಪುಗಾರಿಕೆ, ಜಾತಿ ರಾಜಕೀಯ ಕೆಲ ವರ್ಷಗಳಿಂದ ಮಿತಿ ಮೀರಿದೆ. ಸಿಬ್ಬಂದಿ ತಮ್ಮದೇ ಗುಂಪು ಕಟ್ಟಿಕೊಂಡು ಒಬ್ಬರ ವಿರುದ್ಧ ಮತ್ತೊಬ್ಬರು ಪಿತೂರಿ ನಡೆಸುತ್ತಾರೆ. ಇದೆಲ್ಲದರ ನಡುವೆ ಆಸ್ಪತ್ರೆಗೆ ಬರುವ ರೋಗಿಗಳು, ಅವರ ಸಂಬಂಧಿಕರು ಪರಿತಪಿಸುವಂತಾಗಿದೆ.
ಹೊಸ ಆಸ್ಪತ್ರೆಗೆ ತೊಡಕುಗಳೇನು?: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳೆಲ್ಲವೂ ಜಿಲ್ಲಾಸ್ಪತ್ರೆಯನ್ನೇ ಬೋಧನಾ ಆಸ್ಪತ್ರೆಗಳನ್ನಾಗಿ ಮಾಡಿಕೊಂಡಿವೆ. ಈಗ ಶಿವಮೊಗ್ಗಕ್ಕೆ ಮಾತ್ರ ಪ್ರತ್ಯೇಕವಾಗಿ ಜಿಲ್ಲಾಸ್ಪತ್ರೆ ನೀಡಿದರೆ ಉಳಿದ ಜಿಲ್ಲೆಗಳಲ್ಲೂ ಇದೇ ಬೇಡಿಕೆ ವ್ಯಕ್ತವಾಗುತ್ತದೆ. ಸರ್ಕಾರಕ್ಕೆ ಇದು ಆರ್ಥಿಕ ಹೊರೆಯಾಗಲಿದೆ. ಒಂದು ವೇಳೆ ಆಸ್ಪತ್ರೆ ನಿರ್ಮಾಣ ಮಾಡುವುದಾದರೆ ಶಿವಮೊಗ್ಗದ ಹೃದಯ ಭಾಗದಲ್ಲಿ ಸೂಕ್ತವಾದ ಭೂಮಿ ಲಭ್ಯವಿಲ್ಲ. ಮೆಗ್ಗಾನ್ ಆವರಣದಲ್ಲಿ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಜಾಗವಿಲ್ಲ. ನಗರದ ಹೊರ ಭಾಗದಲ್ಲಿ ನಿರ್ಮಿಸಿದರೆ ರೋಗಿಗಳಿಗೆ ಸಮಸ್ಯೆಯಾಗಲಿದೆ.