ಕೇಂದ್ರ ಬಜೆಟ್‌ಗೆ ಜನರ ಮಿಶ್ರ ಪ್ರತಿಕ್ರಿಯೆ

People's reaction to Union Budget is mixed
Published on

ಮಡಿಕೇರಿ:

ಗುರುವಾರ ಮಂಡನೆಯಾದ ಕೇಂದ್ರ ಬಜೆಟ್‌ಗೆ ಕೊಡಗಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ಉತ್ತಮವಾದ ಬಜೆಟ್ ಎನ್ನುವುದು ಹಲವರ ಅಭಿಪ್ರಾಯ. ಜನಸಾಮಾನ್ಯರಿಗೆ ನೇರವಾಗಿ ಸಿಗುವ ಯಾವುದೇ ಯೋಜನೆಗಳು ಈ ಬಜೆಟ್‌ನಲ್ಲಿ ಇಲ್ಲದಿರುವ ಬಗ್ಗೆ ಕೆಲವರಿಗೆ ಅಸಮಾಧಾನವಿದೆ. ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಮಂಡನೆ ಆಗುವ ಬಜೆಟ್‌ಗಳಲ್ಲಿ ಜನರನ್ನು ಮೆಚ್ಚಿಸುವ ರೀತಿಯ ಯೋಜನೆಗಳ ಘೋಷಣೆ ಕಂಡು ಬರುತ್ತಿತ್ತು. ಆದರೆ ಕೇಂದ್ರ ಸರ್ಕಾರದ ಈ ಮಧ್ಯಂತರ ಬಜೆಟ್‌ನಲ್ಲಿ ಅಂತಹ ಯಾವುದೇ ಘೋಷಣೆಗಳು ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಆಯುಷ್ಮಾನ್ ಭಾರತ್ ಕಾರ್ಡ್ ವ್ಯಾಪ್ತಿಗೆ ತಂದಿರುವುದಕ್ಕೆ ಈ ಸಮುದಾಯ ಸ್ವಾಗತಿಸಿದೆ. ಮತ್ತೊಂದು ಕಡೆ ಸರ್ಕಾರದಿಂದ ಪ್ರೋತ್ಸಾಹ ಧನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ನಿರಾಸೆಯೂ ಆಗಿದೆ.

ಪ್ರವಾಸೋದ್ಯಮ ವಲಯಕ್ಕೆ ಒತ್ತು ನೀಡಿರುವುದು ಕೊಡಗಿನಲ್ಲಿ ಹೊಸ ನಿರೀಕ್ಷೆಗಳಿಗೆ ಕಾರಣವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಶೂನ್ಯ ಬಡ್ಡಿ ದರದ ಪ್ರಸ್ತಾಪದಿಂದಾಗಿ ಈ ಕ್ಷೇತ್ರದಲ್ಲಿ ಮತ್ತಷ್ಟು ಹೂಡಿಕೆ ಹೆಚ್ಚುವ ಸಾಧ್ಯತೆ ಇದ್ದು, ಉದ್ಯೋಗವಕಾಶಗಳ ಸೃಷ್ಟಿಯಾಗುವ ಆಶಾಭಾವನೆ ಇದೆ. ೨೦೨೪-೨೫ನೇ ಸಾಲಿನಲ್ಲಿಯೂ ಆದಾಯ ತೆರಿಗೆ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಪಾಡಿಕೊಂಡಿರುವುದರಿಂದ ತೆರಿಗೆ ಪಾವತಿದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಸೌರ ವಿದ್ಯುತ್ ಅಳವಡಿಸಿಕೊಂಡವರಿಗೆ ೩೦೦ ಯೂನಿಟ್ ಉಚಿತ ವಿದ್ಯುತ್ ಸಾರ್ವಜನಿಕರಿಗೆ ಸೌರ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಗ ನೀಡಿದಂತಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ ಸೇರಿದಂತೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎನ್ನುವ ಭರವಸೆ ದೇಶದ ಅಭಿವೃದ್ಧಿ ಪಥಕ್ಕೆ ಹೊಸ ದಿಕ್ಕು ತೋರಿಸಲಿದೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿದೆ. ಈ ಬಗ್ಗೆ ವಿವಿಧ ವಲಯದ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.

ಆಶಾ ಕಾರ್ಯಕರ್ತರಿಗೆ ಮತ್ತು ಅಂಗನವಾಡಿ ಸಹಾಯಕರಿಗೆ ಆಯುಷ್ಮಾನ್ ಯೋಜನೆ ಹಾಗೂ ಆರೋಗ್ಯ ವಿಮೆ ಯೋಜನೆ ನೀಡಿರುವುದು ಬಹಳ ಒಳ್ಳೆಯ ಕಾರ್ಯ. ಅವರು ಪಡುವಂಥ ಶ್ರಮಕ್ಕೆ ಕೇಂದ್ರ ಸರ್ಕಾರ ಉತ್ತಮ ಪ್ರತಿಫಲ ನೀಡಿದೆ ಎಂದೇ ಹೇಳಬಹುದು.
ವಿಜಯಲಕ್ಷ್ಮೀ ಸಿ., ವಕೀಲರು, ಸಿದ್ದಾಪುರ

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನೋಡಿದಾಗ ಚುನಾವಣೆ ಸಮೀಪ ಇರುವಾಗ ಯಾವುದೇ ಜನಪ್ರಿಯ ಅಥವಾ ಉಚಿತ ಯೋಜನೆಗಳನ್ನು ಘೋಷಣೆ ಮಾಡದಿರುವುದು ಆಶ್ಚರ್ಯ. ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತ ಪತ್ರ ಹೊರಡಿಸುವ ಆಲೋಚನೆ ಒಳ್ಳೆಯದು. ಆದಾಯ ತೆರಿಗೆ ಯಥಾಸ್ಥಿತಿ ಕಾಪಾಡಿಕೊಂಡಿರುವುದು ಉತ್ತಮ. ಬೆಳೆ ವಿಮೆ ಸಾಮಾನ್ಯ ರೈತರಿಗೆ ತಲುಪಿಸುವ ಕೆಲಸ ಆಗಬೇಕು. ಸಾರ್ವಜನಿಕ ಸಾರಿಗೆಗೆ ಇ-ಬಸ್ ಹೆಚ್ಚಳ ಒಳ್ಳೆಯದು. ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ನೀಡುತ್ತಿರುವ ಸಾಲದ ಬಡ್ಡಿ ದರ ಇಳಿಕೆ ಮಾಡಬಹುದಿತ್ತು. ನ್ಯಾನೊ ಯೂರಿಯಾ ಬಳಕೆ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ನ್ಯಾನೊ ಡಿಎಪಿ ಬಳಕೆ ಏನಾಗುತ್ತೊ ಗೊತ್ತಿಲ್ಲ. ಆರೋಗ್ಯ, ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಡಲು ಮುಂದಾಗಿರುವುದು ಸ್ವಾಗತಾರ್ಹ. ಸೋಲಾರ್ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ಒಳ್ಳೆಯದು. ಒಟ್ಟಾರೆಯಾಗಿ ರೈತರಿಗೆ ಹೆಚ್ಚಿನ ಅನುಕೂಲವೇನೂ ಇದ್ದಂತೆ ಕಾಣುತ್ತಿಲ್ಲ.
ಉಮಾಶಂಕರ್, ಕೃಷಿಕ, ಶಿಡಿಗಳಲೆ

ಈ ಬಾರಿ ಮಂಡಿಸಿದ ಮಧ್ಯಂತರ ಬಜೆಟ್ ಉತ್ತಮವಾಗಿದೆ. ಎಲ್ಲಾ ವರ್ಗಕ್ಕೂ ಸಮಾನಾಗಿ ಪ್ರಾಶಸ್ತ್ಯ ನೀಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬಹುದಾದ ಎನ್.ಇ.ಪಿ. ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲಿಯೂ ಯಾರನ್ನೂ ಓಲೈಕೆ ಮಾಡದೆ ದೇಶದ ಜನರ ಹಿತದೃಷ್ಟಿಯ ಬಜೆಟ್ ಮಂಡನೆ ಆಗಿದೆ.
ಧರಣಿ, ಶಿಕ್ಷಕಿ, ಸರ್ವದೈವತಾ ಕಾಲೇಜು, ಅರ್ವತೊಕ್ಲು

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ ಮಾಡಿರುವ ಕೇಂದ್ರ ಸರ್ಕಾರದ ನಡೆ ಸ್ವಾಗತಾರ್ಹ. ಆಪತ್ಕಾಲದಲ್ಲಿ ಇದರಿಂದ ನಮಗೆಲ್ಲಾ ಅನುಕೂಲ ಆಗಲಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹಧನ ಹೆಚ್ಚಳ ಮಾಡುವ ನಿರೀಕ್ಷೆ ಇತ್ತು. ಮುಂದಿನ ಬಜೆಟ್‌ನಲ್ಲಾದರೂ ಸರ್ಕಾರ ಈ ಬಗ್ಗೆ ಗಮನ ಹರಿಸಲಿ.
ಸುಚಿತ್ರಾ, ಅಂಗನವಾಡಿ ಕಾರ್ಯಕರ್ತೆ, ಕುಶಾಲನಗರ

ಕೇಂದ್ರ ಸರ್ಕಾರ ಉತ್ತಮವಾದ ಬಜೆಟ್ ಮಂಡನೆ ಮಾಡಿದೆ. ಚುನಾವಣೆಗಳು ಬಂದಾಗ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಜನರನ್ನು ಮೆಚ್ಚಿಸುವ ಬಜೆಟ್ ಮಂಡಿಸುತ್ತವೆ. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿನ ಸರ್ಕಾರ ಅಭಿವೃದ್ಧಿ ದೃಷ್ಟಿಕೋನದ ಬಜೆಟ್ ಮಂಡಿಸಿದೆ. ಪ್ರವಾಸೋದ್ಯಮ ವಲಯಕ್ಕೆ ಬಜೆಟ್‌ನಲ್ಲಿ ಆದ್ಯತೆ ಕೊಡಲಾಗಿದೆ. ಶೂನ್ಯ ಬಡ್ಡಿ ದರದ ಪ್ರಸ್ತಾಪವೂ ಇದೆ. ಇದರಿಂದ ಉದ್ಯೋಗ ಸೃಷ್ಟಿಗೆ ಅನುಕೂಲ ಆಗಲಿದೆ. ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿರುವುದರಿಂದ ಇದು ಕೊಡಗಿಗೂ ಅನುಕೂಲ ಆಗಬಹುದು. ಬಡವರು, ಯುವಕರು, ಮಹಿಳೆಯರನ್ನು ಕೇಂದ್ರೀಕೃತವಾಗಿ ಬಜೆಟ್ ರೂಪಿಸಲಾಗಿದೆ. ನ್ಯಾನೋನ ರೂಪದ ಡಿಎಪಿಯಿಂದ ರೈತ ವರ್ಗಕ್ಕೆ ಸಾಕಷ್ಟು ಅನುಕೂಲತೆಗಳಿವೆ.
ನಾಪಂಡ ರವಿ ಕಾಳಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಬಜೆಟ್ ಜನ ಸಾಮಾನ್ಯರಿಗೆ ಖುಷಿ ಕೊಟ್ಟಿಲ್ಲ. ಜನರಿಗೆ ನೇರವಾಗಿ ಉಪಯೋಗ ಆಗಬಹುದಾದ ಯಾವುದೇ ಯೋಜನೆಗಳು ಬಜೆಟ್‌ನಲ್ಲಿ ಪ್ರಕಟ ಆಗಿದೆ. ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈ ಬಜೆಟ್‌ನಲ್ಲಿ ಅದು ಕೂಡ ಹುಸಿಯಾಗಿದೆ. ಈ ಬಜೆಟ್‌ನಿಂದ ರೈತಾಪಿ ವರ್ಗಕ್ಕೂ ಯಾವುದೇ ಪ್ರಯೋಜನ ಕಾಣುತ್ತಿಲ್ಲ.
ಧರ್ಮಜ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಬಡವ, ಮಹಿಳೆ, ಯುವಕ, ರೈತರ ಉದ್ಧಾರವೇ ಕೇಂದ್ರ ಸರ್ಕಾರದ ಗುರಿ ಎಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ್ದಾರೆ. ಅತೀ ಹೆಚ್ಚು ಸಮಸ್ಯೆಯಿರುವುದು ಕೃಷಿ ಕ್ಷೇತ್ರದಲ್ಲಿ. ಹಾಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕಿತ್ತು. ಮನೆಯ ಚಾವಣಿಗೆ ಸೋಲಾರ್ ಅಳವಡಿಸಿ ೩೦೦ ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ರೈತಪರವಾಗಿದೆ.ಕೃಷಿ ಕ್ಷೇತ್ರಕ್ಕೆ ಇನ್ನು ಹೆಚ್ಚಿನ ತೆರಿಗೆ ವಿನಾಯಿತಿ ಬೇಕಿತ್ತು
ಕೆ.ಎಂ. ದಿನೇಶ್, ಅಧ್ಯಕ್ಷ, ರಾಜ್ಯ ರೈತ ಸಂಘ, ಸೋಮವಾರಪೇಟೆ ತಾಲೂಕು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾವನ್ ಗುರುವಾರ ಮಂಡಿಸಿದ ಬಜೆಟ್ ನಿರಾಸದಾಯಕವಾಗಿದೆ. ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಓಲೈಸುವ ರೀತಿಯ ಬಜೆಟ್ ಇದಾಗಿದೆ. ಆದರೆ ರೈತರಿಗೆ, ಯುವಕರಿಗೆ ಅನುಕೂಲ ಆಗುವ ಯಾವುದೇ ಯೋಜನೆಗಳ ಪ್ರಸ್ತಾಪ ಇಲ್ಲ. ದೂರದೃಷ್ಟಿಯ ಕೊರತೆಯೂ ಈ ಬಜೆಟ್‌ನಲ್ಲಿ ಕಾಣಿಸುತ್ತಿದೆ.
ಪಿ.ಎಂ. ಬಿಜು, ಗ್ರಾ.ಪಂ. ಮಾಜಿ ಸದಸ್ಯ, ಸುಂಟಿಕೊಪ್ಪ

ಇವತ್ತಿನ ಪರಿಸ್ಥಿತಿಗೆ ಅನುಗುಣವಾಗಿ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಮೂಲಭೂತ ಸೌಕರ್ಯಗಳಿಗೆ ಅದ್ಯತೆ ನೀಡಲಾಗಿದೆ. ರೈಲ್ವೆ, ಮಿಲಿಟರಿಗೆ ಒತ್ತು ನೀಡಿ ನಿರ್ಮಲ ಸೀತಾರಾಮನ್ ದೇಶದ ಜನತೆಗೆ ಕೊಡುಗೆ ನೀಡಿದ್ದಾರೆ. ಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮಾಡಿಲ್ಲ. ಒಟ್ಟಿನಲ್ಲಿ ಯಶಸ್ವಿ ಬಜೆಟ್ ಅಷ್ಟೇ..
ಎಸ್.ಕೆ. ಸತೀಶ್, ಉದ್ಯಮಿ, ಕುಶಾಲನಗರ

ಆದಾಯಮಿತಿ ಸಾಮಾನ್ಯ ನಾಗರಿಕರು ಮತ್ತು ರೈತರಿಗೆ ಅನುಕೂಲವಾಗುವುದಿಲ್ಲ. ಜಿಎಸ್‌ಟಿಯಿಂದಾಗಿ ಸಾಮಾನ್ಯ ನಾಗರಿಕ ಮತ್ತು ರೈತರು ತೀವ್ರ ಬವಣೆ ಪಡುತ್ತಿದ್ದಾರೆ. ಸಂಘ, ಸಂಸ್ಥೆಗಳು ಮತ್ತು ಪ್ರಮಾಣಿಕ ವ್ಯವಹಾರ ನಡೆಸುವ ವ್ಯಾಪಾರ ಸಂಸ್ಥೆಗಳು ಜಿಎಸ್‌ಟಿಯಿಂದಾಗಿ ಮುಚ್ಚುವ ಸ್ಥಿತಿನ ತಲುಪುತ್ತಿದ್ದು ಖಾಸಗಿ ಕಳ್ಳ ವ್ಯಾಪಾರಿಗಳು ಜಿಎಸ್‌ಟಿ ಇಲ್ಲದೆ ಹಣ ಗಳಿಸುತ್ತಿದ್ದಾರೆ. ರೈತರು ಮತ್ತು ಸಾಮಾನ್ಯ ನಾಗರಿಕರು ದಿನ ಉಪಯೋಗಿಸುವ ವಸ್ತುಗಳ ಮೇಲೆ ತೆರಿಗೆ ವಿಧಿಸಬಾರದು. ಒಟ್ಟಿನಲ್ಲಿ ಈ ಬಜೆಟ್ ಮೂಗಿಗೆ ತುಪ್ಪ ಸವರುವಂತಿದೆ.
ಸೂದನ ಎಸ್. ಈರಪ್ಪ, ಅಧ್ಯಕ್ಷ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ, ಮಡಿಕೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net