ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವವನೇ ಜನಪ್ರತಿನಿಧಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Ex CM Basavaraj bommai
Published on

ಶಿಗ್ಗಾಂವಿ(ಗ್ರಾ): ಅಭಿವೃದ್ಧಿ ಎಂದರೆ ನಿರಂತರವಾಗಿ ನಡೆಯುವ ಪ್ರಗತಿ. ಜನಸಂಖ್ಯೆ ಹೆಚ್ಚಾದಂತೆ ಜನರ ಆಶೋತ್ತರಗಳು ಹೆಚ್ಚಾಗುತ್ತವೆ. ಹೀಗಾಗಿ ದಣಿವರಿಯದೇ ಯಾರು ದುಡಿಯುತ್ತಾರೋ ಅವರು ಜನಪ್ರತಿನಿಧಿಗಳಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ ತಾಲೂಕಿನ ಕಾಮನಹಳ್ಳಿ ಹತ್ತಿರದ ಫಿನಿಕ್ಸ್ ಇಂಟರ್​ನ್ಯಾಷನಲ್ ಶಾಲೆ ಆವರಣದಲ್ಲಿ ತಮ್ಮ 64ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಬಡಮಕ್ಕಳ ದತ್ತು ಪಡೆಯುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಂತಕ್ಕಾಗಿ, ಸಾರ್ಥಕ್ಕಾಗಿ ದುಡಿಯದೇ ಯಾರಿಂದ ನೀವು ಅಧಿಕಾರಿ ಪಡೆದುಕೊಂಡಿರುತ್ತೀರೋ ಅವರ ಪರವಾಗಿ ನಿರಂತರವಾಗಿ ಕೆಲಸ ಮಾಡುವವನೇ ನಿಜವಾದ ಜನಪ್ರತಿನಿಧಿ ಎಂದರು.

ಶಾಸಕರಾಗುವುದು, ಮಂತ್ರಿಗಳಾಗುವುದು ನಿರಂತರ ಹುದ್ದೆ ಅಲ್ಲ. ಈಗ ಸಾಮಾಜಿಕವಾಗಿ ಹಾಗೆ ಆಗಿದೆ. ಆದರೆ, ಶಾಸಕರಾದಂತೆ, ಸಚಿವ, ಮುಖ್ಯಮಂತ್ರಿಗಳಾದಂತೆ ಹೆಚ್ಚಿನ ಜವಾಬ್ದಾರಿಯಿರುತ್ತದೆ. ಆದ್ದರಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ನಾನು ಪ್ರಧಾನ ಸೇವಕ ಎಂದು ಹೇಳಿಕೊಳ್ಳುತ್ತಾರೆ. ಅಧಿಕಾರ ಯಾವತ್ತೂ ಶಾಶ್ವತವಲ್ಲ. ನಾನಂತೂ ಯಾವುದೇ ಸ್ಥಾನ ಸಿಕ್ಕರೂ ಇವತ್ತೇ ನನ್ನ ಕೊನೇಯ ದಿನ ಎಂದು ತಿಳಿದು ಕೆಲಸ ಮಾಡುತ್ತೇನೆ. ಇದರಿಂದ ಮನಸ್ಸು ಸ್ವಚ್ಛ ಮತ್ತು ದ್ವೇಶಮುಕ್ತವಾಗಿರುತ್ತದೆ ಎಂದರು.

ಮೃತ್ಯುಂಜಯ ಸೇವಾ ಸಂಸ್ಥೆಯ ಉಪಾಧ್ಯಕ್ಷ ನರಹರಿ ಕಟ್ಟಿ ಮಾತನಾಡಿ, ನಮ್ಮ ನೆಚ್ಚಿನ ಶಾಸಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 2008ರ ಪೂರ್ವದಲ್ಲಿ ಅಭಿವೃದ್ಧಿಯಲ್ಲಿ ಹಿಂದುಳಿದ ಕ್ಷೇತ್ರವಾಗಿದ್ದ ಶಿಗ್ಗಾಂವಿ ಕ್ಷೇತ್ರವನ್ನು 2008ರ ನಂತರ ಕೆಲ ವರ್ಷಗಳಲ್ಲಿಯೇ ಕರ್ನಾಟಕದ ಭೂಪಟದಲ್ಲಿ ಗುರುತಿಸುವಂಥ ಕೆಲಸ ಮಾಡಿದ್ದಾರೆ. ಅವರ ಜನ್ಮದಿನದ ಅಂಗವಾಗಿ ನಮ್ಮ ಸಂಸ್ಥೆಯಿಂದ ಕಳೆದ ಬಾರಿ 15 ಆಕಳುಗಳನ್ನು ದಾನವಾಗಿ ನೀಡಿದ್ದೇವೆ. ಈ ವರ್ಷ ಅವರು ಶಾಸಕರಾಗಿ 16 ವರ್ಷ ಪೂರೈಸಿದ್ದರಿಂದ 16 ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ನಮ್ಮ ಸಂಸ್ಥೆ ವತಿಯಿಂದ 10ನೇ ತರಗತಿ ವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರಿಗೆ, ಮತ್ತು ಆರೋಗ್ಯ ಸಹಾಯಕಿಯರಿಗೆ ಮೃತ್ಯುಂಜಯ ಸೇವಾ ಸಂಸ್ಥೆ ವತಿಯಿಂದ ಸನ್ಮಾನ ಕಾರ್ಯಕ್ರಮ ಜರುಗಿತು.

ಸಂಸ್ಥೆ ಅಧ್ಯಕ್ಷ ಮೃತ್ಯುಂಜಯ ತಿರ್ಲಾಪುರ, ಉದ್ಯಮಿ ಭರತ ಬೊಮ್ಮಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ರಾಣಿ ತಿರ್ಲಾಪುರ, ಶಿವಾನಂದ ಮ್ಯಾಗೇರಿ, ಕಾಶಿನಾಥ ಕಳ್ಳಿಮನಿ, ಲಕ್ಷ್ಮೀಬಾಯಿ ಕಟ್ಟಿ, ಸಿದ್ದನಗೌಡ ಪಾಟೀಲ, ಸುಮಿತ್ರಾ ಪಾಟೀಲ, ಮಂಜುನಾಥ ಕೆ.ಎಚ್. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net