ಬಿಟ್ಟೂಬಿಡದ ಮಳೆ ಜನರ ಪರದಾಟ

18blrp3
ಸೋಮವಾರ ಸಂಜೆ ಸುರಿಯುತ್ತಿರುವ ಮಳೆಯ ನಡುವೆಯೇ ಕಾಲೇಜು ವಿದ್ಯಾರ್ಥಿಗಳು ನೆನೆದುಕೊಂಡೆ ಮನೆಗಳಿಗೆ ತೆರಳಿದರು.
Published on

ಬೇಲೂರು: ತಾಲೂಕಿನಾದ್ಯಂತ ಭಾನುವಾರ-ಸೋಮವಾರ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಜನ ಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಸೋಮವಾರದ ಸಂತೆಗೆ ಬಂದಿದ್ದ ವಿವಿಧ ಗ್ರಾಮಗಳ ಗ್ರಾಮಸ್ಥರು ಪರದಾಡಿದರು.

ತಾಲೂಕಿನಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಮನೆಯಲ್ಲಿದ್ದ ರೈತರೆಲ್ಲ ಜಮೀನಿನತ್ತ ಮುಖ ಮಾಡಿದ್ದಾರೆ. ಆದರೆ ಭಾನುವಾರ-ಸೋಮವಾರದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮಳೆಯಿಂದ ಜನರು ಮನೆಯಿಂದ ಹೊರಗೆ ಬಾರದಂತಾಗಿತ್ತು. ಕೆಲ ಸಮಯ ಬಿಡುವು ನೀಡುತ್ತಿದ್ದ ಮಳೆ ಮತ್ತೆ ಪ್ರಾರಂಭವಾಗುತ್ತಿತ್ತು. ಬೇಲೂರಿನಲ್ಲಿ ಸೋಮವಾರದ ಸಂತೆ ಹಾಗೂ ವಿವಿಧ ಕಚೇರಿ ಕೆಲಸಗಳಿಗೆ ಆಗಮಿಸಿದ್ದ ತಾಲೂಕಿನ ವಿವಿಧ ಗ್ರಾಮಗಳ ಜನರು ಮಳೆಯ ನಡುವೆಯೇ ವ್ಯಾಪಾರ-ವಹಿವಾಟಿನಲ್ಲಿ ತೊಡಗಿದ್ದರು.

ಅಂಗಡಿ-ಮುಂಗಟ್ಟುಗಳಲ್ಲಿ ಮಳೆಯಲ್ಲೆ ಅಗತ್ಯ ವಸ್ತುಗಳನ್ನು ಕೊಂಡು ಅಂಗಡಿಗಳ ಆವರಣವೇ ಗಂಟೆಗಟ್ಟಲೇ ನಿಲ್ಲುವಂತಾಗಿತ್ತು. ಜತೆಗೆ ತಮ್ಮ ಊರುಗಳಿಗೆ ತೆರಳಲು ಮಳೆಯಲ್ಲೆ ನೆದುಕೊಂಡು ಬಸ್ ನಿಲ್ದಾಣಕ್ಕೆ ತೆರಳಿದರೆ, ಮತ್ತೆ ಕೆಲವರು ಪರದಾಡಿದರು. ಅಲ್ಲದೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಭಾಗಗಳಲ್ಲಂತೂ ಮನೆಯಿಂದ ಯಾರೂ ಹೊರ ಬಾರದಂತಾಗಿದೆ. ಕೆರೆ-ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ಆದರೆ ಬಿಟ್ಟ್ಟು ಬಿಟ್ಟು ಬರುತ್ತಿರುವ ಜೋರು ಮಳೆಯಿಂದಾಗಿ ಯಾವುದೇ ಅನಾಹುತವಾಗದಂತೆ ಜಿಲ್ಲಾಡಳಿತ ತಾಲೂಕಿನ ಅಂಗನವಾಡಿಯಿಂದ ಪ್ರೌಢಶಾಲೆವರೆಗಿನ ವಿದ್ಯಾರ್ಥಿಗಳಿಗೆ ಸೋಮವಾರ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಇದರಿಂದ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಮಳೆಯಲ್ಲೆ ಆಗಮಿಸಬೇಕಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಮನೆಯಲ್ಲೇ ಕಾಲಕಳೆದರು. ಆದರೆ ಕಾಲೇಜುಗಳಿಗೆ ಇಲ್ಲದ ಕಾರಣ ಮಳೆಯಲ್ಲೆ ನೆನೆದು ಬಂದ ವಿದ್ಯಾರ್ಥಿಗಳು ಕಾಲೇಜು ಮುಗಿಸಿ ಮಳೆಯಲ್ಲಿ ನೆನೆದೆ ಮನೆ ಹಾಗೂ ಗ್ರಾಮಗಳಿಗೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net